ಗ್ರಾಪಂ ಪಂಚಾಯಿತಿ ನೌಕರರ ಪ್ರತಿಭಟನೆ

ಸಿಐಟಿಯು ಸಂಯೋಜಿತ ಕರ್ನಾಟಕ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದಿಂದ ದಾವಣಗೆರೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ಸಂಯೋಜಿತ ಕರ್ನಾಟಕ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದಿಂದ ದಾವಣಗೆರೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವೇತನ ಹೆಚ್ಚಳ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹ
  • 3 ತಿಂಗಳಾದರೂ ಕಾರ್ಯಗತವಾಗದ ಸರ್ಕಾರದ ಭರವಸೆ
  • ನಿಧನರಾದಲ್ಲಿ ನೀಡಲಿ 6 ಲಕ್ಷ ರೂ. ಇಡಗಂಟು
ದಾವಣಗೆರೆ: ವೇತನ ಹೆಚ್ಚಳ, ಇಎಸ್‌ಐ, ಪಿಎಫ್ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೌಕರರು, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಕಾರ್ಯದರ್ಶಿಗೆ ಮನವಿಪತ್ರ ಸಲ್ಲಿಸಿದರು.
ಬೇಡಿಕೆಗಳ ಸಂಬಂಧ 2025ರ ಡಿ. 20ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲಾಗಿತ್ತು. ಸರ್ಕಾರದ ಹಂತದಲ್ಲಿರುವ ಹಕ್ಕೊತ್ತಾಯಗಳ ಬಗ್ಗೆ ಸಚಿವರ ಜತೆ ಸಭೆ ನಡೆಸಿ ಮನವರಿಕೆ ಮಾಡಿಕೊಡುವ ಬಗ್ಗೆ ಹಾಗೂ ಉಳಿದ ಬೇಡಿಕೆಗಳನ್ನು ಶೀಘ್ರ ಇತ್ಯರ್ಥಪಡಿಸುವುದಾಗಿ ಸರ್ಕಾರದ ಕಾರ್ಯದರ್ಶಿ ಭರವಸೆ ನೀಡಿದ್ದರು. 3 ತಿಂಗಳಾದರೂ ಕಾರ್ಯಗತವಾಗಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್, ನೀರಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರೆಂದು ಘೋಷಿಸಬೇಕು. ಸರ್ಕಾರವೇ ಒಪ್ಪಿದಂತೆ ಎಲ್ಲ ನೌಕರರಿಗೆ 5000 ರೂ. ವೇತನ ಹೆಚ್ಚಿಸಲು ಇಲಾಖಾ ಆದೇಶ ಹೊರಡಿಸಬೇಕು.
ನೌಕರರು ನಿವೃತ್ತಿ/ನಿಧನರಾದರೆ 6 ಲಕ್ಷ ರೂ. ಇಡಗಂಟು ನೀಡಬೇಕು. ತರಬೇತಿ ಪಡೆದಿರುವ ಎಲ್ಲಾ ಸ್ವಚ್ಛವಾಹಿನಿ ನೌಕರರಿಗೆ ಉದ್ಯೋಗ ನೀಡಬೇಕು. ಒಡಂಬಡಿಕೆ ಪತ್ರ ಮತ್ತು ಪ್ರತಿ ವರ್ಷದ ನವಿಕರಣ ಪದ್ದತಿ ರದ್ದುಪಡಿಸಬೇಕು. 15ನೇ ಹಣಕಾಸಿನಡಿ ವೇತನ ಪಾವತಿಸಬೇಕು.
ಪಂಚಾಯಿತಿಗೆ ಒಬ್ಬರೇ ಚಾಲಕರೆಂದು ಪರಿಗಣಿಸಿ 15 ಸಾವಿರ ರೂ. ವೇತನ ನೀಡಬೇಕು. 1 ಲಕ್ಷ 20 ಸಾವಿರ ರೂ. ಆದಾಯವುಳ್ಳ ನೌಕರರು ಮತ್ತು ಕಾರ್ಮಿಕರ ಪಡಿತರ ಚೀಟಿ ರದ್ದುಪಡಿಸದೆ ಕನಿಷ್ಠ ವೇತನ ಮಾನದಂಡದಂತೆ ಆದಾಯದ ಮಿತಿ ಹೆಚ್ಚಿಸಬೇಕು. ಗ್ರಾಮ ಪಂಚಾಯಿತಿಗಳ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಿ ಮುಂದುವರೆಸಬೇಕು.
ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು. 2017 ರ ಒಳಗೆ ಇರುವ ಹೆಚ್ಚುವರಿ ಕರವಸೂಲಿಗಾರರಿಗೆ ಅನುಮೋದನೆ ನೀಡಬೇಕು. ಇ- ಹಾಜರಾತಿ ಲೋಪದೋಷಗಳನ್ನು ಪಂಚತಂತ್ರದಲ್ಲಿ ಸರಿಪಡಿಸುವವರೆಗೆ ಗ್ರಾಪಂ ಸಿಬ್ಬಂದಿಗೆ ಪೂರ್ಣ ವೇತನ ಪಾವತಿಸಬೇಕು.
ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಬೇಕು. ಗ್ರೇಡ್- 1 ಕಾರ್ಯದರ್ಶಿಗಳಿಂದ ಪಿ.ಡಿ.ಒ ಹುದ್ದೆಗೆ ರಾಜ್ಯಮಟ್ಟದಲ್ಲಿ ಕೊಡುವ ಮುಂಬಡ್ತಿಯನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿಗೆ ಅವಕಾಶ ನೀಡಬೇಕು. ಗ್ರೇಡ್-1 ಪಂಚಾಯಿತಿಗಳನ್ನು ಜನಸಂಖ್ಯೆಗೆ ಆಧರಿಸಿ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಚ್.ಆನಂದರಾಜು, ಅಧ್ಯಕ್ಷ ಶ್ರೀನಿವಾಸಾಚಾರಿ, ಕಾರ್ಯದರ್ಶಿಗಳಾದ ಬಸವರಾಜು, ಗುಡಾಳ್ ತಿಪ್ಪೇಸ್ವಾಮಿ, ಕೃಷ್ಣ, ಕರಿಬಸಪ್ಪ, ಮಹಾಂತೇಶ್, ಚಂದ್ರಪ್ಪ, ಭಾನುವಳ್ಳಿ ಗೋವಿಂದ, ರಾಜೇಶ್ವರಿ, ಉಷಾ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net