1.5 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ಮಾಯಕೊಂಡ: ಗ್ರಾಮೀಣ ಪ್ರದೇಶದ ರಸ್ತೆಗಳು ಸಮಗ್ರವಾಗಿ ಅಭಿವೃದ್ಧಿಯಾದಾಗ ಮಾತ್ರ ಗ್ರಾಮಗಳ ಉನ್ನತೀಕರಣ ಸಾಧ್ಯ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಹೋಬಳಿಯ ಅತ್ತಿಗೆರೆ ಗ್ರಾಮದಲ್ಲಿ ಬುಧವಾರ ಲೋಕೋಪಯೋಗಿ ಇಲಾಖೆ ವತಿಯಿಂದ 2025-26ನೇ ಸಾಲಿನ ಸಿಎಂಐಡಿಪಿ ಯೋಜನೆಯಡಿ ಹಮ್ಮಿಕೊಂಡಿದ್ದ 1.5 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಒಮ್ಮೆ ನಿರ್ಮಿಸಿದ ಸಿಸಿ ರಸ್ತೆಗಳು ದೀರ್ಘಕಾಲ ಬಾಳಿಕೆ ಬರಬೇಕು. ಆದ್ದರಿಂದ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಗುಣಮಟ್ಟದ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ಗ್ರಾಮಸ್ಥರು ಸಹ ಕಾಮಗಾರಿಯ ಮೇಲೆ ನಿಗಾ ಇಟ್ಟು ಮೇಲ್ವಿಚಾರಣೆ ನಡೆಸಬೇಕು ಎಂದು ಸಲಹೆ ನೀಡಿದರು.
ಅತ್ತಿಗೆರೆ ಗ್ರಾಮದ ಜನರ ದೀರ್ಘಕಾಲದ ಬೇಡಿಕೆಯಾಗಿದ್ದ ರಸ್ತೆ ಮತ್ತು ಚರಂಡಿ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣದ ಜತೆಗೆ ಚರಂಡಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮದ ಪ್ರವೇಶ ದ್ವಾರದಿಂದ ಊರಿನ ಒಳಗಿನವರೆಗೆ ಉತ್ತಮ ದೀಪಾಲಂಕಾರ ಹಾಗೂ ಪೇವರ್ ಫಿನಿಶ್ ರಸ್ತೆಗಳನ್ನು ಮಾಡುವ ಮೂಲಕ ಗ್ರಾಮಕ್ಕೆ ಹೊಸ ಕಳೆ ನೀಡಲಾಗುವುದು ಎಂದು ಭರವಸೆ ನೀಡಿದರು.
ರಸ್ತೆ ಮತ್ತು ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಯಾರಾದರೂ ಅತಿಕ್ರಮಣ ಮಾಡಿಕೊಂಡಿದ್ದರೆ, ಗ್ರಾಮದ ಹಿತದೃಷ್ಟಿಯಿಂದ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು. ಅಭಿವೃದ್ಧಿ ಕಾಮಗಾರಿಗೆ ಯಾವುದೇ ಅಡ್ಡಿ ಆತಂಕಗಳು ಬಾರದಂತೆ ನೋಡಿಕೊಳ್ಳುವುದು ಗ್ರಾಮಸ್ಥರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪರಮೇಶ್ವರಪ್ಪ, ಗ್ರಾಮದ ಮುಖಂಡರಾದ ಎಂ.ಎಚ್. ಶಿವಣ್ಣ, ಅರುಣಕುಮಾರ್, ಮಹಾದೇವಪ್ಪ, ಎ. ನಂದೀಶ್, ಕೆ. ಅಂಜಿನಪ್ಪ, ವೆಂಕಟೇಶ್, ಮಂಜುನಾಥ್, ನಿತಿನ್, ರಾಮಗೊಂಡನಹಳ್ಳಿ ಗ್ರಾಮದ ಸಿದ್ದೇಶಪ್ಪ, ಶರಣಪ್ಪ, ರಂಗನಾಥ್, ಮಲ್ಲಿಕಾರ್ಜುನ್ ಹಾಗೂ ಗ್ರಾಮಸ್ಥರು ಇದ್ದರು.