ಹೊನ್ನಾಳಿ: ಗದಗ- ಹೊನ್ನಾಳಿ ರಸ್ತೆ ವಿಸ್ತರಣೆಗೆ ಸಂಬಂಧಿಸಿ ದಂತೆ ಕ್ರಿಯಾಯೋಜನೆ ತಯಾರಿಸಿದ ಯೋಜನಾ ನಿರ್ದೇಶಕರ ಜತೆ ಪರಿಶೀಲನೆ ನಡೆಸುವ ಜತೆಗೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದ ಬಳಿಕವೇ ಅಂತಿನ ತೀರ್ಮಾನಕ್ಕೆ ಬರಲಾಗುವುದು ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.
ಪಟ್ಟಣದ ಎಕೆ ಕಾಲನಿ ಬಳಿ ರಸ್ತೆ ಕಾಮಗಾರಿಯನ್ನು ಗುರುವಾರ ಉಪವಿಭಾಗಾಧಿಕಾರಿ ಚನ್ನಪ್ಪ ಹಾಗೂ ಕೆಶಿಪ್ ಅಧಿಕಾರಿಗಳೊಂದಿಗೆ ವೀಕ್ಷಿಸಿ ಮಾತನಾಡಿದರು. ಹೊನ್ನಾಳಿ ಪಟ್ಟಣದ ಎಕೆ ಕಾಲನಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ರಸ್ತೆಯ ಮಧ್ಯಭಾಗದಿಂದ ಎರಡು ಬದಿಗೆ ತಲಾ 11.5 ಮೀಟರ್ ಅಗಲೀಕರಣ ಮಾಡಲಾಗುತ್ತಿದೆ. ಇದರಲ್ಲಿ ಚರಂಡಿ ಹಾಗೂ ಪಾದಚಾರಿ ರಸ್ತೆಯೂ ಸೇರಿದೆ.
ರಸ್ತೆ ಉದ್ದಕ್ಕೂ ಇರುವ ಏಳು ಕಟ್ಟಡಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದು, ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಕೆಶಿಪ್ ಅಧಿಕಾರಿಗಳು ನಡೆಸುತ್ತಿದ್ದಾರೆ. ಉಳಿದ ಮಾಲೀಕರು ಸ್ವಯಂಪ್ರೇರಿತರಾಗಿ ಕಟ್ಟಡ ತೆರವುಗೊಳಿಸಿದ್ದಾರೆ ಎಂದರು. ಎಕೆ ಕಾಲನಿ ಬಳಿಯ ತಿರುವಿನಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ರಸ್ತೆಯನ್ನು ಮತ್ತಷ್ಟು ಅಗಲಗೊಳಿಸುವ ಅಗತ್ಯವಿದೆ. ಈ ಕುರಿತು ಪೊಲೀಸ್ ಇಲಾಖೆಯೂ ಪತ್ರ ಬರೆದಿದೆ. ತಿರುವಿನಲ್ಲಿರುವ ಎರಡು ಮನೆಗಳನ್ನು ಪೂರ್ಣ ತೆರವುಗೊಳಿಸಿದರೆ ಮಾತ್ರ ಅಗಲೀಕರಣ ಸಂಪೂರ್ಣಗೊಳ್ಳುತ್ತದೆ. ಆ ಮನೆಗಳ ಮಾಲೀಕರಿಗೆ ಪ್ರಸ್ತುತ ಮಾರುಕಟ್ಟೆ ದರದಂತೆ ಸೂಕ್ತ ಪರಿಹಾರ ನೀಡಿ ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗದಗ-ಹೊನ್ನಾಳಿ ನಡುವಿನ 138.2 ಕಿಮೀ ರಸ್ತೆ ಅಗಲೀಕರಣಕ್ಕೆ ಅಂದಾಜು 840 ಕೋಟಿ ರೂ. ಬಿಡುಗಡೆ ಆಗಿದೆ. ಪ್ರಸ್ತುತ ಶೇ.50ರಷ್ಟು ಕೆಲಸ ಪೂರ್ಣಗೊಂಡಿದೆ. ತ್ವರಿತವಾಗಿ ಬಾಕಿ ಕೆಲಸ ಮುಗಿಸಲು ಸೂಚಿಸಲಾಗಿದೆ ರಸ್ತೆಯಲ್ಲಿರುವ ಎಲ್ಲ ಲೋಪದೋಷ ಸರಿಪಡಿಸಿದ ನಂತರವೇ ಯೋಜನೆಯನ್ನು ನಮ್ಮ ಅಧೀನಕ್ಕೆ ಪಡೆಯ ಲಾಗುವುದು ಎಂದು ಸ್ಪಷ್ಟಪಡಿಸಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ಚನ್ನಪ್ಪ, ಕೆಶಿಪ್ ಅಧಿಕಾರಿಗಳಾದ ಪರಮೇಶ್ವರ ನಾಯ್ಕ, ಮಂಜುನಾಥ್, ಶಶಿಕಲಾ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಪಿಎಸ್‌ಐ ಕುಮಾರ್, ಇಂಜಿನಿಯರ್ ದೇವರಾಜ್ ಹಾಗೂ ಸಾರ್ವಜನಿಕರು ಇದ್ದರು.