ಭಾರತ್ ಜೋಡೋ ಸಂಘಗಳ ತ್ವರಿತ ನೋಂದಣಿ

ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ
ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ನಾಲ್ಕು ವಾರದಲ್ಲಿ ಶೇ.ನೂರರ ಗುರಿ ಸಾಧಿಸಿ
  • ಸರ್ಕಾರಿ ಕಚೇರಿಗಳನ್ನು ಬಳಸಿ ಯುವಕರನ್ನು ಸಂಘಟಿಸಿ
  • ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ
ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ‘ಭಾರತ್ ಜೋಡೋ ಯುವ ಸಂಘಗಳ’ (ಯೂತ್ ಕ್ಲಬ್) ನೋಂದಣಿ ಪ್ರಕ್ರಿಯೆಯನ್ನು 4 ವಾರಗಳಲ್ಲಿ ಮುಗಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ ಕುರಿತು ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
ಆಗಸ್ಟ್ 15ರ ಒಳಗಾಗಿ ಹೊಸ ಸಂಘಗಳ ನೋಂದಣಿ ಮತ್ತು ಪ್ರಮಾಣಪತ್ರ ವಿತರಣೆಗೆ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ವಿಶೇಷ ಸಭೆ ಕರೆಯಬೇಕು. 16-35 ವರ್ಷದವರೆಗಿನ ಯುವಕ-ಯುವತಿಯರು ಸೇರಿ ಎಲ್ಲಾ ಸಮುದಾಯದವರನ್ನು ಒಳಗೊಂಡಂತೆ ನೂತನ ಸಹಕಾರ ಸಂಘಗಳನ್ನು ರಚಿಸಿ, ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಪ್ರತಿ ಗ್ರಾಪಂನಲ್ಲಿ ತಲಾ ಒಂದು ಸಂಘ, ಪ್ರತಿ ಪಟ್ಟಣ ಪಂಚಾಯಿತಿಯಲ್ಲಿ ಸರಾಸರಿ 4ಸಾವಿರ ಜನಸಂಖ್ಯೆ, ಪುರಸಭೆಯಲ್ಲಿ ಸರಾಸರಿ 6ಸಾವಿರ ಜನಸಂಖ್ಯೆಗೆ, ನಗರಸಭೆಯಲ್ಲಿ 8ಸಾವಿರ ಜನಸಂಖ್ಯೆಗೆ, ನಗರಪಾಲಿಕೆಯಲ್ಲಿ 10 ಸಾವಿರ ಜನಸಂಖ್ಯೆಗೆ ಒಂದೊಂದು ಸಂಘ ಸ್ಥಾಪಿಸಲು ಕ್ರಮವಹಿಸುವಂತೆ ತಿಳಿಸಿದರು.
ಆಯ್ಕೆಯಾದ ಯುವ ಸಂಘಗಳ ತಂಡಗಳು, ಪೌರಕಾರ್ಮಿಕರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆ.15ರ ಸ್ವಾತಂತ್ರ್ಯ ದಿನಾಚರಣೆಯ ಪಥಸಂಚಲನದಲ್ಲಿ ಭಾಗವಹಿಸಬೇಕು. ಇದೇ ವೇಳೆ ಸರ್ಕಾರದ ಪ್ರಮುಖ ಯೋಜನೆಗಳು, ಎಸ್‌ಐಆರ್ ಕುರಿತು ಐಇಸಿ ಚಟುವಟಿಕೆ, ಜಾಗೃತಿ ನಾಟಕಗಳನ್ನು ಆಯೋಜಿಸಬೇಕು. ಗ್ರಾಪಂಗಳನ್ನು ಕೇಂದ್ರವಾಗಿರಿಸಿ ಶಾಲಾ-ಕಾಲೇಜುಗಳು, ಸಮುದಾಯ ಭವನಗಳು, ದೇವಸ್ಥಾನ, ಸರ್ಕಾರಿ ಕಚೇರಿಗಳನ್ನು ಬಳಸಿ ಯುವಕರನ್ನು ಸಂಘಟಿಸಬೇಕು ಎಂದರು.
ಕ್ರೀಡೆ ಮತ್ತು ಫಿಟ್‌ನೆಸ್, ಸಮುದಾಯ ಅಭಿವೃದ್ಧಿ, ಅರಣ್ಯ-ಪರಿಸರ ಸಂರಕ್ಷಣೆ, ಆರೋಗ್ಯ-ಯೋಗಕ್ಷೇಮ, ಸಂಸ್ಕೃತಿ- ಸಾಮಾಜಿಕ ಸಾಮರಸ್ಯ, ಕೌಶಲ ಮತ್ತು ಯುವ ಸಬಲೀಕರಣ, ಸರ್ಕಾರಿ ಕಾರ್ಯಕ್ರಮಗಳು, ವಿಪತ್ತು ನಿರ್ವಹಣೆ ಮತ್ತು ಪರಿಹಾರ, ಜಲ ಸಂರಕ್ಷಣೆ ಚಟುವಟಿಕೆಗಳು, ಗ್ರಾಹಕ ಜಾಗೃತಿ ಅಭಿಯಾನಗಳು, ಸೈಬರ್ ಸುರಕ್ಷತೆ, ಸಂಚಾರ ಜಾಗೃತಿ ಅಭಿಯಾನ, ಧೂಮಪಾನ, ಮಧ್ಯಪಾನ , ಡ್ರಗ್ಸ್ ವಿರುದ್ಧದ ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ತಯಾರಿಸಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಡಿಡಿಪಿಐ ಕೃಷ್ಣ ಪ್ರಸಾದ್, ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಇತರೆ ಅಧಿಕಾರಿಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net