ಪಡಿತರ ಅಕ್ಕಿ, ರಾಗಿ ಕಾಳಸಂತೆಯಲ್ಲಿ ಮಾರಾಟ

ದಾವಣಗೆರೆ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮರ್ಥ ಶಾಮನೂರು, ಶಾಮನೂರು ಟಿ. ಬಸವರಾಜ್, ಮಂಜುನಾಥ್, ನಂಜಾ ನಾಯ್ಕ್, ರಾಜೇಶ್ವರಿ, ರೇಷ್ಮಾ ಕೌಸರ್ ಇದ್ದರು.
ದಾವಣಗೆರೆ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮರ್ಥ ಶಾಮನೂರು, ಶಾಮನೂರು ಟಿ. ಬಸವರಾಜ್, ಮಂಜುನಾಥ್, ನಂಜಾ ನಾಯ್ಕ್, ರಾಜೇಶ್ವರಿ, ರೇಷ್ಮಾ ಕೌಸರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಗತ್ಯ ಕ್ರಮಕ್ಕೆ ಶಾಮನೂರು ಟಿ. ಬಸವರಾಜ್ ಸೂಚನೆ
  • ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ಪಡಿತರ ಅಕ್ಕಿ ಮತ್ತು ರಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇದನ್ನು ತಡೆಯಲು ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ಮಾತನಾಡಿ, ಕಾಳಸಂತೆ ದಂಧೆ ಹೆಚ್ಚಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇವುಗಳ ವಿರುದ್ಧ ವಿಜಿಲೆನ್ಸ್ ಹಾಗೂ ಎಸಿ ನೇತೃತ್ವದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈಗಾಗಲೇ 34 ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದ್ದು, ಕೆಲವು ಪ್ರಕರಣಗಳಲ್ಲಿ ಸೂಕ್ತ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ ಎಂದರು.
ಬೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ತಿಪ್ಪೇಸ್ವಾಮಿ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 523811 ಫಲಾನುಭವಿಗಳಿದ್ದು, ಇದಕ್ಕಾಗಿ 25.58 ಕೋಟಿ ರೂ. ವೆಚ್ಚ ಹೊಂದಾಣಿಕೆ ಮಾಡಿದೆ. ಯೋಜನೆಯ ಅರ್ಹತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಇಲಾಖೆಯ ವತಿಯಿಂದ ವಿಶೇಷ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ 217 ಜನ ಮೀಟರ್ ರೀಡರ್‌ಗಳು ಮನೆ-ಮನೆಗೆ ಭೇಟಿ ನೀಡಿ ಈ ಆ್ಯಪ್ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ. ಬಾಡಿಗೆ ಮನೆ ಅಥವಾ ಸ್ವಂತ ಮನೆಯೇ ಎಂಬುದನ್ನು ಸ್ಥಳದಲ್ಲೇ ಖಚಿತಪಡಿಸಿಕೊಂಡು ಆ್ಯಪ್‌ನಲ್ಲಿ ಮಾಹಿತಿ ಅಪ್‌ಡೇಟ್ ಮಾಡಲಾಗುತ್ತಿದೆ ಎಂದು ಹೇಳಿದರು.
ವಿಜಿಲೆನ್ಸ್ ತಂಡ ಸಣ್ಣ ಸಣ್ಣ ಮನೆಗಳಿಗೆ ಮನ ಬಂದಂತೆ ದಂಡ ವಿಧಿಸುತ್ತಿದೆ. ಗೃಹಜ್ಯೋತಿ ಯೋಜನೆ ಇರುವ ಮನೆಗಳಿಗೆ 10 ಸಾವಿರದಿಂದ 30 ಸಾವಿರದ ವರೆಗೆ ವಿದ್ಯುತ್ ಬಿಲ್ ಬರುತ್ತಿದೆ ಎಂದು ಸಮಿತಿ ಸದಸ್ಯ ಲಿಯಾಖತ್ ಹೇಳಿದರು.
ಸಮಿತಿ ಉಪಾಧ್ಯಕ್ಷ ಮಂಜುನಾಥ್, ನಂಜಾ ನಾಯ್ಕ್, ರಾಜೇಶ್ವರಿ, ಅನೀಸ್ ಪಾಷಾ, ಸದಸ್ಯರಾದ ಶಶಿಕಲಾ, ಡೋಲಿ ಚಂದ್ರು, ಗಿರೀಶ್, ಉಮೇಶ್, ಷಂಷೀರ್ ಅಹ್ಮದ್, ಲಿಯಾಖತ್ ಆಲಿ, ರಾಘವೇಂದ್ರ ಗೌಡ, ಶ್ರೀನಿವಾಸ್, ನೀಲಗಿರಿಯಪ್ಪ ಇದ್ದರು.

ಸಣ್ಣ ತಪ್ಪಿಗೆ ಬೇಡ ಭಾರಿ ದಂಡ

ಹೊಸದಾಗಿ ಮನೆ ಕಟ್ಟುವಾಗ ಅಥವಾ ಸಣ್ಣಪುಟ್ಟ ದುರಸ್ತಿ ಕೆಲಸಗಳಿಗಾಗಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯದೆ ವಿದ್ಯುತ್ ಬಳಸುವ ರೈತರು ಮತ್ತು ಸಾರ್ವಜನಿಕರಿಗೆ ವಿಜಿಲೆನ್ಸ್ ಅಧಿಕಾರಿಗಳು 50 ಸಾವಿರದಿಂದ 75 ಸಾವಿರ ವರೆಗೆ ದಂಡ ವಿಧಿಸುತ್ತಾರೆ. ಬಡವರು, ರೈತರು ಕಷ್ಟಪಟ್ಟು ಮನೆ ಕಟ್ಟುವಾಗ ಸಣ್ಣಪುಟ್ಟ ತಪ್ಪುಗಳಿಗಾಗಿ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸುವುದು ಸೂಕ್ತವಲ್ಲ. ಮೊದಲ ಬಾರಿಗೆ ತಪ್ಪು ಮಾಡಿದಾಗ ತಿಳಿವಳಿಕೆ ನೀಡಿ, ಎಚ್ಚರಿಕೆ ಕೊಡಬೇಕು. ಆದಾಗ್ಯೂ ನಿಯಮ ಉಲ್ಲಂಘನೆ ಮುಂದುವರಿದಲ್ಲಿ ಮಾತ್ರ ದಂಡ ವಿಧಿಸಬೇಕು ಎಂದು ಶಾಸಕ ಸಮರ್ಥ ಶಾಮನೂರು ತಿಳಿಸಿದರು.
ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲು ಆಹಾರ ನಿರೀಕ್ಷಕರಿಗೆ ಪ್ರತಿ ತಿಂಗಳು ಅಗಿಂದಾಗ್ಗೆ ಪಡಿತರ ಅಂಗಡಿಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಜಿಪಿಎಸ್ ಆಧಾರಿತ ಫೋಟೋಗಳನ್ನು ಅಧಿಕೃತ ಗ್ರೂಪ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ಲೋಪವೆಸಗುವ ಅಂಗಡಿಗಳ ವಿರುದ್ಧ ತಕ್ಷಣವೇ ಅಮಾನತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯುವ ವಿಧಾನವನ್ನು ಸುಲಭವಾಗಿ ಅರ್ಥೈಸಲು ಸರಳವಾದ ಅನಿಮೇಷನ್ ವಿಡಿಯೋಗಳು ಹಾಗೂ ಚೆಕ್‌ಲಿಸ್ಟ್ ಮಾದರಿಯ ಮಾಹಿತಿಯನ್ನು ಎಲ್ಲ ಕಾಲೇಜುಗಳಲ್ಲಿ ಪ್ರಸಾರ ಮಾಡುವಂತೆ ಹೇಳಿದರು.
ಅಧ್ಯಕ್ಷ ಬಸವರಾಜ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮರಣದ ಮಾಹಿತಿ ನೀಡುವಷ್ಟರಲ್ಲಿ ಫಲಾನುಭವಿಗಳ ಖಾತೆಗೆ ಮೂರ್ನಾಲ್ಕು ತಿಂಗಳ ಹಣ ಜಮೆಯಾಗುತ್ತಿರುವ ಉದಾಹರಣೆಗಳಿದ್ದು, ಇಂತಹ ಲೋಪಗಳನ್ನು ತಡೆಯಲು ಸಾಫ್ಟ್ೃವೇರ್ ಮಟ್ಟದಲ್ಲೇ ಸುಧಾರಣೆ ತರಬೇಕಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ದೇಶನ ಹಾಗೂ ಹಣಕಾಸು ಇಲಾಖೆಯಿಂದ ಸುತ್ತೋಲೆ ಹೊರಡಿಸುವಂತೆ ಒತ್ತಾಯಿಸಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net