ದೇವಸ್ಥಾನಗಳ ಬಳಿ ಅಳವಡಿಸಿದ್ದ ಶಾಮಿಯಾನಗಳು ಬಿರುಬಿಸಿಲಿನ ಹಿನ್ನೆಲೆಯಲ್ಲಿ ಆಸರೆಯಾದವು. ಸರದಿ ಸಾಲಿನಲ್ಲಿ ನಿಂತ ಭಕ್ತರು, ಹೂವು ತುಳಸಿ ಮಾಲೆಗಳಿಂದ ಅಲಂಕೃತರಾದ ಶ್ರೀರಾಮ-ಸೀತೆ, ಲಕ್ಷ್ಮಣ ಹಾಗೂ ಆಂಜನೇಯರ ದೇವರ ಮೂರ್ತಿಗಳ ದರ್ಶನ ಪಡೆದರು.
ಹರಕೆ ಹೊತ್ತ ಹೆಂಗಳೆಯರು ರಾಮನನ್ನು ಇರಿಸಿದ್ದ ತೊಟ್ಟಿಲನ್ನು ತೂಗಿ ಪ್ರಾರ್ಥನೆ ನಿವೇದಿಸಿಕೊಂಡರು. ಮಂದಿರಗಳಲ್ಲಿ ಹೂವು-ಹಣ್ಣು, ತೆಂಗಿನಕಾಯಿ, ತುಳಸಿಮಾಲೆ, ಪ್ರಸಾದದ ಭಕ್ತಿ ಸಮರ್ಪಿಸಿದರು.
ಪಿ.ಬಿ.ರಸ್ತೆಯ ಶ್ರೀ ಕೋದಂಡರಾಮ ದೇವಸ್ಥಾನ, ಪಿ.ಜೆ. ಬಡಾವಣೆಯ ಖಮಿತ್ಕರ್ ಈಶ್ವರಪ್ಪನವರ ರಾಮಮಂದಿರ ಹಾಗೂ ಚಾಮರಾಜಪೇಟೆಯ ಕೋದಂಡರಾಮ ದೇವಸ್ಥಾನ ಸೇರಿ ವಿವಿಧೆಡೆ ಶ್ರೀರಾಮನನ್ನು ಹೂವಿನಲಂಕೃತ ತೊಟ್ಟಿಲಲ್ಲಿ ಕೂರಿಸಿ ಉತ್ಸವ, ಪೂಜೆ ಸಲ್ಲಿಸಲಾಯಿತು.
ಬೆಳಗಿನಿಂದಲೇ ವಿಶೇಷ ಪೂಜೆ, ಪಂಚಾಮೃತಾಭಿಷೇಕ ನಡೆದವು. ಜಯದೇವ ವೃತ್ತದ ಶ್ರೀರಾಮನ ದೇಗುಲದಲ್ಲೂ ಪೂಜಾ ವಿಧಿಗಳು ಜರುಗಿದವು. ಹೆಂಗಳೆಯರು ರಾಮನ ವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಿದರು.
ಚಾಮರಾಜಪೇಟೆಯ ಕೋದಂಡರಾಮ ದೇವಸ್ಥಾನದಲ್ಲಿ 9 ದಿನದ ರಾಮೋತ್ಸವಕ್ಕೆ ಚಾಲನೆ ನೀಡಲಾಯಿತು. ಇಸ್ಕಾನ್ ಸಂಸ್ಥೆಯ ದಾವಣಗೆರೆ ಘಟಕದ ಮುಖ್ಯಸ್ಥ ಅವಧೂತ ಚಂದ್ರದಾಸ ಅವರು ದೇಗುಲದ ಮೇಲೆ ಧ್ವಜಾರೋಹಣ ನೆರವೇರಿಸಿದರು. ಬೆಳಗ್ಗೆ ಕುಂಕುಮಾರ್ಚನೆ ಅಲಂಕಾರ, ವೇದ ಪಾರಾಯಣ, ನವಗ್ರಹ ಜಪ ನಡೆದರೆ ರಾತ್ರಿ ಮಂತ್ರಪುಷ್ಪ ಅಷ್ಟಾವಧಾನ ಸೇವೆ ನಡೆದವು.
ಬುಧವಾರ ಸೀತಾರಾಮರ ಕಲ್ಯಾಣೋತ್ಸವ, ಗುರುವಾರ ಶ್ರೀ ರಾಮ ಪಟ್ಟಾಭಿಷೇಕ, ಏ.3ರಂದು ಶಯನೋತ್ಸವ, ನಾರಾಯಣ ಸೇವೆ ಜರುಗಲಿದೆ ಎಂದು ಆಯೋಜಕರು ವಿವರಿಸಿದರು.
ಪಿಬಿ ರಸ್ತೆಯ ಕೋದಂಡರಾಮ ದೇಗುಲದಲ್ಲೂ ಶ್ರೀರಾಮ ಜನ್ಮೋತ್ಸವ ಅಂಗವಾಗಿ ಶ್ರೀ ರಾಮಾಯಣ ಪಾರಾಯಣ, ಪುರಾಣ ಪ್ರವಚನ, ಮೃತ್ಯುಂಜಯ ಜಪ, ನವಗ್ರಹ ಜಪ. ಸೂರ್ಯ ನಮಸ್ಕಾರ ನಡೆಸಲಾಯಿತು.
ಮೈಸೂರಿನ ವಾಣಿ ಹಾಗೂ ಬೆಂಗಳೂರಿನ ಕಲಾವಿದೆ ವೀಣಾ ಅವರ ಜೋಡಿ ಸೋಮವಾರದಿಂದ ಆರಂಭಿಸಿದ್ದ ‘ಶ್ರೀರಾಮ ದರ್ಶನ’ ಹರಿಕಥಾ ಕೀರ್ತನೆ ಶುಕ್ರವಾರವೂ ನಡೆಯಿತು. ಶನಿವಾರ ಮಧ್ಯಾಹ್ನ 12 ಗಂಟೆಗೆ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ಹಾಗೂ ಸಂಜೆ 7ಕ್ಕೆ ರಥೋತ್ಸವ ಜರುಗಲಿದೆ.
ಖಮಿತ್ಕರ್ ಈಶ್ವರಪ್ಪ ಅವರ ಶ್ರೀರಾಮ ಮಂದಿರದಲ್ಲೂ ಮೂಲ ಮೂರ್ತಿಗೆ ಪುರುಷ ಸೂಕ್ತ ಮತ್ತು ಶ್ರೀ ಸೂಕ್ತ ಮಂತ್ರದಿಂದ ಅಭಿಷೇಕ ನಡೆಸಿ, ರಾಮನ ತೊಟ್ಟಿಲೋತ್ಸವ ನಡೆಸಲಾಯಿತು. ಮಹಿಳಾ ಮಂಡಳಿಗಳಿಂದ ರಾಮನ ಭಜನೆ ಮೊಳಗಿದವು. ಸಂಜೆ ವೀಣಾವಾದನ, ಭರತನಾಟ್ಯ, ಸಂಗೀತ ಕಾರ್ಯಕ್ರಮ ನಡೆದವು.
ದೇಗುಲಗಳಲ್ಲಿ ಹಾಗೂ ನಿಟುವಳ್ಳಿ, ಶಕ್ತಿನಗರ, ಜಯನಗರ, ಜಯದೇವ ವೃತ್ತ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ವಿನೋಬನಗರ ಸೇರಿ ವಿವಿಧೆಡೆ ಕೆಲವು ಸಂಘಟನೆಗಳ ಕಾರ್ಯಕರ್ತರು ಭಕ್ತರಿಗೆ ಪಾನಕ-ಕೋಸಂಬರಿ, ಮಜ್ಜಿಗೆ ವಿತರಿಸಿದರು. ಉಪಚುನಾವಣೆ ಹಿನ್ನೆಲೆಯಲ್ಲಿ ಆಯ್ದ ದೇಗುಲಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು.