ಚನ್ನಗಿರಿಯಲ್ಲಿ ರಸ್ತೆ ಒತ್ತುವರಿ ತೆರವು

ಚನ್ನಗಿರಿ ಪಟ್ಟಣದ ಜೂನಿಯರ್ ಕಾಲೇಜು ರಸ್ತೆ ಅತಿಕ್ರಮಣವನ್ನು ಪುರಸಭೆ ತೆರವುಗೊಳಿಸಿತು. ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಹಿರಿಯ ಆಹಾರ ನಿರೀಕ್ಷಕ ಶಿವರುದ್ರಪ್ಪ, ಲೋಕೇಶ್, ವಿಜಯ್‌ಕುಮಾರ್ ಇತರರಿದ್ದರು.road encroachment
ಚನ್ನಗಿರಿ ಪಟ್ಟಣದ ಜೂನಿಯರ್ ಕಾಲೇಜು ರಸ್ತೆ ಅತಿಕ್ರಮಣವನ್ನು ಪುರಸಭೆ ತೆರವುಗೊಳಿಸಿತು. ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಹಿರಿಯ ಆಹಾರ ನಿರೀಕ್ಷಕ ಶಿವರುದ್ರಪ್ಪ, ಲೋಕೇಶ್, ವಿಜಯ್‌ಕುಮಾರ್ ಇತರರಿದ್ದರು.road encroachment
Published on

ಪ್ರಮುಖ ಮುಖ್ಯಾಂಶಗಳು

  • ಅಂಗಡಿ ಮಾಲೀಕರು ಮತ್ತು ಪುರಸಭೆ ಸಿಬ್ಬಂದಿ ನಡುವೆ ವಾಗ್ವಾದ
  • ಪೊಲೀಸ್ ಬಿಗಿ ಬಂದೋಸ್ತ್‌ನಲ್ಲಿ ಕಾರ್ಯಾಚರಣೆ
ಚನ್ನಗಿರಿ: ಪಟ್ಟಣದಲ್ಲಿ ರಸ್ತೆ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಹಾಗೂ ವಾಹನ ಸವಾರರ ಅನುಕೂಲಕ್ಕಾಗಿ, ಜೂನಿಯರ್ ಕಾಲೇಜು ರಸ್ತೆಯ ಚರಂಡಿ ಮೇಲಿದ್ದ ಒತ್ತುವರಿ ಅಂಗಡಿಗಳು ಮತ್ತು ಫುಟ್‌ಪಾತ್ ಅತಿಕ್ರಮಣ ಸ್ಥಳವನ್ನು ಪುರಸಭೆ ಬುಧವಾರ ತೆರವುಗೊಳಿಸಿತು.
ಬೆಳಗ್ಗೆ 6 ಗಂಟೆಯಿಂದಲೇ ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರದೊಂದಿಗೆ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಅಂಗಡಿ ಮಾಲೀಕರು ಮತ್ತು ಪುರಸಭೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಹಾಗೂ ವಾಗ್ವಾದ ನಡೆಯಿತಾದರೂ, ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ತೆರವು ಕಾರ್ಯ ನಡೆಸಲಾಯಿತು.
ಪಟ್ಟಣದ ಫುಟ್‌ಪಾತ್ ಹಾಗೂ ಚರಂಡಿಗಳ ಮೇಲೆ ಗೂಡಂಗಡಿಗಳನ್ನು ಇಟ್ಟುಕೊಂಡು, ವ್ಯಾಪಾರದ ವಸ್ತುಗಳನ್ನು ರಸ್ತೆಯಲ್ಲೇ ಹರಡಿಕೊಂಡು ವ್ಯಾಪಾರ ಮಾಡುತ್ತಿದ್ದರಿಂದ ವಾಹನ ಚಾಲಕರು, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಅಲ್ಲದೆ, ಚರಂಡಿಗಳ ಮೇಲೆ ಅಂಗಡಿಗಳನ್ನು ಇಟ್ಟಿದ್ದರಿಂದ ತ್ಯಾಜ್ಯ ವಸ್ತುಗಳು ತುಂಬಿಕೊಂಡು ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಪುರಸಭೆಗೆ ಹಲವು ದೂರುಗಳು ಬಂದಿದ್ದವು. ಅಂಗಡಿಕಾರರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷೃ ವಹಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪುರಸಭೆ ಹಿರಿಯ ಆಹಾರ ನಿರೀಕ್ಷಕ ಶಿವರುದ್ರಪ್ಪ, ಸಿಬ್ಬಂದಿ ಲೋಕೇಶ್, ವಿಜಯ್‌ಕುಮಾರ್ ಇತರರಿದ್ದರು.

ಮತ್ತೆ ಅತಿಕ್ರಮಿಸಿದರೆ ಜಪ್ತು

ಅಂಗಡಿಕಾರರು ತಮ್ಮ ನಿಗದಿತ ಜಾಗದಲ್ಲಿ ವ್ಯಾಪಾರ ಮಾಡಿದರೆ ಸಾಕು. ದುರಾಸೆಯಿಂದ ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡು, ಸಿಮೆಂಟ್ ಕಾಂಕ್ರಿಟ್ ಹಾಕಿಕೊಳ್ಳುವುದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ರಸ್ತೆ ಒತ್ತುವರಿ ಮಾಡಿದರೆ ಗೂಡಂಗಡಿಗಳನ್ನು ಜಪ್ತು ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net