

ಹೊನ್ನಾಳಿ: ಅಸಮರ್ಪಕವಾಗಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ ತೊಂದರೆಗೆ ಕಾರಣವಾದ ವೈದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪವಿತ್ರಾ ಹಾಲೇಶ್ ನಾಯ್ಕ ಅವರು ತಮ್ಮ ಪತಿ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ತಾಲೂಕು ಕಚೇರಿ ಮುಂಭಾಗ ಆರಂಭಿಸಿರುವ ಧರಣಿ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಎರಡು ವರ್ಷಗಳ ಹಿಂದೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಿಂದ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೆ. ಆದರೆ, ವೈದ್ಯರ ನಿರ್ಲಕ್ಷೃದಿಂದ ಚಿಕಿತ್ಸೆ ವಿಫಲಗೊಂಡು ನಾನು ಮತ್ತೆ ಗರ್ಭವತಿಯಾಗಿದ್ದೇನೆ. ಇದರಿಂದ ನಮ್ಮ ಕುಟುಂಬಕ್ಕೆ ಆರ್ಥಿಕ ಹೊರೆ ಹೆಚ್ಚಾಗಿದೆ. ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲಾಖೆಯ ತಪ್ಪು ಮಾಹಿತಿಯಿಂದ ನಮಗೆ ಅನ್ಯಾಯವಾಗಿದೆ ಎಂದು ಪವಿತ್ರಾ ಅಳಲು ತೋಡಿಕೊಂಡರು.
ನ್ಯಾಯ ಸಿಗುವವರೆಗೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸ್ಥಳಕ್ಕೆ ಆಗಮಿಸಿ ಭರವಸೆ ನೀಡುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಆರುಷಿ ಯೋಜನೆ ರೂವಾರಿ ಚನ್ನೇಶ್ಜಕ್ಕಾಳಿ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ನಿರಂತರವಾಗಿ ಲೋಪದೋಷಗಳು ನಡೆಯುತ್ತಿವೆ. ಈ ಬಗ್ಗೆ ಪ್ರಶ್ನೆ ಮಾಡಿ ಲೋಪ ಸರಿ ಮಾಡಿಕೊಳ್ಳುವಂತೆ ತಿಳಿಸಿದ್ದರೂ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಸಂತ್ರಸ್ತ ಮಹಿಳೆಗೆ ತಕ್ಷಣ ನ್ಯಾಯ ಸಿಗಬೇಕು ಹಾಗೂ ಶಸ್ತ್ರಚಿಕಿತ್ಸೆ ವಿಫಲಗೊಳಿಸಿದ ವೈದ್ಯರನ್ನು ಅಮಾನತುಗೊಳಿಸಬೇಕು ಎಂದರು. ಸಂತ್ರಸ್ತೆಯ ಪತಿ ಹಾಲೇಶ್ ನಾಯ್ಕ, ಪ್ರಮುಖರಾದ ದತ್ತಣ್ಣ, ಗುರುಮೂರ್ತಿ, ಸುರೇಶ್ ನಾಯ್ಕ ಇತರರಿದ್ದರು.