ಮಾಯಕೊಂಡ:public placeಪ್ರತಿ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರು ಪೂರೈಕೆ, ರಸ್ತೆ, ಚರಂಡಿಗಳು,ಶಾಲೆ, ಅಂಗನವಾಡಿ, ಸರ್ಕಾರಿ ಆಸ್ಪತ್ರೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಘನತ್ಯಾಜ್ಯ ಕಸ ವಿಲೇವಾರಿ ಘಟಕಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್ ಸೂಚನೆ ನೀಡಿದರು.
ಹೋಬಳಿಯ ಅಣಬೇರು, ಹುಚ್ಚವ್ವನಹಳ್ಳಿ, ನಲ್ಕುಂದ ಗ್ರಾಮಗಳಿಗೆ ಬುಧವಾರ ಬೆಳಗ್ಗೆ ಭೇಟಿ ನೀಡಿ ವಿವಿಧ ಸಾರ್ವಜನಿಕ ಸೌಲಭ್ಯಗಳು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಕಾರ್ಯನಿಮಿತ್ತ ಕಚೇರಿಗಳಿಗೆ ಬರುವ ರೈತರು, ಸಾರ್ವಜನಿಕರನ್ನು ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹುಚ್ಚವ್ವನಹಳ್ಳಿ ಗ್ರಾಮದಲ್ಲಿ 50 ವರ್ಷದ ಹಿಂದೆ ನಿರ್ಮಾಣವಾದ ಓವರ್ ಹೆಡ್ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡು ಸೋರುತ್ತಿರುವುದನ್ನು ವೀಕ್ಷಣೆ ಮಾಡಿದರು. ನೂತನ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದರು. ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಗ್ರಾಮಗಳ ಅಭಿವೃದ್ಧಿ, ಸ್ವಚ್ಛತೆ ಮತ್ತು ಸಾರ್ವಜನಿಕ ಸೇವೆಗಳ ಸುಧಾರಣೆಗಾಗಿ ಮಹತ್ವದ ಸೂಚನೆಗಳನ್ನು ನೀಡಿದರು. ಗ್ರಾಮದ ಪಶು ಆಸ್ಪತ್ರೆ, ಶುದ್ಧ ನೀರಿನ ಘಟಕ, ಗ್ರಂಥಾಲಯ, ಅಂಗನವಾಡಿ ಕೇಂದ್ರ, ನ್ಯಾಯಬೆಲೆ ಅಂಗಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಹಲವಾರು ಕಡೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ರೈತರೊಂದಿಗೆ ಸಂವಾದ ನಡೆಸಿ ಕುಂದುಕೊರತೆ ಅಲಿಸಿದರು. ಅಂಗವಿಕಲರ ಸಮಸ್ಯೆಗಳ ಕುರಿತು ಚರ್ಚಿಸಿ, ಅಗತ್ಯ ಸವಲತ್ತು ಕಲ್ಪಿಸುವಂತೆ ಸೂಚಿಸಿದರು. ಜಲ ಜೀವನ್ ಮಿಷನ್ ಕಾಮಗಾರಿಗಳ ಪ್ರಗತಿ ವೀಕ್ಷಿಸಿದರು.
ಅಣಬೇರು, ಹುಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೇಟಿ ನೀಡಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಧಾನ್ಯಗಳ ಗುಣಮಟ್ಟ ಪರಿಶೀಲಿಸಿದರು.
ಈ ವೇಳೆ ಅಣಬೇರು ಗ್ರಾಪಂ ಪಿಡಿಒ ವಿದ್ಯಾವತಿ, ಹುಚ್ಚವ್ವನಹಳ್ಳಿ ಗ್ರಾಪಂ ಪಿಡಿಒ ಅನಿತಾ, ಅಧ್ಯಕ್ಷೆ ಜ್ಯೋತಿ ಮಹಾಬಲೇಶ್, ಉಪಾಧ್ಯಕ್ಷ ಕೆ.ಜಿ.ಸತೀಶ್, ಸದಸ್ಯ ಎನ್.ಬಿ.ಮಹೇಶ್, ಆರ್.ಸಿ.ಗಣೇಶ್, ವಿ.ಎಚ್.ಲತಾ, ಪೆದ್ದಪ್ಪ ಇತರರಿದ್ದರು.