ಕನ್ನೇರಿ ಮಠದ ಶ್ರೀಗಳ ವಿರುದ್ಧ ಪ್ರತಿಭಟನೆ

ದಾವಣಗೆರೆಯಲ್ಲಿ ಗುರುವಾರ ಕನ್ನೇರಿ ಮಠದ ಶ್ರೀಗಳ ವಿರುದ್ಧ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು. ಎಂ. ಶಿವಕುಮಾರ್, ಮರುಳಸಿದ್ದಯ್ಯ, ವಿಶ್ವೇಶ್ವರಯ್ಯ, ಶಶಿ ಬಸಾಪುರ, ವೀಣಾ, ಕುಸುಮಾ ಇತರರು ಇದ್ದರು.
ದಾವಣಗೆರೆಯಲ್ಲಿ ಗುರುವಾರ ಕನ್ನೇರಿ ಮಠದ ಶ್ರೀಗಳ ವಿರುದ್ಧ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು. ಎಂ. ಶಿವಕುಮಾರ್, ಮರುಳಸಿದ್ದಯ್ಯ, ವಿಶ್ವೇಶ್ವರಯ್ಯ, ಶಶಿ ಬಸಾಪುರ, ವೀಣಾ, ಕುಸುಮಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸವ ಭಕ್ತರನ್ನು ನಿಂದಿಸಿದ್ದಕ್ಕೆ ಖಂಡನೆ
  • ಜಾಗತಿಕ ಲಿಂಗಾಯತ ಮಹಾಸಭಾದಿಂದ ಆಯೋಜನೆ
ದಾವಣಗೆರೆ : ಕನ್ನೇರಿ ಮಠದ ಶ್ರೀಗಳು ಬಸವ ಭಕ್ತರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ, ಶ್ರೀಗಳ ಪದ ಬಳಕೆಯನ್ನು ಖಂಡಿಸಿದರು. ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಹನ್ನೆರಡನೇ ಶತಮಾನದಲ್ಲಿ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರು ಸಮಾಜದಲ್ಲಿರುವ ಮೌಢ್ಯ, ಅಂಧಕಾರ, ಕಂದಾಚಾರ, ವೈದಿಕಶಾಹಿಯಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ ಜನರನ್ನು ಜಾಗೃತಿಗೊಳಿಸಿದವರು. ವಚನಗಳ ಮೂಲಕ ಸಾಮಾನ್ಯ ಜನರಿಗೂ ಸಾಹಿತ್ಯದ ಅರಿವನ್ನು ಮೂಡಿಸಿದರು. ಕನ್ನಡದಲ್ಲಿ ವಚನಗಳನ್ನು ರಚಿಸಿ ಭಾಷೆ ಶ್ರೀಮಂತವಾಗಲು ಕೊಡುಗೆ ನೀಡಿದರು ಎಂದರು.
ಇಂತಹ ಶರಣ ಧರ್ಮವನ್ನು, ವಚನ ಸಾಹಿತ್ಯವನ್ನು ನಾಡಿನೆಲ್ಲೆಡೆ ಪ್ರಚಾರ ಪಡಿಸಲು ಅನೇಕ ಬಸವಪರ ಸಂಘಟನೆಗಳು, ಬಸವ ಅನುಯಾಯಿಗಳು, ಮಠ-ಮಾನ್ಯಗಳು ಹಲವಾರು ವರ್ಷಗಳಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಬಸವ ಬಳಗ, ಬಸವ ಧರ್ಮಪೀಠ, ಬಸವ ಬ್ರಿಗೇಡ್ ಸೇರಿ ಹತ್ತಾರು ಸಂಘಟನೆಗಳ ಸಹಕಾರದೊಂದಿಗೆ ಬಸವ ಸಂಸ್ಕೃತಿ ಅಭಿಯಾನ ಆಯೋಜಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರ್ವ ಜನಾಂಗಗಳೊಂದಿಗೆ ಸಾಮರಸ್ಯ ನಡಿಗೆ, ವಿದ್ಯಾರ್ಥಿಗಳೊಂದಿಗೆ ಸಂವಾದ, ವೇದಿಕೆಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಸವ ತತ್ವ ಪ್ರಚಾರವನ್ನು ಯಶಸ್ವಿಯಾಗಿ ನಡೆಸಿತು ಎಂದು ಪ್ರತಿಭಟನಾಕಾರರು ಹೇಳಿದರು.
ಈ ಅಭಿಯಾನದ ನಂತರ ಕನ್ನೇರಿ ಮಠದ ಶ್ರೀಗಳು ಮಠಾಧಿಪತಿಗಳನ್ನು, ಬಸವಾಭಿಮಾನಿಗಳನ್ನು ಉದ್ದೇಶಿಸಿ ಹೀನ ಪದಗಳಿಂದ ನಿಂದಿಸಿದರು. ಆ ಸಮಯದಲ್ಲಿ ಬಸವಾಭಿಮಾನಿಗಳು ಕನ್ನೇರಿ ಶ್ರೀಗಳನ್ನು ವಿರೋಧಿಸಿದರು. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಇವರನ್ನು ಮೂರು ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿರ್ಬಂಧ ಹೇರಿತು.
ಇದರ ವಿರುದ್ಧವಾಗಿ ನ್ಯಾಯಾಲಯದಲ್ಲಿ ಕನ್ನೇರಿ ಶ್ರೀಗಳು ದಾವೆ ಹೂಡಿದರು. ಕನ್ನೇರಿ ಶ್ರೀಗಳಿಗೆ ನ್ಯಾಯಾಲಯ ಕೂಡ ಛೀಮಾರಿ ಹಾಕಿತು. ಮೊದಲು ನಿಮ್ಮ ಭಾಷೆಯನ್ನು ಸರಿಪಡಿಸಿಕೊಳ್ಳಿ ಎಂದು ಎಚ್ಚರಿಸಿತು.
ಇದಾದ ಕೆಲವು ದಿನಗಳವರೆಗೆ ಸುಮ್ಮನಿದ್ದ ಕನ್ನೇರಿ ಶ್ರೀಗಳು ಕೆಲವು ಸಂಘಟನೆಗಳೊಂದಿಗೆ ಬಸವಾದಿ ಶರಣರ ಹಿಂದು ಸಮಾವೇಶ ಎಂಬ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಮತ್ತೆ ಬಸವಾಭಿಮಾನಿಗಳನ್ನು, ಬಸವ ತಾಲಿಬಾನಿಗಳೆಂದು ಇನ್ನೂ ಅನೇಕ ಪದಗಳಿಂದ ವಿವಿಧ ವೇದಿಕೆಗಳಲ್ಲಿ ನಿಂದಿಸುತ್ತ ಬಂದಿದ್ದಾರೆ.
ಇವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡದಂತೆ ಎಚ್ಚರಿಕೆ ನೀಡಬೇಕು. ಇದೇ ರೀತಿ ಮುಂದುವರಿದರೆ ಇವರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶಿವಕುಮಾರ್, ಮರುಳಸಿದ್ದಯ್ಯ, ವಿಶ್ವೇಶ್ವರಯ್ಯ, ಶಶಿ ಬಸಾಪುರ, ವೀಣಾ, ಕುಸುಮಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net