ಬಡವರಿಗೆ ಸೂರು ಕಲ್ಪಿಸಲು ಆದ್ಯತೆ

ಸಮರ್ಥ್ ಶಾಮನೂರು.
ಸಮರ್ಥ್ ಶಾಮನೂರು.
Published on

ಪ್ರಮುಖ ಮುಖ್ಯಾಂಶಗಳು

  • ಸಮರ್ಥ್ ಶಾಮನೂರು ಹೇಳಿಕೆ
  • ಶಿಕ್ಷಣ, ಆರೋಗ್ಯ ಸೌಲಭ್ಯಕ್ಕೆ ಒತ್ತು
ದಾವಣಗೆರೆ : ಕ್ಷೇತ್ರದ ಬಡವರಿಗೆ ವಿವಿಧ ವಸತಿ ಯೋಜನೆಗಳಡಿ ಸೂರು ಕಲ್ಪಿಸಲು ಆದ್ಯತೆ ನೀಡುವುದಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಚುನಾಯಿತರಾಗಿರುವ ಸಮರ್ಥ್ ಶಾಮನೂರು ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರಿಗೆ ರೋಟಿ ಮತ್ತು ಕಪಡಾಗಿಂತಲೂ ಮಕಾನ್(ಮನೆ) ಅವಶ್ಯಕತೆ ಹೆಚ್ಚಾಗಿದೆ. ಬಹಳಷ್ಟು ಜನರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ, ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಕೊಳೆಗೇರಿ ನಿವಾಸಿಗಳಿಗೆ ಇರುವ ಯೋಜನೆಗಳು, ಆಶ್ರಯ ಇನ್ನಿತರ ಯೋಜನೆಗಳಲ್ಲಿ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಚಿಂತನೆ ನಡೆಸಿರುವುದಾಗಿ ತಿಳಿಸಿದರು.
ದಕ್ಷಿಣ ಕ್ಷೇತ್ರದಲ್ಲಿ ಮಹಿಳೆಯರ ಸರ್ಕಾರಿ ಕಾಲೇಜು ಮತ್ತು ಸರ್ಕಾರಿ ಆಸ್ಪತ್ರೆ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
ನಗರದ ಹಳೇ ಭಾಗದ ಮೂಲಕ ಹಾದು ಹೋಗುವ ರಿಂಗ್ ರಸ್ತೆಯ ಕೆಲಸ ಅಲ್ಲಲ್ಲಿ ಬಾಕಿ ಇದೆ, ಅದನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ದಕ್ಷಿಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಘೋಷಿಸಿರುವ 100 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಗೂ ಪ್ರಯೋಜನ ಆಗುವ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ಅಗತ್ಯವಿದೆ. ಇರುವ 2 ವರ್ಷಗಳಲ್ಲಿ ಹೆಚ್ಚು ಕೆಲಸಗಳನ್ನು ಮಾಡೋಣ ಎಂದು ತಿಳಿಸಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ, ಪಕ್ಷದ ಮುಖಂಡರಾದ ಚಮನ್‌ಸಾಬ್, ಜಿ.ಸಿ. ನಿಂಗಪ್ಪ, ಅಯೂಬ್ ಪೈಲ್ವಾನ್, ಮಂಗಳಮ್ಮ, ವರುಣ್ ಸುದ್ದಿಗೋಷ್ಠಿಯಲ್ಲಿದ್ದರು.
ಜನಸಂಪರ್ಕ ಕಚೇರಿ
ದಾವಣಗೆರೆ ದಕ್ಷಿಣದಲ್ಲಿ ಜನಸಂಪರ್ಕ ಕಚೇರಿ ಆರಂಭಿಸುವುದಾಗಿ ಸಮರ್ಥ್ ಶಾಮನೂರು ತಿಳಿಸಿದರು.
ದಿನದ 24 ಗಂಟೆಯೂ ಜನಸೇವೆ ಮಾಡಲು ಸಿದ್ಧ. ಜನರಿಗಾಗಿ ಮನೆ ಹಾಗೂ ಮನದ ಬಾಗಿಲು ಸದಾ ತೆರೆದಿರುತ್ತದೆ. ಯಾವುದೇ ರಾಜಕೀಯ ಪಕ್ಷದವರಾಗಲಿ ಕುಂದುಕೊರತೆ, ಸಮಸ್ಯೆಗಳಿದ್ದಲ್ಲಿ ನೇರವಾಗಿ ಭೇಟಿ ಮಾಡಬಹುದು. ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ಎಲ್ಲರೂ ಸೇರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡೋಣ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net