ಚನ್ನಗಿರಿಯ ಲಿಂಗದಹಳ್ಳಿ ಗ್ರಾಮದ ಅಡಕೆ ತೋಟಗಳಲ್ಲಿ ಕೊಳೆರೋಗ

ಚನ್ನಗಿರಿಯ ಲಿಂಗದಳ್ಳಿಯಲ್ಲಿ ತೇವಾಂಶದಿಂದ ನೆಲಕ್ಕೆ ಬಿದ್ದ ಅಡಕೆಗಳು.
ಚನ್ನಗಿರಿಯ ಲಿಂಗದಳ್ಳಿಯಲ್ಲಿ ತೇವಾಂಶದಿಂದ ನೆಲಕ್ಕೆ ಬಿದ್ದ ಅಡಕೆಗಳು.
Published on

ಪ್ರಮುಖ ಮುಖ್ಯಾಂಶಗಳು

  • ಈ ಸಾಲಿನಲ್ಲಿ ಅತಿಯಾಗಿ ಸುರಿದ ಮಳೆ
  • ತೋಟದಲ್ಲಿ ಮಣ್ಣಿನ ತೇವಾಂಶ ಹೆಚ್ಚು
  • ಅಡಕೆಗೆ ಕೊಳೆ ರೋಗ ಲಕ್ಷಣಗಳು
ಟಿ.ಎನ್.ಜಗದೀಶ್ ಚನ್ನಗಿರಿ
ಈ ಸಾಲಿನಲ್ಲಿ ಅತಿಯಾಗಿ ಸುರಿದ ಮಳೆಯಿಂದ ತೋಟದಲ್ಲಿ ಮಣ್ಣಿನ ತೇವಾಂಶ ಹೆಚ್ಚಾಗಿ ಅಡಕೆಗೆ ಕೊಳೆ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ದೊಡ್ಡ ತಾಲೂಕಾ ಗಿರುವ ಚನ್ನಗಿರಿ 70 ಸಾವಿರ ಹೆಕ್ಟೇರ್ ಕೃಷಿ ಭೂಮಿ ಹೊಂದಿದೆ. ರೈತರು ರಾಗಿ, ಹತ್ತಿ, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಕೆಲ ಭಾಗಗಳಲ್ಲಿ ಮಾತ್ರ ಅಡಕೆ ಬೆಳೆಯುತ್ತಿದ್ದರು.
ಕ್ರಮೇಣ ವಾಣಿಜ್ಯ ಬೆಳೆಯಾದ ಅಡಕೆಗೆ ಉತ್ತಮ ಧಾರಣೆ ಸಿಗುತ್ತಿದ್ದಂತೆ ಪ್ರತಿಯೊಬ್ಬ ರೈತರು ಅಡಕೆಯನ್ನೇ ಬೆಳೆಯಲು ಆರಂಭಿಸಿದರು. ಸದ್ಯ ತಾಲೂಕಿನಲ್ಲಿ ಸುಮಾರು 35,864 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಈ ಬಾರಿ ವಾಡಿಕೆಗಿಂತ ಶೇ.5ರಷ್ಟು ಮಳೆ ಅಧಿಕವಾದ ಕಾರಣ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. 
ತಾಲೂಕಿನ ಉಬ್ರಾಣಿ ಭಾಗದ ಉಬ್ರಾಣಿ, ದುರ್ವಿಗೆರೆ, ಬಸವಾಪುರ, ಮಾನಮಟ್ಟಿ, ಕಗ್ಗಿ, ಮುಗಳಿಹಳ್ಳಿ, ಚಿಕ್ಕಮಳಲಿ ತಾಂಡ, ಚಿಕ್ಕಮಳಲಿ, ಬಂಡೀಗುಡ್ಡ, ಚಿಕ್ಕಸಂದಿ, ಕೊಡಕಿಕೆರೆ, ಬಸವಾಪುರ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಲಿಂಗದಳ್ಳಿ, ಜೋಳದಾಳು, ಹರೋನಹಳ್ಳಿ, ಎರೇಹಳ್ಳಿ, ಗಾಣದಕಟ್ಟೆ, ಸಾರಥಿ, ಹೊಸಳ್ಳಿ ಗ್ರಾಮದ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.
"

ತೋಟಗಳಲ್ಲಿ ನೀರು ನಿಂತು ಅಡಕೆಗಳು ಉದುರುತ್ತಿವೆ. ಎಳೆ ಅಡಕೆ ಬಿದ್ದರೆ ಬೆಳೆಗಾರರಿಗೆ ನಷ್ಟವಾಗಲಿದೆ. ನೀರಿನ ತೇವಾಂಶದಿಂದ ಬಿದ್ದಂಥ ಅಡಕೆ ಶೇ.25ರಷ್ಟು ಕಡಿಮೆ ತೂಕ ಬರುತ್ತದೆ. ಇದರಿಂದ ರೈತರಿಗೆ ನಷ್ಟವಾಗಲಿದೆ.

— ಚಂದ್ರಹಾಸ್ ಹಿರೇಮಳಲಿ ಬೆಳೆಗಾರ
"

ತೋಟ ಗಳಲ್ಲಿ ಬಸಿಗಾಲುವೆ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಕೊಳೆಬಾಧಿತ ಕಾಯಿಗಳನ್ನು ಆರಿಸಿ ಹೊರಗಡೆ ಹಾಕಬೇಕು. ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಹಾಗೂ ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಬೇಕು. ವೈಜ್ಞಾನಿಕವಾಗಿ ತಯಾರಿಸಿದ 1 ಗ್ರಾಂ ಬೋರ್ಡೊ ದ್ರಾವಣ ಅಥವಾ 2 ಗ್ರಾಂ ಮೆಟಲ್ಯಾಕ್ಸಿಲ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಗೊನೆಗಳಿಗೆ, ಎಲೆಗಳಿಗೆ ಮತ್ತು ಸುಳಿಭಾಗಕ್ಕೆ ಚೆನ್ನಾಗಿ ನೆನೆಯುವಂತೆ ಸಿಂಪರಣೆ ಮಾಡಬೇಕು.

— ಕೆ.ಎಸ್. ಶ್ರೀಕಾಂತ್ ತೋಟಗಾರಿಕೆ ಸಹಾಯಕ ನಿರ್ದೇಶಕ, ಚನ್ನಗಿರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net