ದಾವಣಗೆರೆ ತಾಲೂಕಿನಲ್ಲಿ ಬರದಲ್ಲೂ ಆಸರೆಯಾದ ದ್ವಿದಳ ಧಾನ್ಯ

ತೊಗರಿ, ಅವರೆಗೆ ಬಂಪರ್ ಇಳುವರಿ ನಿರೀಕ್ಷೆ!
Legume
ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ರೈತ ಸೈಯದ್ ಬುಡನ್ ಅವರ 4 ಎಕರೆ ಜಮೀನಿನಲ್ಲಿ ಬೆಳೆದಿರುವ ದ್ವಿದಳ ಧಾನ್ಯ ಅವರೆ ಬೆಳೆ.Legume
Published on: 

ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ

ದಾವಣಗೆರೆ ತಾಲೂಕಿನ ಆನಗೋಡು, ಮಾಯಕೊಂಡ ಹಾಗೂ ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮುಂಗಾರು ಮಳೆ ಕೈಕೊಟ್ಟು ಭೀಕರ ಬರ ಆವರಿಸಿದ್ದರೂ, ರೈತರು ಬೆಳೆದಿರುವ ದ್ವಿದಳ ಧಾನ್ಯಗಳಾದ ತೊಗರಿ ಹಾಗೂ ಅವರೆ ಬೆಳೆಗಳು ಈ ಬಾರಿಯ ಸಂಕಷ್ಟದಲ್ಲಿ ಅಲ್ಪಸ್ವಲ್ಪ ಆಸರೆಯಾಗುವ ಭರವಸೆ ಮೂಡಿಸಿವೆ.

ದಾವಣಗೆರೆ ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಕೃಷಿ ಜಮೀನಿನಲ್ಲಿ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಮತ್ತು ರಾಗಿಯಲ್ಲಿ ಅಕ್ಕಡಿ ಬೆಳೆಯಾಗಿ ದ್ವಿದಳ ಧಾನ್ಯ ಬೆಳೆಯುವುದು ವಾಡಿಕೆ. ಆದರೆ ಈ ವರ್ಷ ಭೀಕರ ಬರದ ಪರಿಣಾಮ ಶೇ.80ರಷ್ಟು ಮೆಕ್ಕೆಜೋಳ ಹಾಗೂ ರಾಗಿ ಬೆಳೆಗಳು ಒಣಗಿ ಹೋಗಿವೆ. ಹೀಗಿದ್ದೂ, ದ್ವಿದಳ ಧಾನ್ಯಗಳಾದ ತೊಗರಿ ಮತ್ತು ಅವರೆ ಬೆಳೆಗಳು ರೈತರ ಕೈಹಿಡಿಯುವ ಲಕ್ಷಣಗಳು ಕಾಣಿಸುತ್ತಿವೆ. ಜತೆಗೆ, 2 ರಿಂದ 3 ವರ್ಷದ ಸಣ್ಣ ಅಡಿಕೆ ತೋಟಗಳಲ್ಲಿ ಅಂತರ ಬೆಳೆಯಾಗಿಯೂ ರೈತರು ತೊಗರಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ.

ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾದ ನಿರಂತರ ತರಬೇತಿ, ಸುಧಾರಿತ ತಂತ್ರಜ್ಞಾನ ಹಾಗೂ ತೊಗರಿ ಬೆಳೆಯ ಪ್ರಾತ್ಯಕ್ಷಿಕೆಗಳಿಂದ ಪ್ರೇರಿತರಾಗಿ ರೈತರು ದ್ವಿದಳ ಧಾನ್ಯಗಳತ್ತ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ.

ನೇರ ಬಿತ್ತನೆ, ಊರುಗಾಳು ಪದ್ಧತಿ ಹಾಗೂ ನರ್ಸರಿ ಕವರ್‌ಗಳಲ್ಲಿ ಸಸಿ ಮಾಡಿ ನಾಟಿ ಮಾಡುವ ವಿವಿಧ ವಿಧಗಳಲ್ಲಿ ತೊಗರಿ ಬೆಳೆದು ರೈತರು ಉತ್ತಮ ಪ್ರಗತಿ ಕಂಡಿದ್ದಾರೆ.

4000 ಹೆಕ್ಟೇರ್‌ಗೆ ವಿಸ್ತರಿಸಿದ ತೊಗರಿ

2-3 ವರ್ಷಗಳ ಹಿಂದೆ ಕೇವಲ 650 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ತೊಗರಿ ಬೆಳೆಯು, ಪ್ರಸಕ್ತ ಸಾಲಿನಲ್ಲಿ ಬರಗಾಲದ ನಡುವೆಯೂ ಬರೋಬ್ಬರಿ 4,000 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆಯಾಗಿದೆ. ಹಾಗೆಯೇ ತಾಲೂಕಿನಾದ್ಯಂತ 250 ರಿಂದ 300 ಹೆಕ್ಟೇರ್ ಪ್ರದೇಶದಲ್ಲಿ ಅವರೆ ಬೆಳೆಯಲಾಗಿದೆ.

ರೈತರು ಈಗಾಗಲೇ ಹಿಂಗಾರು ಹಂಗಾಮಿನ ರಾಗಿ ಮತ್ತು ಅಲಸಂದೆ ಬಿತ್ತನೆಗೆ ತಯಾರಾಗಿದ್ದಾರೆ. ತಾಲೂಕಿನ ಕಸಬಾ, ಆನಗೋಡು, ಮಾಯಕೊಂಡ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ದಾಸ್ತಾನಿದ್ದು, ರೈತರು ಆಧಾರ್ ಕಾರ್ಡ್ ಅಥವಾ ಎಫ್‌ಐಡಿ ಸಂಖ್ಯೆ ನೀಡಿ ರಿಯಾಯಿತಿ ದರದಲ್ಲಿ ಪಡೆಯಬಹುದು. ಹಿಂಗಾರು ಮಳೆ ಉತ್ತಮವಾಗಿ ಬಂದಲ್ಲಿ ಭೂಮಿಯ ತೇವಾಂಶ ನೋಡಿಕೊಂಡು ಬಿತ್ತನೆ ಮಾಡುವುದು ಸೂಕ್ತ.
ಡಿ.ಎಂ. ಶ್ರೀಧರಮೂರ್ತಿ ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ ತಾಲೂಕು.
4 ಎಕರೆ ಜಮೀನಿನಲ್ಲಿ ಸಣ್ಣ ಅವರೆ ಬಿತ್ತನೆ ಮಾಡಿದ್ದೇನೆ. ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಕಳೆ ಕೀಳಲು ಈಗಾಗಲೇ 70 ರಿಂದ 80 ಸಾವಿರ ರೂ. ಖರ್ಚಾಗಿದೆ. ಪ್ರಸ್ತುತ ಹೂವು, ಹೀಚು ಮತ್ತು ಕಾಯಿ ಕಟ್ಟುವ ಹಂತದಲ್ಲಿದ್ದು, ಉತ್ತಮ ಇಳುವರಿ ಹಾಗೂ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದೇನೆ.
ಸೈಯದ್ ಬುಡನ್ ಅವರೆ ಬೆಳೆಗಾರ, ಹುಚ್ಚವ್ವನಹಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net