ದಾವಣಗೆರೆಯಲ್ಲಿ ಶುಕ್ರವಾರ, ವಿಶ್ವ ರಂಗಭೂಮಿ ದಿನಾಚರಣೆ, ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರಾಭಿನಯ ಸ್ಪರ್ಧೆಯನ್ನು ಡಾ. ಲಕ್ಷ್ಮಣ ದಾಸ್ ಉದ್ಘಾಟಿಸಿದರು. ಮಲ್ಲಿಕಾರ್ಜುನ ಕಡಕೋಳ, ಡಾ. ಸತೀಶ್ ಪಿ. ವಲ್ಲೇಪುರೆ, ಡಾ. ಕೆ. ನಾಗರತ್ನಮ್ಮ, ರವಿಚಂದ್ರ, ಎಸ್.ಎಸ್. ಸಿದ್ಧರಾಜು, ಬಿ. ಪರಶುರಾಮ್, ದೇವಸೇನಾ ಡಿ.ಎಸ್. ಇದ್ದರು.
ದಾವಣಗೆರೆ :ವೃತ್ತಿ ರಂಗಭೂಮಿ ಬಿಕ್ಕಟ್ಟು ಎದುರಿಸುತ್ತಿದ್ದು ಅದಕ್ಕೆ ಮತ್ತೆ ಚೈತನ್ಯ ತುಂಬಬೇಕಿದೆ ಎಂದು, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಷ್ಕೃತ ಹಿರಿಯ ಕಲಾವಿದ ತುಮಕೂರಿನ ಡಾ. ಲಕ್ಷ್ಮಣ ದಾಸ್ ಅಭಿಪ್ರಾಯಪಟ್ಟರು.
ವೃತ್ತಿ ರಂಗಭೂಮಿ ರಂಗಾಯಣದಿಂದ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ, ವಿಶ್ವ ರಂಗಭೂಮಿ ದಿನಾಚರಣೆ, ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರಾಭಿನಯ ಸ್ಪರ್ಧೆ ಸಮಾರಂಭದಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ 21 ವೃತ್ತಿ ನಾಟಕ ಕಂಪನಿಗಳಿವೆ. ಉಳಿದ ಕಡೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವೃತ್ತಿ ರಂಗಭೂಮಿಯನ್ನು ಮತ್ತೆ ಕ್ರಿಯಾಶೀಲ, ಶ್ರೀಮಂತಗೊಳಿಸಬೇಕಿದೆ ಎಂದು ಹೇಳಿದರು.
ಹವ್ಯಾಸಿ ನಾಟಕಗಳೇ ಸರ್ವಸ್ವ ಎನ್ನುವ ಭಾವನೆ ಕೆಲವರಲ್ಲಿದೆ. ವೃತ್ತಿ ರಂಗಭೂಮಿಯ ಪರಂಪರೆ, ಹಿರಿಯ ಕಲಾವಿದರು ನೀಡಿರುವ ಆದರ್ಶವನ್ನು ಇಂದಿನ ಪೀಳಿಗೆ ತಿಳಿಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪೂರ್ಣ ಪ್ರಮಾಣದ ನಾಟಕಗಳನ್ನು ಆಡುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟವಿದೆ. ಹಾಗಾಗಿ ಏಕವ್ಯಕ್ತಿ ಪ್ರದರ್ಶನಗಳು ಮಹತ್ವ ಪಡೆದಿವೆ. ಸಿ.ಆರ್. ಸಿಂಹ ಅವರಂಥ ಹಿರಿಯ ಕಲಾವಿದರು ಏಕ ಪಾತ್ರಾಭಿನಯದಲ್ಲಿ ಹೊಸ ಅಲೆ ಸೃಷ್ಟಿಸಿದ್ದರು ಎಂದು ಮೆಲುಕು ಹಾಕಿದರು.
ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಕೆಳಮಟ್ಟದ ಹಾಸ್ಯವಿರುತ್ತದೆ. ಅದರಿಂದ ಹಿರಿಯ ಕಲಾವಿದರಿಗೆ ಮುಜುಗರವಾಗುತ್ತದೆ ಎಂದು ಹೇಳಿದರು.
ಅಕಾಡೆಮಿಗಳಿಗೆ ಅನುದಾನ ಸಿಗದೆ ಅಸಹಾಯಕ ಸ್ಥಿತಿ ಇದೆ. ಸರ್ಕಾರದ ನೆರವು ಮರೀಚಿಕೆಯಾಗಿದೆ. ಇಂಥದರ ನಡುವೆಯೂ ವೃತ್ತಿ ರಂಗಭೂಮಿ ರಂಗಾಯಣ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ ಡಾ. ಕೆ. ನಾಗರತ್ನಮ್ಮ ಮಾತನಾಡಿದರು. ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ, ಹಿರಿಯ ರಂಗಕರ್ಮಿ ಎಸ್.ಎಸ್. ಸಿದ್ಧರಾಜು, ಸಮಸ್ತರು ತಂಡದ ಬಿ. ಪರಶುರಾಮ್ ಇದ್ದರು. ದೇವಸೇನಾ ಡಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
ವರ್ಷಕ್ಕೆ 18 ಸಾವಿರ ನಾಟಕ
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಒಂದು ವರ್ಷಕ್ಕೆ ಸುಮಾರು 18 ಸಾವಿರ ನಾಟಕಗಳು ಪ್ರದರ್ಶನಗೊಳ್ಳುತ್ತವೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.
ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 5ರಿಂದ 6 ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳ ಪ್ರದರ್ಶನ ನಡೆಯುತ್ತದೆ. ವೃತ್ತಿ ರಂಗಭೂಮಿಯು ದೊಡ್ಡ ಬಾಹುಳ್ಯ ಹೊಂದಿರುವುದನ್ನು ಇದು ಸೂಚಿಸುತ್ತದೆ ಎಂದರು.
ವೃತ್ತಿ ರಂಗಭೂಮಿಯು ಜಾನಪದ ಸಂವೇದನೆ, ಗ್ರಾಮೀಣ ಹಿನ್ನೆಲೆಯನ್ನು ಹೊಂದಿದೆ. ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ, ನೃತ್ಯ ಕಲೆಯೂ ಇದರಲ್ಲಿ ಮೇಳೈಸಿದೆ ಎಂದು ವಿಶಿಷ್ಟತೆಯ ಬಗ್ಗೆ ಹೇಳಿದರು.
ಏ. 10ರಿಂದ 14ರ ವರೆಗೆ ನಗರದಲ್ಲಿ ವೃತ್ತಿ ರಂಗೋತ್ಸವ ಆಯೋಜಿಸಲಾಗಿದೆ. ಬಹುಭಾಷಾ ನಾಟಕಗಳನ್ನು ಅಲ್ಲಿ ಪ್ರದರ್ಶಿಸಲಾಗುವುದು. ಏಕವ್ಯಕ್ತಿ ಪಾತ್ರಾಭಿನಯ ಸ್ಪರ್ಧೆಗೆ 20ಕ್ಕೂ ಹೆಚ್ಚು ಜಿಲ್ಲೆಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಅದರಲ್ಲಿ ವೃದ್ಧರೂ ಇರುವುದು ವಿಶೇಷ ಎಂದರು.
"
ರಂಗಭೂಮಿ ಸೇರಿ ಎಲ್ಲ ಕಲೆಗಳಿಗೆ ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣದಿಂದ ಪರಿಣಾಮವಾಗಿದೆ. ಗುಣಮಟ್ಟದ ಪ್ರದರ್ಶನ ನೀಡಿದರೆ ಪ್ರೇಕ್ಷಕರು ಕಲೆಯನ್ನು ಸ್ವೀಕರಿಸುತ್ತಾರೆ. ಸಮೂಹದ ಜತೆಗೆ ಸಂಬಂಧ ಬೆಳೆಯುವುದು ನಾಟಕಗಳ ವಿಶೇಷತೆಯಾಗಿದೆ.