ಚನ್ನಗಿರಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ, ಲೋಕಾಯುಕ್ತ ಡಿಎಸ್‌ಪಿ ಕಲಾವತಿ, ತಹಸೀಲ್ದಾರ್ ಎನ್.ಜೆ. ನಾಗರಾಜ್, ತಾಪಂ ಇಒ ಎಂ.ಆರ್. ಪ್ರಕಾಶ್ ಇದ್ದರು.
ಚನ್ನಗಿರಿ:ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಮಾಡುವ ಕೆಲಸ ಸ್ವಲ್ಪ ತಡವಾದರೂ ಜನರಿಗೆ ಯವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತ ಇಲಾಖೆಯಿಂದ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಬರುತ್ತಾರೆ. ಅವರನ್ನು ಕಾಯಿಸದೇ ಕೆಲಸವನ್ನು ಆದಷ್ಟು ಬೇಗ ಮಾಡಿಕೊಡಿ. ನಿರ್ಲಕ್ಷೃ ಧೋರಣೆ ಅನುಸರಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರು, ಅಧಿಕಾರಿಗಳು ಕೆಲಸ ಮಾಡಿ ಕೊಡುವವರೆಗೂ ತಾಳ್ಮೆಯಿಂದ ಕಾಯಬೇಕು. ಬದಲಿಗೆ ಅವರಿಗೆ ಆಮಿಷಗಳನ್ನು ತೋರಿಸಿ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಅಧಿಕಾರಿಗಳು ಸ್ಪಂದಿಸದಿದ್ದರೆ ಮೇಲಿನ ಅಧಿಕಾರಿಗಳಿಗೆ ಅರ್ಜಿ ನೀಡಬೇಕು. ಮಧ್ಯವರ್ತಿಗಳನ್ನು ಯಾವುದೇ ಕಾರಣಕ್ಕೂ ನಂಬಿ ಮೋಸ ಹೋಗದಿರಿ. ಅವರಿಂದ ಹಣ ಮತ್ತು ಸಮಯ ವ್ಯರ್ಥವಾಗುತ್ತದೆ ಎಂದು ತಿಳಿಸಿದರು.
ಲೋಕಾಯುಕ್ತ ಕಚೇರಿಗೆ ಪ್ರತಿದಿನ ನೂರಾರು ಕರೆಗಳು ಬರುತ್ತವೆ. ಇದಕ್ಕೆ ನಾವು ಸ್ಪಂದಿಸುವುದಿಲ್ಲ. ನೇರವಾಗಿ ಬಂದು ಅರ್ಜಿ ನೀಡಿದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಕೆಲವು ಸಂದರ್ಭದಲ್ಲಿ ನಿಮ್ಮ ಹೆಸರನ್ನು ಗೌಪ್ಯವಾಗಿಡುತ್ತೇವೆ. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥ ಮಾಡಲು ಅವಕಾಶವಿಲ್ಲ. ಸರ್ಕಾರಿ ಕಾರ್ಯಾಲಯಗಳಲ್ಲಿ ನಡೆಯುತ್ತಿರುವ ವಿಳಂಬ ನೀತಿ, ಸರ್ಕಾರದ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ತಾರತಮ್ಯ, ಕಳಪೆ ಕಾಮಗಾರಿ, ಹಣ ದುರುಪಯೋಗದ ಕುರಿತು ದೂರುಗಳನ್ನು ಅಫಿಡವಿಟ್‌ನೊಂದಿಗೆ ಸಲ್ಲಿಸಬಹುದು ಎಂದರು. ಲೋಕಾಯುಕ್ತರಿಗೆ ಒಟ್ಟು 11 ದೂರು ಬಂದಿದ್ದು, 6 ದೂರುಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು. ಉಳಿದ ದೂರುಗಳನ್ನು ಒಂದು ವಾರದ ಅವಧಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನೀಡಲಾಯಿತು ಎಂದರು.
ತಹಸೀಲ್ದಾರ್ ಎನ್.ಜೆ. ನಾಗರಾಜ್, ತಾಪಂ ಇಒ ಎಂ.ಆರ್. ಪ್ರಕಾಶ್, ಲೋಕಾಯುಕ್ತ ಡಿಎಸ್‌ಪಿ ಕಲಾವತಿ, ಸಿಪಿಐ ಸರಳಾ, ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಲ್ಲಿಕಾರ್ಜುನ, ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕ ರವಿ ಅಥರ್ಗ ಇತರರಿದ್ದರು.