ದೇಶದ ಪ್ರಗತಿಗೆ ಬೇಕು ಧರ್ಮ, ತಂತ್ರಜ್ಞಾನ

ದಾವಣಗೆರೆ ತಾಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 1ಕೋಟಿ ರೂ. ಕೊಡುಗೆ ನೀಡಿದ ಬ್ರಜ್ ಕಿಶೋರ್ ಪ್ರಧಾನ್ ಅವರನ್ನು ಸನ್ಮಾನಿಸಲಾಯಿತು. ಎನ್.ರವಿಕುಮಾರ್, ಸತೀಶ್ ಹಂಪಾಳಿ, ಸುಚೇಂದ್ರ ಪ್ರಸಾದ್ ಇದ್ದರು.
ದಾವಣಗೆರೆ ತಾಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 1ಕೋಟಿ ರೂ. ಕೊಡುಗೆ ನೀಡಿದ ಬ್ರಜ್ ಕಿಶೋರ್ ಪ್ರಧಾನ್ ಅವರನ್ನು ಸನ್ಮಾನಿಸಲಾಯಿತು. ಎನ್.ರವಿಕುಮಾರ್, ಸತೀಶ್ ಹಂಪಾಳಿ, ಸುಚೇಂದ್ರ ಪ್ರಸಾದ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂಎಲ್‌ಸಿ ಎನ್. ರವಿಕುಮಾರ್ ಹೇಳಿಕೆ
  • ಕೋಲ್ಕುಂಟೆ ಗ್ರಾಮದಲ್ಲಿ ಶಾಲಾ ಕೊಠಡಿಗಳ ಉದ್ಘಾಟನೆ
  • ಮಕ್ಕಳಿಗೆ ನೀಡಬೇಕು ಚಾರಿತ್ರೃ ನಿರ್ಮಾಣದ ಶಿಕ್ಷಣ
ದಾವಣಗೆರೆ: ದೇಶವು ಪ್ರಗತಿ ಪಥದಲ್ಲಿ ಮುನ್ನಡೆಯಲು ಧರ್ಮ, ಶಿಕ್ಷಣದ ಜತೆಗೆ ತಂತ್ರಜ್ಞಾನ ಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದರು.
ತಾಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಆಹ್ವಾಹನ ಫೌಂಡೇಶನ್ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ, ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯ ಪಂಚ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳ್ಳಿಗಳು ಉದ್ಧಾರವಾಗದ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ. ಹಾಗಾಗಿ ಗ್ರಾಮೀಣ ಜನರು ತಮ್ಮೂರಿನ ಪರಿಸರ ಕಾಪಾಡಿಕೊಳ್ಳುವ ಜತೆಗೆ ಕೆರೆ-ಕಟ್ಟೆ, ಶಾಲೆಗಳನ್ನು ನಿರ್ಮಿಸಿ ಗ್ರಾಮೋದ್ಧಾರದ ಜತೆಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಒಂದು ಶಾಲೆ ಕಟ್ಟಬಹುದು, ಆದರೆ, ಒಳ್ಳೆಯ ಶಿಕ್ಷಣ ನೀಡದೇ ಹೋದರೆ ಕಟ್ಟಡ ವ್ಯರ್ಥವಾಗುತ್ತದೆ. ಸ್ವಾಮಿ ವಿವೇಕಾನಂದರ ಆಶಯದಂತೆ ಶಾಲೆಗಳಲ್ಲಿ ಮಕ್ಕಳಿಗೆ ಚಾರಿತ್ರೃ ನಿರ್ಮಾಣದ ಶಿಕ್ಷಣ ನೀಡಿದಲ್ಲಿ ಭವ್ಯ ಭಾರತ ನಿರ್ಮಿಸಬಲ್ಲರು ಎಂದರು.
ಹೂವೈ ಟೆಕ್ನೋಲಜಿಸ್ ಇಂಡಿಯಾ ಸಂಸ್ಥೆ ಉಪಾಧ್ಯಕ್ಷ ಸತೀಶ್ ಹಂಪಾಳಿ ಮಾತನಾಡಿ, ಇಲ್ಲಿನ ಮೂಲ ಸೌಕರ್ಯ ಬಳಸಿಕೊಂಡು ಐಎಎಸ್ ಹಾಗೂ ಐಪಿಎಸ್ ಹುದ್ದೆಗೇರುವಂತಹ ಪ್ರತಿಭಾವಂತರನ್ನು ಶಿಕ್ಷಕರು ತಯಾರು ಮಾಡಲಿ ಎಂದು ಹಾರೈಸಿದರು.
ಸಂಸ್ಕಾರ ಭಾರತಿ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಮಾತನಾಡಿ, ಭಾವನೆಗಳ ಬೆಸುಗೆಯಿಂದ ನಿರ್ಮಾಣಗೊಂಡ ಶಾಲಾ ಕಟ್ಟಡ ಗ್ರಾಮದ ಸಾಂಸ್ಕೃತಿಕ ಪರಂಪರೆಯ ತಾಣ ಹಾಗೂ ವಿದ್ಯಾವಂತ, ಬುದ್ಧಿವಂತ ಕುಶಲಿಗಳನ್ನು ತಯಾರಿಸುವ ಕೇಂದ್ರ ಆಗಬೇಕು ಎಂದು ಕಿವಿಮಾತು ಹೇಳಿದರು.
ಚಿತ್ರನಟ ಹಾಗೂ ಕೋಲ್ಕುಂಟೆ ಗ್ರಾಮಾಭ್ಯುದಯ ಸಂಘದ ಗೌರವಾಧ್ಯಕ್ಷ ಸುಚೇಂದ್ರ ಪ್ರಸಾದ್ ಮಾತನಾಡಿ, ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣದ ನಂತರ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸೌರ ವಿದ್ಯುತ್ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಹಾಗೂ ಕೆರೆ ಅಭಿವೃದ್ಧಿ ಮೊದಲಾದ ಕಾರ್ಯಗಳಿಗೆ ಫೌಂಡೇಶನ್ ಮುಂದಾಗಿದೆ. ಗ್ರಾಮದ ಅಭ್ಯುದಯ ಎಂಬುದು ಒಂದು ರಥ ಇದ್ದ ಹಾಗೆ, ಇದನ್ನು ಎಳೆಯಲು ಎಲ್ಲರೂ ಕೈಜೋಡಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಓಂಕಾರಪ್ಪ, ಮಾಜಿ ಸದಸ್ಯ ಎ.ವಿ.ಬಸವರಾಜಪ್ಪ, ಗ್ರಾಮಾಭ್ಯುದಯ ಸಂಘದ ಅಧ್ಯಕ್ಷ ಕೆ.ಜಿ. ಮಂಜುನಾಥ್, ಕಾರ್ಯದರ್ಶಿ ಜಿ.ಎಚ್. ಅಶೋಕ್, ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ, ಎಚ್.ಜೆ. ಬಸವರಾಜ್, ಶಾಮಣ್ಣ, ಗ್ರಾಮವಿಕಾಸ ಸಂಸ್ಥೆ ಕ್ಷೇತ್ರ ಸಂಯೋಜಕ ಹರಪನಹಳ್ಳಿ ವಿರೂಪಾಕ್ಷ ಇತರರಿದ್ದರು. ಪತ್ರಕರ್ತ ಕೆ.ಎಸ್. ಸುರೇಶ್ ಕೋಲ್ಕುಂಟೆ ರಚಿಸಿದ ನಮ್ಮ ಗ್ರಾಮ-ನಮ್ಮ ಹೆಮ್ಮೆ ಕುರಿತ ಗೀತ-ಚಿತ್ರಗುಚ್ಛವನ್ನು ಎಂಎಲ್‌ಸಿ ಎನ್. ರವಿಕುಮಾರ್ ಬಿಡುಗಡೆ ಮಾಡಿದರು.
ಮುಖ್ಯಶಿಕ್ಷಕ ಚಂದ್ರಪ್ಪ ಸ್ವಾಗತಿಸಿದರು, ಛಾಯಾಗ್ರಾಹಕ ಹೋಲೂರ್ ವೀರೇಶ್ ಪ್ರಾಸ್ತಾವಿಕ ಮಾತನಾಡಿದರು, ಸಿಆರ್‌ಪಿ ಬಿ.ಎಸ್. ವೀರೇಶ್ ನಿರೂಪಿಸಿದರು.

ಮಾದರಿ ಗ್ರಾಮ ನಿರ್ಮಾಣಕ್ಕೆ ಸಹಕಾರ

ಆಹ್ವಾಹನ ಫೌಂಡೇಶನ್ ಸಂಸ್ಥಾಪಕ ಹಾಗೂ ಸಿಇಒ ಬ್ರಜ್ ಕಿಶೋರ್ ಪ್ರಧಾನ್ ಶಾಲಾ ಕೊಠಡಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿ, ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕಲ್ಪಿಸುವುದರೊಂದಿಗೆ ಕೋಲ್ಕುಂಟೆ ಗ್ರಾಮವನ್ನು ಜಿಲ್ಲೆಯಲ್ಲೇ ಮಾದರಿ ಗ್ರಾಮವಾಗಿ ಮಾಡಲು ಅಗತ್ಯ ಸಹಕಾರ ನೀಡಲಿದ್ದೇವೆ. ರಾಜ್ಯದ ಪ್ರತಿ ಜಿಲ್ಲೆಯೂ ಈ ಗ್ರಾಮದತ್ತ ನೋಡುವಂತೆ ಮಾಡಬೇಕಿದೆ. ಸುಚೇಂದ್ರ ಪ್ರಸಾದ್ ಅವರು ತಮ್ಮ ಹಳ್ಳಿಯ ಪ್ರಗತಿಯ ಬಗ್ಗೆ ಕನಸು ಕಾಣುತ್ತಿದ್ದಾರೆ. ಪ್ರತಿಯೊಬ್ಬರೂ ಅವರಂತೆ ಯೋಚಿಸಿದರೆ ಪ್ರತಿ ಗ್ರಾಮಗಳನ್ನೂ ರಾಮರಾಜ್ಯವಾಗಿಸಬಹುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net