ಉಬ್ರಾಣಿ ವ್ಯಾಪ್ತಿಯಲ್ಲಿ ಪುಂಡಾನೆ ಸೆರೆಗೆ ಕಾರ್ಯಾಚರಣೆ

ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಬಳಿ ಪುಂಡಾನೆಯನ್ನು ಹಿಡಿಯಲು ಶಿವಮೊಗ್ಗದ ಸಕ್ರೆಬೈಲಿನಿಂದ ತಂದ ಸಾಕು ಆನೆಗಳು. pundane
ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಬಳಿ ಪುಂಡಾನೆಯನ್ನು ಹಿಡಿಯಲು ಶಿವಮೊಗ್ಗದ ಸಕ್ರೆಬೈಲಿನಿಂದ ತಂದ ಸಾಕು ಆನೆಗಳು. pundane
Published on

ಪ್ರಮುಖ ಮುಖ್ಯಾಂಶಗಳು

  • ಸಕ್ರೆಬೈಲಿನಿಂದ 6 ಆನೆಗಳ ಆಗಮನ
  • ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್ ಮಾಹಿತಿ
ಚನ್ನಗಿರಿ: ಭದ್ರಾವತಿ ಅರಣ್ಯ ವಿಭಾಗದ ಚನ್ನಗಿರಿ ವಲಯದ ಉಬ್ರಾಣಿ ವ್ಯಾಪ್ತಿಯ ಗ್ರಾಮಗಳಿಗೆ ನುಗ್ಗಿ ರೈತರ ಬೆಳೆ ನಾಶ ಮಾಡುತ್ತಿದ್ದ ಪುಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ ಹಮ್ಮಿಕೊಂಡಿದೆ.
ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದಂತೆ, ಕಾರ್ಯಾಚರಣೆಗಾಗಿ ಶಿವಮೊಗ್ಗದ ಸಕ್ರೆಬೈಲಿನಿಂದ 6 ಸಾಕು ಆನೆಗಳನ್ನು ಕರೆತರಲಾಗಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್ ಸೋಮವಾರ ತಿಳಿಸಿದರು.
ಸಾಕು ಆನೆಗಳನ್ನು ತಾಲೂಕಿನ ಮರವಂಜಿ ಗ್ರಾಮದ ಹೊರವಲಯದಲ್ಲಿ ಇರಿಸಲಾಗಿದ್ದು, ಈ ತಂಡದಲ್ಲಿ 5 ಗಂಡಾನೆ ಹಾಗೂ 1 ಮಖ್ನಾ ಆನೆ ಇವೆ. ಕಾರ್ಯಾಚರಣೆಗೆ ಅಗತ್ಯವಿರುವ ರೇಡಿಯೋ ಕಾಲರ್ ಅನ್ನು ನಾಗರಹೊಳೆಯಿಂದ ತರಿಸಿಕೊಳ್ಳಲಾಗಿದೆ. ಪುಂಡಾನೆಯನ್ನು ಸೆರೆಹಿಡಿದ ನಂತರ ದಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದರು.
ರೈತರ ತೋಟಗಳ ನಾಶ: ಉಬ್ರಾಣಿ ಹೋಬಳಿಯ ರೊಪ್ಪದಹಟ್ಟಿ, ರಾಜಗೊಂಡನಹಳ್ಳಿ, ಖಗ್ಗಿ, ನೆಲ್ಲಿಹಂಕಲು, ಮರವಂಜಿ, ಹಲಕನಾಲ್, ಬಂಡಿಗುಡ್ಡ ಸೇರಿ ಸುತ್ತಮುತ್ತಲಿನ ಗ್ರಾಮಗಳಿಗೆ ಈ ಕಾಡಾನೆ ಆಹಾರ ಹುಡುಕಿಕೊಂಡು ಬಂದು ರೈತರ ಅಡಿಕೆ ಮತ್ತು ಬಾಳೆ ತೋಟಗಳನ್ನು ಧ್ವಂಸ ಮಾಡುತ್ತಿತ್ತು. ಇದರಿಂದ ಕಂಗಾಲಾಗಿದ್ದ ರೈತರು ಆನೆ ಹಿಡಿಯುವಂತೆ ದೂರು ನೀಡಿದ್ದರು.
ಮೂರು ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ: ಆನೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಯಾವುದೇ ಅಡ್ಡಿಯಾಗದಂತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸಾಕು ಆನೆಗಳನ್ನು ಬಿಡಲಾಗಿರುವ ಮರವಂಜಿ, ಹಲಕನಾಳ್ ಮತ್ತು ಮೆದುಗೊಂಡನಹಳ್ಳಿ ಗ್ರಾಮಗಳ ಸುತ್ತಮುತ್ತ ತಕ್ಷಣದಿಂದ ಜಾರಿಗೆ ಬರುವಂತೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ವಿಶೇಷ ತಂಡಗಳ ರಚನೆ

ಕಾರ್ಯಾಚರಣೆಗಾಗಿ ಈಗಾಗಲೇ ಕಾಡಾನೆ ಬರುವ ಸ್ಥಳಗಳನ್ನು ಗುರುತಿಸಲಾಗಿದ್ದು, ಅರಿವಳಿಕೆ ತಜ್ಞರು, ನುರಿತ ಮಾವುತರು ಮತ್ತು ಅನುಭವಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನುರಿತ ಪಶುವೈದ್ಯಾಧಿಕಾರಿಗಳಾದ ಡಾ.ಮುಜೀಬ್ ಉರ್ ರೆಹಮಾನ್, ಕೊಡಗು ವೃತ್ತದ ಡಾ.ಮುರಳಿ ನೇತೃತ್ವದಲ್ಲಿ ಸಕ್ರೆಬೈಲು ಆನೆ ಬಿಡಾರ ತಂಡ, ಟ್ರ್ಯಾಕಿಂಗ್ ತಂಡ ಹಾಗೂ ಅನಿಮಲ್ ರಿಸ್ಟ್ರೈಂಟ್ ಟೆಕ್ನಿಕಲ್ ಸಪೋರ್ಟ್ ತಂಡಗಳನ್ನು ರಚಿಸಲಾಗಿದೆ. ಭದ್ರಾವತಿ ವಿಭಾಗದ ಉಂಬ್ಳೆಬೈಲು, ಮಾವಿನಕಟ್ಟೆ, ಲಕ್ಕವಳ್ಳಿ ಹಾಗೂ ತರೀಕೆರೆ ವಲಯದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net