ಹೊನ್ನಾಳಿ ತಾಲೂಕು ಬಿಜೆಪಿ ಘಟಕದಿಂದ ಪ್ರತಿಭಟನೆ

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವಿಳಂಬಕ್ಕೆ ಆಕ್ರೋಶ
protest
ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವಿಳಂಬ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಅರಕೆರೆ ನಾಗರಾಜ್, ಎಸ್.ಎಸ್. ಬೀರಪ್ಪ, ನೆಲಹೊನ್ನೆ ಮಂಜುನಾಥ್, ಎಂ.ಆರ್.ಮಹೇಶ್, ಮಾರುತಿನಾಯ್ಕ ಇತರರು ಇದ್ದರು.protest
Published on: 

ಹೊನ್ನಾಳಿ: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವಿಳಂಬ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ತಾಲೂಕು ಬಿಜೆಪಿ ಘಟಕದಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. ಬಿಜೆಪಿ ಕಾರ್ಯಕರ್ತರು ಟಿ.ಬಿ. ವೃತ್ತದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಚಿವ ಸ್ಥಾನ ತ್ಯಾಗ ಮಾಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 519 ಕೋಟಿ ರೂ. ಅನುದಾನ ತಂದರೂ, ಸರ್ಕಾರದ ಅನಗತ್ಯ ವಿಳಂಬ ನೀತಿಯಿಂದಾಗಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

2020ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 519 ಕೋಟಿ ವೆಚ್ಚದ ಯೋಜನೆಗೆ ಸಂಪುಟದ ಅನುಮೋದನೆ ಪಡೆದು ಪೂರ್ಣ ಹಣ ಮೀಸಲಿಡಲಾಗಿತ್ತು. ಹನುಮಸಾಗರ, ಗೋವಿನಕೋವಿ, ಕುರುವ, ಬೆನಕನಹಳ್ಳಿ, ಕಮ್ಮಾರಗಟ್ಟೆ ಹಾಗೂ ಸವಳಂಗ ಬಳಿ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಮುಕ್ತಾಯವಾಗಿ ಮೋಟಾರ್, ಜಾಕ್‌ವೆಲ್ ಸೇರಿ ಎಲ್ಲ ಕಾಮಗಾರಿ ಮುಗಿದಿದೆ. ಆದರೆ ಅಧಿಕಾರಿಗಳು ಅನಗತ್ಯ ವಿಳಂಬದಿಂದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಯೋಜನೆಗೆ ಚಾಲನೆ ನೀಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ ಎಂದರು.

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಭೀಕರ ಬರಗಾಲವಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಕುಡಿಯುವ ನೀರಿಲ್ಲದೆ ಜನ-ಜಾನುವಾರುಗಳು ಪರಿತಪಿಸುತ್ತಿವೆ. ನಾವು ಪ್ರಚಾರಕ್ಕಾಗಿ ಈ ಪ್ರತಿಭಟನೆ ಮಾಡುತ್ತಿಲ್ಲ, ರೈತರ ಕಣ್ಣೀರು ಒರೆಸಲು ಮತ್ತು ಅವರ ಬದುಕಿಗಾಗಿ ಧ್ವನಿ ಎತ್ತುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನಮ್ಮ ಪಾಲಿನ 3 ಟಿಎಂಸಿ ನೀರನ್ನು ಚಿತ್ರದುರ್ಗಕ್ಕೆ ನೀಡಲಾಗುತ್ತಿದೆ. ಅಲ್ಲಿಯ ರೈತರಿಗೂ ನೀರು ಸಿಗಲಿ, ನಮಗೇನು ಅಭ್ಯಂತರವಿಲ್ಲ. ಆದರೆ ನಮಗೆ ನೀರು ಏಕೆ ಕೊಡುತ್ತಿಲ್ಲ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ಎಸ್.ಎಸ್. ಬೀರಪ್ಪ, ನೆಲಹೊನ್ನೆ ಮಂಜುನಾಥ್, ಎಂ.ಆರ್. ಮಹೇಶ್, ತರಗನಹಳ್ಳಿ ರಮೇಶ್‌ಗೌಡ, ಮಾರುತಿನಾಯ್ಕ, ಎಂ.ಎಸ್. ಫಾಲಾಕ್ಷಪ್ಪ, ಬಾಬು ಹೋಬಳದಾರ್, ನವೀನ್ ಇಂಚರ, ಸದಾಶಿವ, ರಘು, ನಾಗರಾಜ್ ಮಾದೇನಹಳ್ಳಿ ಇತರರಿದ್ದರು.

ವಿಧಾನಸೌಧ ಮುತ್ತಿಗೆ ಬೆದರಿಕೆ

ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇದ್ದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಮುಖ್ಯಮಂತ್ರಿಗಳು ಸ್ಟಿಂಗ್ ಆಪರೇಷನ್‌ನಲ್ಲಿ ಮಗ್ನರಾಗಿದ್ದಾರೆ. ಜತೆಗೆ ರಾಹುಲ್‌ಗಾಂಧಿಯನ್ನು ಮೆಚ್ಚಿಸಲು ದೆಹಲಿಯಲ್ಲಿ ನಡೆಯುವ ಪ್ರತಿಭಟನೆಗೆ ಹೋಗುತ್ತಾರೆ. ಇವರಿಗೆ ರಾಜ್ಯದ ಜನರ ನೆನಪಾಗುವುದಿಲ್ಲವೇ ಎಂದು ಎಂ.ಪಿ. ರೇಣುಕಾಚಾರ್ಯ ಪ್ರಶ್ನಿಸಿದರು. ತಕ್ಷಣ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡದಿದ್ದರೆ, ಮುಂಬರುವ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮದಿಂದ ಬಸ್‌ಗಳ ಮೂಲಕ ಕಾರ್ಯಕರ್ತರನ್ನು ಕರೆದೊಯ್ದು ಬೆಂಗಳೂರಿನ ವಿಧಾನಸೌಧ ಅಥವಾ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು. ಇದಕ್ಕೂ ಮುನ್ನ ಮತ್ತೊಮ್ಮೆ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net