ಪಡಿತರ ಅಕ್ಕಿ ಸಿಕ್ಕರೆ ಕಾರ್ಡ್ ರದ್ದು

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಎಚ್ಚರಿಕೆ
meeting
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸಿ.ಎಚ್. ಶ್ರೀನಿವಾಸ್ ಮಾತನಾಡಿದರು. ಎಂ.ಆರ್. ಪ್ರಕಾಶ್, ಜಬೀವುಲ್ಲಾ ಇದ್ದರು.meeting
Published on: 

ಚನ್ನಗಿರಿ: ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅವರ ಪಡಿತರ ಚೀಟಿ ರದ್ದುಪಡಿಸಲಾಗುವುದು. ಅಕ್ಕಿ ಖರೀದಿಸಿದ ವಾಹನಗಳನ್ನು ಜಪ್ತು ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಎಚ್ಚರಿಸಿದರು.

ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ನಡೆಸಿದ ಅವರು, ಈಗಾಗಲೇ ಅಕ್ಕಿ ಸಾಗಿಸುತ್ತಿದ್ದ 2 ಬೊಲೆರೊ ಹಾಗೂ 5 ಆಟೋಗಳನ್ನು ಜಪ್ತು ಮಾಡಲಾಗಿದ್ದು, ಫಲಾನುಭವಿಗಳ ವಿವರ ಪಡೆದು ಅವರ ಪಡಿತರ ಚೀಟಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಬಡವರ ಹಸಿವು ನೀಗಿಸಲು ಸರ್ಕಾರ ಉಚಿತ ಅಕ್ಕಿ ನೀಡುತ್ತಿದ್ದರೆ, ಕೆಲವರು ಅದನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅನ್ನಭಾಗ್ಯ ಆ್ಯಪ್ ಬಿಡುಗಡೆ ಮಾಡಿದ್ದು, ಪಡಿತರದಾರರು ಕೆವೈಸಿ ಮಾಡಲು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುವ ಅಗತ್ಯವಿಲ್ಲ. ತಾಲೂಕಿನಲ್ಲಿ ಈಗಾಗಲೇ 194 ಫಲಾನುಭವಿಗಳು ಆ್ಯಪ್ ಬಳಸುತ್ತಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯಬೇಕು. ಪಡಿತರ ಪಡೆಯಲು ಸ್ವಂತ ಮೊಬೈಲ್ ಹೊಂದಿರಬೇಕು ಎಂಬ ಕಡ್ಡಾಯ ಇಲ್ಲ. ಸಾರ್ವಜನಿಕರು ಆತಂಕಪಡದೆ ಎಂದಿನಂತೆ ಪಡಿತರ ಪಡೆಯಬಹುದು ಎಂದು ಸ್ಪಷ್ಟಪಡಿಸಿದರು. ಜತೆಗೆ ತಾಲೂಕಿನಲ್ಲಿ 27,538 ಪದವೀಧರರಿಗೆ 82.61 ಲಕ್ಷ ರೂ. ಹಾಗೂ 473 ಡಿಪ್ಲೊಮಾ ಮಾಡಿದವರಿಗೆ 7.09 ಲಕ್ಷ ರೂ. ಧನಸಹಾಯ ನೀಡಲಾಗಿದೆ ಎಂದರು. ತಾಪಂ ಇಒ ಎಂ.ಆರ್. ಪ್ರಕಾಶ್, ಸಮಿತಿ ಸದಸ್ಯರಾದ ಚಂದ್ರಪ್ಪ ಗೌಡ, ಉಮಾಪತಿ ನಾಯ್ಕ, ಅಂಜನಪ್ಪ, ಸತೀಶ್, ಮಧು, ಸ್ವಾಮಿ ಹಾಗೂ ಗ್ಯಾರಂಟಿ ಯೋಜನೆ ಅಧಿಕಾರಿಗಳು ಇದ್ದರು.

40.18 ಲಕ್ಷ ರೂ. ಸರ್ಕಾರಕ್ಕೆ ವಾಪಸ್

ತಾಲೂಕಿನಲ್ಲಿ ಮೃತಪಟ್ಟ 715 ಗೃಹಲಕ್ಷ್ಮೀ ಫಲಾನುಭವಿಗಳಿಂದ 40.18 ಲಕ್ಷ ರೂ. ವಾಪಸ್ ಪಡೆದು ಸರ್ಕಾರಕ್ಕೆ ಜಮೆ ಮಾಡಲಾಗಿದೆ ಎಂದು ಸಿ.ಎಚ್. ಶ್ರೀನಿವಾಸ್ ತಿಳಿಸಿದರು. ತಾಲೂಕಿನಲ್ಲಿ 79,924 ಮಹಿಳೆಯರು ಅರ್ಜಿ ಸಲ್ಲಿಸಿದ್ದು, 78,223 ಫಲಾನುಭವಿಗಳ ಖಾತೆಗೆ ತಿಂಗಳಿಗೆ 15.64 ಕೋಟಿ ರೂ. ಜಮೆ ಮಾಡಲಾಗುತ್ತಿದೆ. ಐಟಿ, ಜಿಎಸ್‌ಟಿ ಪಾವತಿದಾರರು (1,583) ಹಾಗೂ ಯಜಮಾನಿ ಹೆಸರು ಬದಲಾಗದ (98) ಒಟ್ಟು 1,701 ಜನರಿಗೆ ಹಣ ಜಮೆಯಾಗಿಲ್ಲ. ಇವರು ಎನ್‌ಪಿಸಿಐ ಮಾಡಿಸಬೇಕು ಎಂದು ಹೇಳಿದರು.

ಪದಾಧಿಕಾರಿಗಳ ಸಭೆ

ತಾಲೂಕಿನ 61 ಗ್ರಾಮ ಪಂಚಾಯಿತಿಗಳಲ್ಲೂ ಅಭಿವೃದ್ಧಿ ಅಧಿಕಾರಿಗಳ ಮೂಲಕ ಭಾರತ್ ಜೋಡೋ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪದಾಧಿಕಾರಿಗಳ ಸಭೆಯನ್ನು ಅ.27ರಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದ್ದು, ನವೆಂಬರ್‌ನಿಂದ ಸಕ್ರಿಯವಾಗಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಿ.ಎಚ್. ಶ್ರೀನಿವಾಸ್ ತಿಳಿಸಿದರು.

ಕೆಲ ಕೆಎಸ್‌ಆರ್‌ಟಿಸಿ ಬಸ್ ಚಾಲಕ-ನಿರ್ವಾಹಕರು ಮಹಿಳೆಯರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದೆ ಕೆರೆಬಿಳಚಿ ಗ್ರಾಮದ ವಿದ್ಯಾರ್ಥಿಗಳು ಒಂದೂವರೆ ಕಿ.ಮೀ ನಡೆದುಕೊಂಡು ಹೋಗುವಂತಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ತಕ್ಷಣ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಬೇಕು.
ಜಬೀವುಲ್ಲಾ, ತಾಲೂಕು ಗ್ಯಾರಂಟಿ ಯೋಜನೆ ಉಪಾಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net