ಹೊನ್ನಾಳಿ: ಮೆಕ್ಕೆಜೋಳ, ಭತ್ತ, ರಾಗಿ ಹಾಗೂ ಅಡಕೆ ಬೆಳೆಗಳಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ನ.28 ರಂದು ಹೊನ್ನಾಳಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಹಸಿರು ಸೇನೆ ಅಧ್ಯಕ್ಷ ಕರಿಬಸಪ್ಪ ಗೌಡ ಹೇಳಿದರು.
ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೇಂದ್ರದ ಬಿಜೆಪಿ ಹಾಗೂ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಎರಡೂ ರೈತ ವಿರೋಧಿಗಳೇ, ಈ ಇಬ್ಬರೂ ರೈತರ ಪರವಾಗಿ ಹೋರಾಟ ಮಾಡುತ್ತಾರೆ. ಆದರೆ ಫಲಿತಾಂಶ ಶೂನ್ಯ. ಯಾವ ಸಮಸ್ಯೆಗಳಿಗೂ ಇವರಿಂದ ಇದುವರೆಗೂ ಪರಿಹಾರ ದೊರಕಿಲ್ಲ. ಇವರಿಗೆ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ ಎಂದರು.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರೈತ ಪರ ಕಾನೂನುನನ್ನು ಜಾರಿ ಮಾಡಲು ನಿಮಗೆ ಏನಾಗಿದೆ ಎಂದು ಪ್ರಶ್ನಿಸಿದರು. ಒಂದು ರಾಜಕೀಯ ಪಕ್ಷ ಇನ್ನೊಂದು ಪಕ್ಷದ ಮೇಲೆ ಆರೋಪ, ಪ್ರತ್ಯಾರೋಪ ಮಾಡಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದೀರಿ ಎಂದು ದೂರಿದರು.
ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಖರೀದಿ ಕೇಂದ್ರ ತೆರೆಯಲು ಅನುದಾನ ಬಿಡುಗಡೆ ಮಾಡಿಲ್ಲ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಖರೀದಿ ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಭಾರತ ಸರ್ಕಾರ ಮೆಕ್ಕೆಜೋಳ ಆಹಾರ ಪದಾರ್ಥವಲ್ಲ ಎಂದು ಕೈ ತೊಳೆದುಕೊಂಡಿದೆ. ರಾಜ್ಯದ 19 ಜನ ಸಂಸದರು ಸೇರಿ ಇತರ ಎಲ್ಲರೂ ಮೆಕ್ಕೆಜೋಳ ಆಹಾರ ಪದಾರ್ಥ ಹೌದೋ, ಅಲ್ಲವೋ ಎಂದು ಹೇಳಬೇಕು ಎಂದು ಒತ್ತಾಯಿಸಿದರು.
ಮೆಕ್ಕೆಜೋಳದ ಬೆಳೆಯಿಂದ 30 ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆದರೂ ಇದು ಆಹಾರ ಪದಾರ್ಥವಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಅಡಕೆ ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅಡಕೆ ಮಂಡಳಿ ರಚಿಸಿ, ಬೆಲೆ ಕುಸಿತದ ಬಗ್ಗೆ ತನಿಖೆಯಾಗಬೇಕು. ಬೆಳೆಗಾರರ ಹಿತ ಕಾಪಾಡಬೇಕು ಎಂದರು.
ಹಸಿರು ಟವಲ್‌ಗೆ ಅವಮಾನ
ಇತ್ತೀಚೆಗೆ ಕೆಲ ರಾಜಕಾರಣಿಗಳು ಹಸಿರು ಟವಲ್ ಹಾಕಿಕೊಂಡು ಹೈಡ್ರಾಮಾ ಮಾಡುತ್ತಿದ್ದಾರೆ. ಇದರಿಂದ ಹಸಿರು ಟವಲ್‌ಗೆ ಅವಮಾನ ಮಾಡಿದಂತಾಗುತ್ತಿದೆ. ಆದ್ದರಿಂದ ಇನ್ನು ಮುಂದೆ ಹಸಿರು ಟವಲ್‌ಗಳನ್ನು ಹಾಕಬಾರದು ಎಂದು ಮನವಿ ಮಾಡಿದರು.
ತಾಲೂಕು ರೈತಸಂಘದ ಅಧ್ಯಕ್ಷ ಬಸಪ್ಪ ಅರಬಗಟ್ಟೆ ಮಾತನಾಡಿ, ಮೆಕ್ಕೆಜೋಳಕ್ಕೆ 3500 ರೂ., ರಾಗಿ ಬೆಳೆಗೆ 5500 ರೂ. ಹಾಗೂ ಭತ್ತಕ್ಕೆ 3500 ರೂ. ಬೆಂಬಲ ಬೆಲೆ ಘೋಷಿಸಬೇಕು ಎಂದರು.
ನ.28 ರಂದು ಸಾವಿರಾರು ರೈತರನ್ನು ಸೇರಿಸಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಹೇಳಿದರು.