ಲೀಲಾಜಿ ಅವರು 50 ವರ್ಷದಿಂದ ಆಧ್ಯಾತ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಕ್ಷೇತ್ರ ಮತ್ತು ಮೌಲ್ಯ ಶಿಕ್ಷಣ ವಿಭಾಗಗಳಲ್ಲಿ ಸಲ್ಲಿಸುತ್ತಿರುವ ವಿಶಿಷ್ಟ ಸೇವೆ, ಮಹಿಳಾ ಮತ್ತು ಸಾಮಾಜಿಕ ಕಾರ್ಯ ಪರಿಗಣಿಸಿ ಈ ಆಯ್ಕೆ ಮಾಡಲಾಯಿತು.
ಸೋಮವಾರ ಸಂಜೆ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಆಯ್ಕೆ ಸಮಿತಿ ಸಭೆಯು ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡಿತು. ನಂತರ, ಏಳನೆಯ ಪೂರ್ವಭಾವಿ ಸಭೆಯಲ್ಲಿ ಅನುಮೋದಿಸಲಾಯಿತು ಎಂದು ಸಮ್ಮೇಳನದ ಪ್ರಧಾನ ಸಂಚಾಲಕಿ ವೀಣಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಸತ್ಸಂಗಗಳ ಮೂಲಕ ಸಾರ್ವಜನಿಕರಿಗೆ ಶಿವನ ಚಿಂತನೆ ಉಣಬಡಿಸುವ ಜತೆಗೆ ಮಾನವನನ್ನು ಮಹಾಮಾನವರನ್ನಾಗಿ ರೂಪಿಸುವಲ್ಲಿ ಲೀಲಾಜಿ ಶ್ರಮಿಸುತ್ತಿದ್ದಾರೆ. ದಾವಣಗೆರೆ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ 80ಕ್ಕೂ ಅಧ್ಯಾತ್ಮಿಕ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.
40 ವರ್ಷಗಳಿಂದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಜಿಲ್ಲಾ ಪ್ರಧಾನ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಚೆ ಇಲಾಖೆಯಲ್ಲಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಆಧ್ಯಾತ್ಮಿಕ ಕ್ಷೇತ್ರದ ಸೆಳೆತದಿಂದಾಗಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಯಂ ನಿವೃತ್ತಿ ಪಡೆದರು. ಎಲ್ಲ ನಿವೃತ್ತಿ ವೇತನವನ್ನು ಸತ್ಸಂಗ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತ ಸಮಾಜಸೇವೆ ಮಾಡುತ್ತಿದ್ದಾರೆ.
ಅರ್ಥಶಾಸ್ತ್ರ, ಹಿಂದಿ ವಿಷಯಗಳಲ್ಲಿ ಬಿ.ಎ. ಪದವಿ, ಮೌಲ್ಯಶಿಕ್ಷಣ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಎಂ.ಎಸ್ಸಿ. ಪದವಿ ಗಳಿಸಿರುವ ಲೀಲಾಜಿ ಅವರು, ಕನ್ನಡ, ಹಿಂದಿ ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಓದುವುದು, ಬರೆಯುವುದರ ಜತೆಗೆ ನಿರರ್ಗಳ ಉಪನ್ಯಾಸ ನೀಡುವ ಪ್ರಬುದ್ಧತೆ ಹೊಂದಿದ್ದಾರೆ. ಸಂಗೀತ, ನೃತ್ಯ, ಚಿತ್ರಕಲೆ, ಪ್ರಬಂಧ ಲೇಖನ, ಭಾಷಣ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.
ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಕುರಿತು, ಹಬ್ಬಗಳ ಆಧ್ಯಾತ್ಮಿಕ ಸತ್ಯ ರಹಸ್ಯ ತಿಳಿಸುವ ಹಾಗೂ ಸಾಂದರ್ಭಿಕ ಜನಜಾಗೃತಿ ಲೇಖನಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ. ಟೀವಿವಾಹಿನಿಗಳ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಉಪನ್ಯಾಸ ನೀಡಿದ್ದಾರೆ.
ಯುವ ಸಮುದಾಯದಲ್ಲಿ ಆಧ್ಯಾತ್ಮಿಕ, ನೈತಿಕ ಜಾಗೃತಿ ಮೂಡಿಸಲು ‘ಶರಣರು ಕಂಡ ಶಿವ’, ‘ಸ್ವರ್ಗದಲ್ಲಿ ಒಂದು ಸೀಟು ಖಾಲಿ ಇದೆ’ ‘ಅಸತೋಮ ಸದ್ಗಮಯ’ ಎಂಬ ನಾಟಕಗಳನ್ನು ರಚಿಸಿ ಅಭಿನಯಕ್ಕೆ ಮಾರ್ಗದರ್ಶನ ನೀಡಿದ್ದಾರೆ. ‘ಸ್ವರ್ಗದಲ್ಲಿ ಒಂದು ಸೀಟು ಖಾಲಿ ಇದೆ’ ನಾಟಕವು ಕರ್ನಾಟಕದ ವಿವಿಧೆಡೆ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.
ಯುವಕರನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ಯುವಜನ ಜಾಗೃತಿ ಪ್ರದರ್ಶನ ಮಾಡಿದ್ದಾರೆ. ದುರಭ್ಯಾಸಗಳ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡವರಿಗಾಗಿ ಉಚಿತ ಔಷಧ ಹಾಗೂ ರಾಜಯೋಗ ಶಿಕ್ಷಣ ನೀಡುವ ಸದುದ್ದೇಶದಿಂದ ‘ಆರೋಗ್ಯಧಾಮ’ ಎಂಬ ನಶಾಮುಕ್ತಿ ಕೇಂದ್ರವನ್ನು ಸ್ಥಾಪಿಸಿದ್ದಾರೆ. ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಆರೋಗ್ಯ ಜಾಗೃತಿ ಮೂಡಿಸಿದ್ದಾರೆ.