ಜೀತವಿಮುಕ್ತರಿಗೆ ದೊರೆಯದ ಪುನರ್ವಸತಿ

ಪುನರ್ವಸತಿ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಚನ್ನಗಿರಿಯಲ್ಲಿ ಜೀತವಿಮುಕ್ತರು ಪ್ರತಿಭಟನೆ ನಡೆಸಿದರು. ಬೆಂಕಿಕೆರೆ ಬಿ.ಎನ್. ಚಂದ್ರಪ್ಪ, ಪ್ರಕಾಶ್, ಅತೀಕ್ ಉಲ್ಲಾಖಾನ್, ಕರಿಯಪ್ಪ, ನುರುಲ್ಲಾ ಇತರರಿದ್ದರು. survival
ಪುನರ್ವಸತಿ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಚನ್ನಗಿರಿಯಲ್ಲಿ ಜೀತವಿಮುಕ್ತರು ಪ್ರತಿಭಟನೆ ನಡೆಸಿದರು. ಬೆಂಕಿಕೆರೆ ಬಿ.ಎನ್. ಚಂದ್ರಪ್ಪ, ಪ್ರಕಾಶ್, ಅತೀಕ್ ಉಲ್ಲಾಖಾನ್, ಕರಿಯಪ್ಪ, ನುರುಲ್ಲಾ ಇತರರಿದ್ದರು. survival
Published on

ಪ್ರಮುಖ ಮುಖ್ಯಾಂಶಗಳು

  • ಚನ್ನಗಿರಿಯಲ್ಲಿ ಪ್ರತಿಭಟನೆ, ತಹಸೀಲ್ದಾರ್‌ಗೆ ಮನವಿ
  • ಅರ್ಜಿ ಮರುಪರಿಶೀಲಿಸಿ ಸೌಲಭ್ಯ ಒದಗಿಸಲು ಡಿಸಿಗೆ ಒತ್ತಾಯ
ಚನ್ನಗಿರಿ: ತಾಲೂಕಿನ ಜೀತವಿಮುಕ್ತರಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ನಿರ್ಲಕ್ಷೃ ವಹಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ಜೀತವಿಮುಕ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ಬೆಂಕಿಕೆರೆ ಬಿ.ಎನ್. ಚಂದ್ರಪ್ಪ ಮಾತನಾಡಿ, ಜೀತ ವಿಮುಕ್ತರಿಗೆ ನಿವೇಶನ, ಮನೆ, ಸಾಲಸೌಲಭ್ಯ, ಭೂಮಿ ಮಂಜೂರಾತಿ ಹಾಗೂ ಮಂಜೂರಾದ ಜಮೀನನ್ನು ಅಭಿವೃದ್ಧಿಪಡಿಸಲು ಆರ್ಥಿಕ ನೆರವು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಜೀತದಾಳುಗಳ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ಇವರತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ನಲ್ಲೂರು ಗ್ರಾಮದ ಹಲವರು ಜೀತಪದ್ಧತಿಯಿಂದ ವಿಮುಕ್ತರಾಗಿದ್ದು, ಸರ್ಕಾರ ಅವರಿಗೆ ಬಿಡುಗಡೆ ಪತ್ರ ಹಾಗೂ ಗುರುತಿನ ಚೀಟಿಯನ್ನೂ ನೀಡಿದೆ. ಈ ಸಂತ್ರಸ್ತರು 2016ರಿಂದಲೂ ಸೌಲಭ್ಯಗಳಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ.
ನಲ್ಲೂರು ಗ್ರಾಮದ ಸವೇ ನಂ.102 ರಲ್ಲಿ 33 ಎಕರೆ ಗೋಮಾಳ ಜಮೀನು ಇದೆ. ಇದರಲ್ಲಿ ಸ್ಮಶಾನ, ವಿದ್ಯಾರ್ಥಿನಿಲಯ, ಉದ್ಯಾನವನ ಹಾಗೂ ನಿವೇಶನ ರಹಿತರಿಗೆ ಸೈಟು ಹಂಚಿಕೆ ಮಾಡಲು ಜಮೀನನ್ನು ಮೀಸಲಿಡಲಾಗಿದೆ. ಉಳಿದ 2 ಎಕರೆ 23 ಗುಂಟೆ ಜಮೀನಿನಲ್ಲಿ ಇಲಾಖೆಯಿಂದ ನಕ್ಷೆಯನ್ನೂ ತಯಾರಿಸಿಕೊಡಲಾಗಿದೆ. ಈ ಹಿಂದೆ ಜಿಲ್ಲಾ ಉಪವಿಭಾಗಾಧಿಕಾರಿಗಳು ಕಾನೂನು ಸಲಹೆ ಪಡೆದು ಜಮೀನು ಮಂಜೂರು ಮಾಡುವ ಭರವಸೆ ನೀಡಿದ್ದರು. ಆದರೆ, ಜಿಲ್ಲಾಧಿಕಾರಿ ಮಾತ್ರ ಇದನ್ನು ಮಂಜೂರು ಮಾಡುವಲ್ಲಿ ನಿರ್ಲಕ್ಷೃ ತೋರಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಜಿಲ್ಲಾಧಿಕಾರಿಗಳು ಸೂಚಿಸಿದಂತೆ ಚನ್ನಗಿರಿ ಕಸಬಾ ಹೋಬಳಿ ಎನ್. ಗಾಣದಕಟ್ಟೆ ಸರ್ವೇ ನಂ.18ರಲ್ಲಿ 577 ಎಕರೆ ಜಮೀನು ಇರುವುದನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ 422 ಎಕರೆ ಊರ ದನಗಳ ಮೇವಿಗಾಗಿ ಮುಫತ್ತು ಎಂದು ಪಹಣಿಯಲ್ಲಿದೆ. ತಹಸೀಲ್ದಾರ್ ಅವರು ಈ ಸ್ಥಳ ಪರಿಶೀಲನೆ ನಡೆಸಿದ್ದರೂ, ಮುಂದಿನ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಂದ್ರಪ್ಪ ತಿಳಿಸಿದರು.
ಕರ್ನಾಟಕ ಭೂ ಕಂದಾಯ ಅಧಿನಿಯಮ 1963ರ ಕಲಂ 5ರ ಅನ್ವಯ ಇದನ್ನು ಮೀಸಲು ಅರಣ್ಯ ಎಂದು ಘೋಷಿಸದಂತೆ ಧಾರವಾಡದ ಅರಣ್ಯ ವ್ಯವಸ್ಥಾಪನಾಧಿಕಾರಿಗಳಿಗೆ ಈಗಾಗಲೇ ತಕರಾರು ಅರ್ಜಿ ಸಲ್ಲಿಸಲಾಗಿದೆ. ಪ್ರಸ್ತುತ ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆ ಯಿರುವುದರಿಂದ ಜಮೀನು ಮಂಜೂರು ಮಾಡಲು ಕಾನೂನಾತ್ಮಕ ಅವಕಾಶವಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಜೀತವಿಮುಕ್ತರ ಅರ್ಜಿಯನ್ನು ಮರು ಪರಿಶೀಲಿಸಿ, ಅವರಿಗೆ ಸಿಗಬೇಕಾದ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಕೊಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಂತರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜೀತವಿಮುಕ್ತರಾದ ಪ್ರಕಾಶ್, ಅತೀಕ್ ಉಲ್ಲಾಖಾನ್, ಕರಿಯಪ್ಪ, ನುರುಲ್ಲಾ, ಫಯಾಜ್, ಬಸವರಾಜಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net