ದಾವಣಗೆರೆ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಶಾಮನುರು ಬಸವರಾಜ್, ಉಪಾಧ್ಯಕ್ಷೆ ರಾಜೇಶ್ವರಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಧಿಕಾರಿಗಳಿಗೆ ಶಾಮನೂರು ಬಸವರಾಜಪ್ಪ ಸೂಚನೆ
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಯುವನಿಧಿ ಯೋಜನೆ ಜಾಗೃತಿಗೆ ತಾಕೀತು
ದಾವಣಗೆರೆ:ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ 4 ರಿಂದ 5 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ನಿರಂತರ ಏಳು ಗಂಟೆಯ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಬಸವರಾಜಪ್ಪ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಗೆ ಸರದಿ ಸಾಲು ಪದ್ದತಿಯಡಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ನಿಗದಿತ ಅವಧಿಯವರೆಗೆ ಅಡಚಣೆರಹಿತ, ಗುಣಮಟ್ಟದ ವಿದ್ಯುತ್ ನೀಡಬೇಕು ಎಂದು ತಾಕೀತು ಮಾಡಿದರು.
ಜಗಳೂರು ತಾಲೂಕಿನಲ್ಲಿ ಕಡಿಮೆ ಅಳತೆಯ ನಿವೇಶನಗಳಲ್ಲಿ ನಿರ್ಮಿಸಿದ 156 ಮನೆಗಳಿಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡುತ್ತಿಲ್ಲ ಎಂಬುದನ್ನು ಸದಸ್ಯರು ಪ್ರಸ್ತಾಪಿಸಿದರು. ಪರಿಶೀಲನೆ ನಡೆಸಿ, ನಿಯಮಾನುಸಾರ ವಿದ್ಯುತ್ ಪೂರೈಸಲು ಕ್ರಮ ವಹಿಸುವುದಾಗಿ ಬೆಸ್ಕಾಂ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ಮಾರ್ಚ್‌ನಲ್ಲಿ 515747 ಫಲಾನುಭವಿಗಳ 24.26 ಕೋಟಿ ರೂ. ವ್ಯಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಹೊಸ ವಿದ್ಯುತ್ ಸಂಪರ್ಕಕ್ಕೆ ತಡ ಮಾಡುವುದು ಸರಿಯಲ್ಲ ಎಂದು ಸದಸ್ಯರು ಹೇಳಿದರು.
ಪಡಿತರ ಅಂಗಡಿ ಬೆಳಗ್ಗೆ 6ಕ್ಕೆ ಓಪನ್
ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿದೆ. ಸಾರ್ವಜನಿಕರು, ವಯೋವೃದ್ಧರು ಪಡಿತರ ಪಡೆಯಲು ಬಿಸಿಲಿನಲ್ಲಿ ಸರದಿ ಸಾಲು ನಿಲ್ಲುವುದನ್ನು ತಪ್ಪಿಸಲು ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ. ಮೇ 1ರಿಂದ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿವೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ಸಭೆಗೆ ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಈ ವರ್ಷದ ಫೆಬ್ರವರಿಯಿಂದ ಏಪ್ರಿಲ್‌ವರೆಗೆ 776737.53 ಕ್ವಿಂ. ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
36 ಲಕ್ಷ ರೂ. ಸರ್ಕಾರಕ್ಕೆ ಜಮೆ
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ಮೃತ 3883 ಫಲಾನುಭವಿಗಳ ಬ್ಯಾಂಕ್ ಖಾತೆಯಲ್ಲಿನ 36 ಲಕ್ಷ ರೂ. ಗಳನ್ನು ಸರ್ಕಾರಕ್ಕೆ ಮರುಜಮೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ವಿವಿಧ ಯೋಜನೆಯ ಫಲಾನುಭವಿಗಳು ತಮ್ಮ ಜೀವಿತ ಪ್ರಮಾಣಪತ್ರ ಸಲ್ಲಿಸುವ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ನಿರೀಕ್ಷಿಸಲಾಗುತ್ತಿದೆ. ಆದೇಶ ಬಂದ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಾನಾಯ್ಕ ತಿಳಿಸಿದರು.
ಶಕ್ತಿ ಯೋಜನೆಯಡಿ ಈ ವರ್ಷದ ಏಪ್ರಿಲ್‌ರವರೆಗೆ 14,31 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, 424 ಕೋಟಿ ರೂ. ಪ್ರಯಾಣ ದರ ತಗುಲಿದೆ ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮಾಹಿತಿ ನೀಡಿದರು.
101, 102ನೇ ಮಾರ್ಗಗಳಲ್ಲಿ ಪ್ರತಿ ಬಸ್ಸಿನಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು ಸಾಮಾನ್ಯ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಈ ಮಾರ್ಗಗಳಲ್ಲಿ ತಕ್ಷಣವೇ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕು ಎಂದು ಸಮಿತಿಯ ಉಪಾಧ್ಯಕ್ಷೆ ರಾಜೇಶ್ವರಿ ತಿಳಿಸಿದರು.
ಜಗಳೂರು ಬಸ್ ನಿಲ್ದಾಣ ದುಸ್ಥಿತಿಯಲ್ಲಿದೆ. ಸಾರ್ವಜನಿಕರು ಬಿಸಿಲಿನಲ್ಲಿಯೇ ಬಸ್‌ಗಳಿಗಾಗಿ ಕಾಯುವಂತಾಗಿದೆ ಎಂದು ಸದಸ್ಯರು ಹೇಳಿದರು. ತಾತ್ಕಾಲಿಕ ಶೆಡ್ ನಿರ್ಮಿಸಲು 10 ಲಕ್ಷ ರೂ. ಮಂಜೂರಾಗಿದ್ದು, ಸ್ಥಳ ಪರಿಶೀಲಿಸಿ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಅಧಿಕಾರಿ ಸಭೆಗೆ ತಿಳಿಸಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ವಿದ್ಯಾರ್ಥಿಗಳ ಖಾತೆಗೆ ಒಟ್ಟು 36.79 ಕೋಟಿ ರೂ. ಪಾವತಿಸಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗದಿರುವುದು ಅಥವಾ ಕೆವೈಸಿ ತಾಂತ್ರಿಕ ದೋಷದಿಂದಾಗಿ ಕೆಲವರಿಗೆ ಹಣ ತಲುಪದಿರಬಹುದು. ಅಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಿ ಬಾಕಿ ಹಣ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದರು.
ಯೋಜನೆ ಬಗ್ಗೆ ಗ್ರಾಮಾಂತರ ಪ್ರದೇಶದಲ್ಲಿ ಬ್ಯಾನರ್, ಭಿತ್ತಿಪತ್ರಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬೆಕೆಂದು ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಸೂಚಿಸಿದರು.
30-40 ಹಾಗೂ ಅದಕ್ಕಿಂತ ಕಡಿಮೆ ಅಳತೆಯ ನಿವೇಶನಗಳಲ್ಲಿ ನಿರ್ಮಿಸಿದ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಯಾವುದೇ ನಿರಾಕ್ಷೇಪಣಾ ಪತ್ರದ ಅಗತ್ಯವಿಲ್ಲ. ಆದಾಗ್ಯೂ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ಮಾಡಿದರೆ, ತೊಂದರೆ ನೀಡಿದರೆ ಸಾರ್ವಜನಿಕರು ನನಗೆ ಮಾಹಿತಿ ನೀಡಬಹುದು.