ಜಿಲ್ಲಾಧಿಕಾರಿ ವಿರುದ್ಧ ವಾರದೊಳಗೆ ಧರಣಿ

ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹರಿಹರ ಶಾಸಕ ಬಿ. ಪಿ.ಹರೀಶ್ ಜತೆ ಯಶವಂತರಾವ್ ಜಾಧವ್, ಶಿವನಗೌಡ ಪಾಟೀಲ್ ಇದ್ದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹರಿಹರ ಶಾಸಕ ಬಿ. ಪಿ.ಹರೀಶ್ ಜತೆ ಯಶವಂತರಾವ್ ಜಾಧವ್, ಶಿವನಗೌಡ ಪಾಟೀಲ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಣ್ಣು ಸಾಗಣೆ ಸೇರಿ 2 ಪ್ರಕರಣದಲ್ಲಿ ನಿರ್ಲಕ್ಷೃ
  • ಎಸ್ಸೆಸ್ಸೆಂ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು
  • ಹರಿಹರ ಶಾಸಕ ಬಿ.ಪಿ. ಹರೀಶ್ ಆಕ್ರೋಶ
ದಾವಣಗೆರೆ: ಹರಪನಹಳ್ಳಿ ತಾಲೂಕಿನಲ್ಲಿ ಅಕ್ರಮವಾಗಿ ಹಳ್ಳ ಮುಚ್ಚಲಾದ ಹಾಗೂ ಕಾಡಜ್ಜಿ ಗ್ರಾಮದ ಕೃಷಿ ಬೀಜೋತ್ಪನ್ನ ಕೇಂದ್ರದ ಮಣ್ಣು ಅಕ್ರಮ ಸಾಗಣೆ ಪ್ರಕರಣಗಳಲ್ಲಿ ತನಿಖಾ ತಂಡ ವರದಿ ನೀಡಿದೆ. ಸ್ಥಳ ಪರಿಶೀಲನೆ ಮಾಡದೆ ನಿರ್ಲಕ್ಷೃ ತೋರಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ವಿರುದ್ಧ ಧರಣಿ ನಡೆಸುವುದಾಗಿ ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿದ್ದಾರೆ.
ಸಿರಿಗೆರೆ ಶ್ರೀಗಳ ಹೇಳಿಕೆ ನಂತರದಲ್ಲಿ ನಾನು ಕೆಲ ತಿಂಗಳು ಮೌನ ತಾಳಿದ್ದೆ. ಹೋರಾಟಕ್ಕೆ ಬೆಲೆ ಇಲ್ಲವಾಗಿದೆ. ಇದಕ್ಕೆ ತಾರ್ಕಿಕ ಅಂತ್ಯ ಹಾಡುವ ಉದ್ದೇಶವಿದೆ. ಹೀಗಾಗಿ ಪಕ್ಷದ ವರಿಷ್ಠರ ಜತೆ ಸಮಾಲೋಚಿಸಿ, ಮೊದಲ ಹಂತದ ಹೋರಾಟವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ವಾರದೊಳಗೆ ಧರಣಿ ಕೂರುತ್ತೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಖಾನೆ ಬಳಿ ಹಳ್ಳ ಮುಚ್ಚಿ ಕಾನೂನು ಉಲ್ಲಂಘನೆ ಮಾಡಿದ್ದರ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಿದಾಗ ರಾಜ್ಯ ಸರ್ಕಾರದ ನಿಯೋಜಿತ ತನಿಖಾ ತಂಡ ಸ್ಥಳ ಪರಿಶೀಲಿಸಿದ್ದು, ಅಕ್ರಮವಾಗಿ ಹಳ್ಳ ಮುಚ್ಚಿರುವುದು ಸತ್ಯ ಎಂದು ವರದಿ ನೀಡಿದೆ. ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.
ಇಷ್ಟಾದರೂ ಜಿಲ್ಲಾಧಿಕಾರಿ ಪರಿಶೀಲಿಸಿ, ಕ್ರಮ ವಹಿಸಲಿಲ್ಲ. ಮಲ್ಲಿಕಾರ್ಜುನ ಅವರ ಸ್ವಂತ ಜಮೀನು ಸಮತಟ್ಟು ಮಾಡಿಕೊಳ್ಳಲು ಕಾಡಜ್ಜಿ ಗ್ರಾಮದ ಕೃಷಿ ಇಲಾಖೆಯ ಮಣ್ಣನ್ನು ಅಕ್ರಮವಾಗಿ ಸಾಗಣೆ ಮಾಡಿದ್ದರೂ ಅವರ ವಿರುದ್ಧ ಶಿಕ್ಷೆಯ ಕ್ರಮವಾಗಿಲ್ಲ. ಈ ಬಗ್ಗೆ ಹೋರಾಟ ಮಾಡಿದರೆ ನನ್ನ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಾಗುತ್ತಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.
ಭಗವಾನ್ ವಿರುದ್ಧ ಕ್ರಮವಾಗಲಿ
ಹರಿಹರದ ಮೈತ್ರಿವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸರ್ಕಾರವೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದೂ ಹರೀಶ್ ಆಗ್ರಹಿಸಿದರು.
ಪ್ರಚೋದನಾತ್ಮಕ ಭಾಷಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುವ ಸರ್ಕಾರ ಭಗವಾನ್ ಹೇಳಿಕೆ ಬಗ್ಗೆ ಮೌನ ತಾಳಿದೆ. ಭಗವಾನ್ ಅವರಿಗೆ ವಯಸ್ಸು ಜಾಸ್ತಿ ಆಗಿದೆ. ಅರಳು ಮರುಳು ಎಂಬಂತೆ ವರ್ತಿಸುತ್ತಿದ್ದಾರೆ. ಅವರ ಹೇಳಿಕೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಸಮಾಜದಲ್ಲಿ ಅಶಾಂತಿ ಮೂಡಿಸುವ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಅಗ್ಗದ ಪ್ರಚಾರಕ್ಕಾಗಿ ಆರೆಸ್ಸೆಸ್ ಬಗ್ಗೆ ಟೀಕಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಈ ಹಿಂದೆ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆರೆಸ್ಸೆಸ್ಸನ್ನು ದೇಶದಿಂದ ನಿರ್ಮೂಲನೆ ಮಾಡುವಲ್ಲಿ ನೆಹರೂ ಮನೆತನ ಯಶ ಕಾಣಲಿಲ್ಲ. ಅಂತೆಯೇ ಪ್ರಿಯಾಂಕ ಖರ್ಗೆ ಅವರು ಆರೆಸ್ಸೆಸ್ ಬಗ್ಗೆ ಮಾತನಾಡುವುದನ್ನು ಕೈಬಿಟ್ಟು ಹೆಚ್ಚಿರುವ ಭ್ರಷ್ಟಾಚಾರ, ಮಟ್ಕಾ ಜೂಜಾಟ ನಿಲ್ಲಿಸಲಿ ಎಂದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶಿವನಗೌಡ ಪಾಟೀಲ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net