ಹರಿಯಾಣದ ಗುರ್‌ಗಾಂವ್, ಉತ್ತರಪ್ರದೇಶದ ನೋಯ್ಡದಲ್ಲಿ ಕಾರ್ಮಿಕರು, ಹೋರಾಟಗಾರರ ಮೇಲಿನ ಪೊಲೀಸ್ ದೌರ್ಜನ್ಯ ವಿರೋಧಿಸಿ ಎಐಯುಟಿಯುಸಿ ಜಿಲ್ಲಾ ಸಮಿತಿ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ, ತಿಪ್ಪೇಸ್ವಾಮಿ ಅಣಬೇರು, ಶಿವಾಜಿರಾವ್, ಉದಯ್, ಲೋಕೇಶ್ ಇತರರಿದ್ದರು.
ದಾವಣಗೆರೆ:ಹರಿಯಾಣದ ಗುರ್‌ಗಾಂವ್ ಹಾಗೂ ಉತ್ತರಪ್ರದೇಶದ ನೋಯ್ಡದಲ್ಲಿ ಕಾರ್ಮಿಕರು, ಹೋರಾಟಗಾರರ ಮೇಲಿನ ಪೊಲೀಸ್ ದೌರ್ಜನ್ಯ ಹಾಗೂ 400ಕ್ಕೂ ಹೆಚ್ಚು ಜನರ ಬಂಧನ ವಿರೋಧಿಸಿ ಎಐಯುಟಿಯುಸಿ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಉಪವಿಭಾಗ ಅಧಿಕಾರಿಗಳ ಬಳಿ ಪ್ರತಿಭಟನೆ ನಡೆಸಿ ಅಲ್ಲಿನ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ಗುರ್‌ಗಾಂವ್, ನೋಯ್ಡದಲ್ಲಿ ಹೋರಾಟನಿರತರ ಮೇಲೆ ನಡೆಸಿರುವ ಪೊಲೀಸ್ ದೌರ್ಜನ್ಯ ಖಂಡನೀಯ. ಹಸಿವು ಮತ್ತು ವೇತನ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಅಮಾಯಕ ಕಾರ್ಮಿಕರ ಮೇಲೆ ಲಾಠಿ ಪ್ರಹಾರ ನಡೆಸಿರುವುದು ಪ್ರಜಾಪ್ರಭುತ್ವದ ಕಪ್ಪು ಚುಕ್ಕೆಯಾಗಿದೆ ಎಂದು ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ ಕಿಡಿ ಕಾರಿದರು.
ನೋಯ್ಡದ ಕೈಗಾರಿಕಾ ವಲಯಗಳಲ್ಲಿ ಸಾವಿರಾರು ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳಕ್ಕಾಗಿ ಬೀದಿಗಿಳಿದಿದ್ದಾರೆ. 12 ಗಂಟೆಗಳ ಕಾಲ ದುಡಿದರೂ 11 ಸಾವಿರದಿಂದ 15 ಸಾವಿರ ರೂ. ವೇತನ ನೀಡಲಾಗುತ್ತಿದೆ. ಬೆಲೆ ಏರಿಕೆಯ ಕಾಲದಲ್ಲಿ ಜೀವನ ನಿರ್ವಹಣೆ ಅಸಾಧ್ಯವಾಗಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು/
ಬಂಧಿತ ಎಲ್ಲಾ ಕಾರ್ಮಿಕರನ್ನು ಷರತ್ತುರಹಿತ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲೆ ದಾಖಲಿಸಲಾದ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಲಾಠಿ ಬೀಸಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಮಧ್ಯಪ್ರವೇಶಿಸಿ ಜೀವನ ನಿರ್ವಹಣೆಗೆ ಪೂರಕವಾದ ಗೌರವಯುತ ವೇತನ ಘೋಷಿಸಬೇಕು. ಉದ್ಯಮಿಗಳ ಹಿತಾಸಕ್ತಿಗಿಂತ ಕಾರ್ಮಿಕರ ಬದುಕು ಮುಖ್ಯ ಎಂಬುದನ್ನು ಸರ್ಕಾರ ಮರೆಯಬಾರದು ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ ತಿಪ್ಪೇಸ್ವಾಮಿ ಅಣಬೇರು, ಜಿಲ್ಲಾ ಉಪಾಧ್ಯಕ್ಷ ಶಿವಾಜಿರಾವ್, ಕಾರ್ಮಿಕರಾದ ಉದಯ್, ಲೋಕೇಶ್, ಮನುಕುಮಾರ್, ಮನೋಜ್, ಸಿದ್ದೇಶ್ ಇತರರಿದ್ದರು.