ಭಿಕ್ಷಾವರ್ತಿಮಠಗೆ ರಾಜ್ಯೋತ್ಸವ ಪ್ರಶಸ್ತಿ

ಅಮೃತ ಮಹೋತ್ಸವದಲ್ಲಿ ಒಕ್ಕೊರಲ ಬೆಂಬಲ, ಹರಿಹರದಲ್ಲಿ ಕಾವ್ಯ ಸಂಭ್ರಮ
Amrutha Mahotsava
ಭಿಕ್ಷಾವರ್ತಿ ಮಠ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಚುಟುಕು ಗುಟುಕು ಪುಸ್ತಕ ವನ್ನು ಶಾಸಕ ಬಿ.ಪಿ. ಹರೀಶ್ ಬಿಡುಗಡೆ ಮಾಡಿದರು. ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಎಚ್.ಎಸ್. ಶಿವಶಂಕರ್, ಎಸ್.ಎಂ. ವೀರೇಶ್ ಹನಗವಾಡಿ ಇತರರಿದ್ದರು.Amrutha Mahotsava
Published on: 

ಹರಿಹರ: ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಸರಳ ಸಜ್ಜನಿಕೆಯ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಅವರಿಗೆ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬ ಆಗ್ರಹ ಅವರ ಅಮೃತ ಮಹೋತ್ಸವ ಸಮಾರಂಭದಲ್ಲಿ ವ್ಯಕ್ತವಾಯಿತು.

80ರ ದಶಕದಲ್ಲೇ ಸಮಾಜ ತಿದ್ದುವ ಕೆಲಸ ಮಾಡಿದ ಭಿಕ್ಷಾವರ್ತಿಮಠ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಮೃತ ಮಹೋತ್ಸವ ಹಾಗೂ ಕಾವ್ಯ ಸಂಭ್ರಮದಲ್ಲಿ ಆಗ್ರಹಿಸಿದಾಗ ಕಾರ್ಯಕ್ರಮದಲ್ಲಿದ್ದವರೆಲ್ಲ ಬೆಂಬಲಿಸಿ, ಹರ್ಷೋದ್ಘಾರ ಮಾಡಿದರು.

ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಮಾತನಾಡಿ, ಸರಳ ಸಜ್ಜನ ವ್ಯಕ್ತಿತ್ವದ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.

ರಾಣೆಬೆನ್ನೂರು ತಾಲೂಕಿನ ಹನುಮಾಪುರದವರಾದ ಭಿಕ್ಷಾವರ್ತಿಮಠರ ಕಾಯಕದ ನೆಲೆ ಹರಿಹರವಾಗಿದೆ. 1999ರಲ್ಲಿ ನಾನು ಬ್ಯಾಡಗಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಲು ಭಿಕ್ಷಾವರ್ತಿಮಠ ಅವರ ಕುಟುಂಬದ ಆಶೀರ್ವಾದವೇ ಕಾರಣ ಎಂದು ಸ್ಮರಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಅವರ ಮಾತಿಗೆ ದನಿಗೂಡಿಸಿದ ಮಾಜಿ ಶಾಸಕ ಶಿವಶಂಕರ್ ’ಮುಂದೆ ಎನ್‌ಡಿಎ ಸರ್ಕಾರ ಬಂದಾಗ ಪ್ರಶಸ್ತಿ ಕೊಡಿಸೋಣ’ ಎಂದರು. ಆಗ ವೀರೇಶ್ ಅವರು ಇದು ಕೇವಲ ಭಾಷಣದ ಮಾತಲ್ಲ, ನಮ್ಮ ಸರ್ಕಾರ ಬಂದಾಗ ಖಂಡಿತವಾಗಿಯೂ ಗುರುಗಳಿಗೆ ಪ್ರಶಸ್ತಿ ಕೊಡಿಸಿಯೇ ತೀರುತ್ತೇವೆ ಎಂದು ವಾಗ್ದಾನ ಮಾಡಿದರು.

ನಂದಿಪುರದ ಡಾ.ಮಹೇಶ್ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ಡಾ.ಎಂ.ಎಂ. ಮೃತ್ಯುಂಜಯ ಚುಟುಕು ಗುಟುಕು ಕುರಿತು ಮಾತನಾಡಿದರು. ಡಾ.ಎಸ್.ಎಚ್. ಪ್ಯಾಟಿ ಆಶಯ ನುಡಿ, ಆರ್.ಎಂ. ಕುಬೇರಪ್ಪ ಅಭಿನಂದನಾ ನುಡಿಗಳನ್ನಾಡಿದರು. ಪ್ರೊ.ಸಿ.ವಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ತಮ್ಮ ಅನಿಸಿಕೆ ಹಂಚಿಕೊಂಡರು.

ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್, ಮಾಜಿ ಶಾಸಕ ಎಸ್. ರಾಮಪ್ಪ, ನಂದಿಗಾವಿ ಶ್ರೀನಿವಾಸ್, ಡಿ.ಎಂ. ಹಾಲಸ್ವಾಮಿ, ಬಿ. ಚಿದಾನಂದಪ್ಪ, ಬಿ. ವಾಮದೇವಪ್ಪ, ಡಾ. ಬಿ.ಎಂ. ಚಂದ್ರಶೇಖರಯ್ಯ, ಡಾ. ಮಂಜುನಾಥ್ ಮಡಿಯಾಳ, ಬಿ. ರೇವಣಸಿದ್ದಪ್ಪ, ಚಂದ್ರಶೇಖರ್ ಪೂಜಾರ್, ಡಿ.ಜಿ. ಶಿವಾನಂದಪ್ಪ, ಬಾ.ಮ. ಬಸವರಾಜಯ್ಯ ಇತರರಿದ್ದರು.

ನಿಷ್ಕಲ್ಮಶ ಜ್ಞಾನಕ್ಕೆ ಸಾಕ್ಷಿ

ತಂದೆ ಎಚ್. ಶಿವಪ್ಪನವರಿಗೆ ಅತ್ಯಂತ ಆತ್ಮೀಯರಾಗಿದ್ದ ಭಿಕ್ಷಾವರ್ತಿಮಠ್, ಇಂಗ್ಲಿಷ್ ಪ್ರಾಧ್ಯಾಪಕರಾಗಿ ನೈತಿಕ ಬದುಕು ಕಟ್ಟಿಕೊಂಡವರು. ಮುಖವಾಡ ಹಾಕಿಕೊಂಡು ದುಡ್ಡು ಕೊಟ್ಟು ಹುಟ್ಟುಹಬ್ಬ ಆಚರಿಸಿಕೊಳ್ಳುವ ಇಂದಿನ ಕಾಲಘಟ್ಟದಲ್ಲಿ, ಶಿಷ್ಯವೃಂದವೇ ಫಲಾಪೇಕ್ಷೆಯಿಲ್ಲದೆ ಈ ಕಾರ್ಯಕ್ರಮ ಆಯೋಜಿಸಿರುವುದು ಇವರ ನಿಷ್ಕಲ್ಮಶ ಜ್ಞಾನಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.

ಸಮಾಜದ ಡೊಂಕು ತಿದ್ದುವ ಸಾಹಿತ್ಯ

ಬದ್ಧತೆ ಮತ್ತು ಶಿಸ್ತು ರೂಢಿಸಿಕೊಂಡಿರುವ ಭಿಕ್ಷಾವರ್ತಿಮಠ ಅವರ ಶಿಷ್ಯವೃಂದ ಹರಿಹರ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿದೆ. ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿರುವ ಇವರ ಚುಟುಕು ಕಾವ್ಯಗಳು ಸಮಾಜದ ಡೊಂಕು ತಿದ್ದುವ ಅರ್ಥಗರ್ಭಿತ ರಚನೆಗಳಾಗಿವೆ. ಇವರ ಬರವಣಿಗೆಯಲ್ಲಿ ಎಡಪಂಥೀಯ ಧೋರಣೆಗಳಿದ್ದರೂ, ನಾವು ನಮ್ಮ ಸಿದ್ಧಾಂತ ಬಿಡದೆ ಅದರಲ್ಲಿನ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ಬರೆಯದ ಸಾಹಿತ್ಯವಿಲ್ಲ

ನಾಲ್ಕು ದಶಕಗಳ ಕಾಲ ಅಕ್ಷರದಾತರಾಗಿ ಸೇವೆ ಸಲ್ಲಿಸಿರುವ ಭಿಕ್ಷಾವರ್ತಿಮಠ್ ಬರೆಯದ ಸಾಹಿತ್ಯವೇ ಇಲ್ಲ. ಇವರು ಬಂಗಲೆಗಳನ್ನು ಕಟ್ಟುವ ಬದಲು ಶಿಕ್ಷಣ ದಾಸೋಹದ ಮೂಲಕ ಶಿಷ್ಯಬಳಗವನ್ನು ಕಟ್ಟಿದ್ದಾರೆ. 12ನೇ ಶತಮಾನದ ಶರಣರಂತೆ ಮನುಷ್ಯನ ಮಾತುಗಳು ಸಮಾಜದಲ್ಲಿ ಜ್ಞಾನದ ದೀಪ ಹಚ್ಚಿದಾಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದು ಹರಪನಹಳ್ಳಿ ತಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net