ಸಂಗೀತ ಶಿಕ್ಷಕರ ನೇಮಕಾತಿಗೆ ಗ್ರಹಣ

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಶ್ರೀ ಗುರು ಕುಮಾರೇಶ್ವರ ಅಂಧರ ಸಂಗೀತ ಕಲಾವಿದರ ಸಂಘದ ಅಧ್ಯಕ್ಷ ಪ್ರಭುಶಂಕರ ಮಾತನಾಡಿದರು. ಸದಸ್ಯರಾದ ಸತ್ಯವತಿ ದೇಶಪಾಂಡೆ, ಶ್ರೀಶೈಲ ಬಿರಾದಾರ್, ರಾಜಕುಮಾರ್ ಇದ್ದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಶ್ರೀ ಗುರು ಕುಮಾರೇಶ್ವರ ಅಂಧರ ಸಂಗೀತ ಕಲಾವಿದರ ಸಂಘದ ಅಧ್ಯಕ್ಷ ಪ್ರಭುಶಂಕರ ಮಾತನಾಡಿದರು. ಸದಸ್ಯರಾದ ಸತ್ಯವತಿ ದೇಶಪಾಂಡೆ, ಶ್ರೀಶೈಲ ಬಿರಾದಾರ್, ರಾಜಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 15 ವರ್ಷದಿಂದ ಹುದ್ದೆಗಳನ್ನು ತುಂಬದ ಸರ್ಕಾರ
  • ಸಂಗೀತ ಪದವಿ, ಪಿಎಚ್‌ಡಿ ಕೋರ್ಸ್‌ಗಳನ್ನು ಕೈಬಿಡಿ
  • ಅಂಧರ ಸಂಗೀತ ಕಲಾವಿದರ ಸಂಘದ ಆಗ್ರಹ
ದಾವಣಗೆರೆ: ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು, ವಿವಿಧ ವಸತಿ ಶಾಲೆಗಳು, ಅನುದಾನಿತ ಶಾಲೆ-ಕಾಲೇಜುಗಳಿಗೆ ಸಂಗೀತ ಶಿಕ್ಷಕರನ್ನು ನೇಮಿಸಬೇಕು ಎಂದು ಅಖಿಲ ಕರ್ನಾಟಕ ಶ್ರೀ ಗುರು ಕುಮಾರೇಶ್ವರ ಅಂಧರ ಸಂಗೀತ ಕಲಾವಿದರ ಸಂಘದ ಅಧ್ಯಕ್ಷ ಪ್ರಭುಶಂಕರ ಒತ್ತಾಯಿಸಿದರು.
ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 1,022ಕ್ಕೂ ಹೆಚ್ಚು ಸಂಗೀತ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸಂಗೀತ ಶಿಕ್ಷಕರ ನೇಮಕಾತಿ ಪ್ರಕ್ರಿಯೆ 2010ರಲ್ಲಿ ನಡೆದಿದ್ದು ಬಿಟ್ಟರೆ 15 ವರ್ಷವಾದರೂ ಮರು ನೇಮಕಾತಿ ನಡೆದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ವಿಶೇಷ ಸಂಗೀತ ಪರೀಕ್ಷೆಯಲ್ಲಿ ಸೀನಿಯರ್ ಗ್ರೇಡ್, ವಿದ್ವತ್, ವಿಶಾರದ, ಸಂಗೀತ ಅಲಂಕಾರ ಹಾಗೂ ವಿವಿಗಳು ನಡೆಸುವ ಬಿಎ ಮ್ಯೂಸಿಕ್, ಎಂ.ಎ. ಮ್ಯೂಸಿಕ್ ಮೊದಲಾದ ಪದವಿ ಮುಗಿಸಿದವರು ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದಾರೆ.
ಸಂಗೀತ ಶಿಕ್ಷಕರಾಗುವ ಅರ್ಹತೆಯುಳ್ಳ 5 ಸಾವಿರಕ್ಕೂ ಹೆಚ್ಚು ಕಲಾವಿದರು ಪದವಿ ಮುಗಿಸಿ ಮನೆಯಲ್ಲೇ ಕೂತಿದ್ದಾರೆ. ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸರ್ಕಾರ ಗಮನ ಹರಿಸಿಲ್ಲ.
ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಿಸಬೇಕು. ನೇಮಕಾತಿ ಮಾಡದಿದ್ದಲಿ ಸರ್ಕಾರ ನಡೆಸುವ ಎಲ್ಲ ಸಂಗೀತ ಪರೀಕ್ಷೆಗಳನ್ನು ನಿಲ್ಲಿಸಬೇಕು. ಸರ್ಕಾರ ಹಾಗೂ ಜನಪ್ರತಿನಿಧಿಗಳ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಬೇಕು. ರಾಜ್ಯದ ಎಲ್ಲ ವಿವಿಗಳಲ್ಲಿ ಸಂಗೀತ ಪದವಿಗಳಾದ ಬಿಎ ಮ್ಯೂಸಿಕ್, ಎಂ.ಎ ಮ್ಯೂಸಿಕ್ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ವಸತಿ ಶಾಲೆಗಳಲ್ಲಿ ಹಾಗೂ ಕೆಪಿಎಸ್ ಶಾಲೆಗಳಲ್ಲಿ ಹೊಸದಾಗಿ ಸಂಗೀತ ಶಿಕ್ಷಕರ ಹುದ್ದೆಗಳನ್ನು ಸೇರ್ಪಡೆ ಮಾಡಿ ನೇಮಕ ಮಾಡಬೇಕು. ಸರ್ಕಾರ ಸಂಗೀತ ಪದವೀಧರರ ಬೇಡಿಕೆಗಳನ್ನು ಈಡೇರಿಸಿದ್ದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಸತ್ಯವತಿ ದೇಶಪಾಂಡೆ, ಶ್ರೀಶೈಲ ಬಿರಾದಾರ್, ರಾಜಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net