ದಾವಣಗೆರೆಯಲ್ಲಿ ಸೋಮವಾರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು, ಖಾಸಗಿ ಶಾಲೆಗಳ ಕಾನೂನು ಬದ್ಧತೆಯ ವಿವರ ನೀಡುವಂತೆ ಬಿಇಒಗೆ ಮನವಿ ಸಲ್ಲಿಸಿದರು. ಸುರೇಶ್ ಎಂ, ಸಂತೋಷ್ ನಾಯ್ಕ, ವಿನಯ್, ಪ್ರಶಾಂತ್, ಕಿರಣ್ ಕುಮಾರ್, ಸುನೀಲ್, ಸಾಗರ್, ಪೃಥ್ವಿ, ಅಜಿತ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಮನವಿ
ಕಾನೂನು ಕ್ರಮ ಕೈಗೊಳ್ಳಲು ಆಗ್ರಹ
ದಾವಣಗೆರೆ :ನಗರದ ಖಾಸಗಿ ಶಾಲೆಗಳ ಕಾನೂನು ಬದ್ಧತೆಯ ವಿವರ ನೀಡುವಂತೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಸಂಘಟನೆಯ ಪದಾಧಿಕಾರಿಗಳು ಸೋಮವಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಉತ್ತರ ಮತ್ತು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.
ನಗರದ ವಿವಿಧ ಖಾಸಗಿ ಶಾಲೆಗಳು ಪಾಲಕರ ಅಸಹಾಯಕತೆಯನ್ನು ಬಂಡವಾಳವಾಗಿಸಿಕೊಂಡು ತಾವೇ ನಿರ್ದೇಶಿಸುವ ಸಂಸ್ಥೆಗಳಿಂದ ಪಠ್ಯಪುಸ್ತಕಗಳನ್ನು ಖರೀದಿಸುವಂತೆ ಒತ್ತಡ ಹೇರುತ್ತಿವೆ ಎಂದು ಖಂಡಿಸಿದರು.
ಮಧ್ಯಮ ವರ್ಗದ ಜನರು ತಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಕಷ್ಟಪಟ್ಟು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆದರೆ ಶಾಲೆಗಳು ಪಾಲಕರ ಆರ್ಥಿಕ ಪರಿಸ್ಥಿತಿಯ ಲಾಭ ಪಡೆಯುತ್ತಿವೆ. ಇಂತಹ ಶಾಲೆಗಳ ವಿರುದ್ಧ ಇಲಾಖೆ ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ಜಿಲ್ಲೆಯಲ್ಲಿರುವ ಖಾಸಗಿ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮಗಳನ್ನು ಪಾಲಿಸುತ್ತಿವೆಯೆ, ನಿಯಮಾನುಸಾರ ಆಟದ ಮೈದಾನ ಮತ್ತು ಸೂಕ್ತ ಕಟ್ಟಡ ಹೊಂದಿವೆಯೆ, ಪ್ರತಿ ತರಗತಿಯ ಪ್ರವೇಶ ಹಾಗೂ ಇತರೆ ಶುಲ್ಕದ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆಯೆ ಎಂದು ಪರಿಶೀಲಿಸಬೇಕು.
ಆರ್‌ಟಿಇ ಕಾಯ್ದೆ 2009ರ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆಯೆ ಮತ್ತು ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತ ಸರಿಯಾಗಿದೆಯೆ ಎಂದು ಇಲಾಖೆಯು ಪಾಲಕರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಖಾಸಗಿ ಶಾಲೆಗಳು ತಮ್ಮ ಇಲಾಖಾ ಪರವಾನಗಿ ಮತ್ತು ನಿರಾಕ್ಷೇಪಣಾ ಪತ್ರವನ್ನು ನಿಯಮಬದ್ಧವಾಗಿ ನವೀಕರಿಸಿಕೊಂಡಿವೆಯೆ ಹಾಗೂ ಶಾಲೆಗಳಲ್ಲಿ ಸಿಸಿಟಿವಿ ಮತ್ತು ಅಗ್ನಿಶಾಮಕ ವ್ಯವಸ್ಥೆಯಂಥ ಸುರಕ್ಷತಾ ಸೌಕರ್ಯಗಳು ಇವೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಯಮಗಳನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಪಡಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಎಂ, ಪದಾಧಿಕಾರಿಗಳಾದ ಸಂತೋಷ್ ನಾಯ್ಕ, ವಿನಯ್, ಪ್ರಶಾಂತ್, ಕಿರಣ್ ಕುಮಾರ್, ಸುನೀಲ್, ಸಾಗರ್, ಪೃಥ್ವಿ, ಅಜಿತ್ ಇದ್ದರು.