ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಆದ್ಯತೆ

ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬುಧವಾರ, ನೂತನ ಎಸ್ಪಿ ಶೇಖರ್ ಎಚ್. ತೆಕ್ಕಣ್ಣವರ್, ಉಮಾ ಪ್ರಶಾಂತ್ ಅವರಿಂದ ಅಧಿಕಾರ ಸ್ವೀಕರಿಸಿದರು.
ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬುಧವಾರ, ನೂತನ ಎಸ್ಪಿ ಶೇಖರ್ ಎಚ್. ತೆಕ್ಕಣ್ಣವರ್, ಉಮಾ ಪ್ರಶಾಂತ್ ಅವರಿಂದ ಅಧಿಕಾರ ಸ್ವೀಕರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನೂತನ ಎಸ್ಪಿ ಶೇಖರ್ ತೆಕ್ಕಣ್ಣವರ್ ಹೇಳಿಕೆ
  • ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರ ಸ್ವೀಕಾರ
ದಾವಣಗೆರೆ : ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು ಎಂದು ನೂತನ ಎಸ್ಪಿ ಶೇಖರ್ ಎಚ್. ತೆಕ್ಕಣ್ಣವರ್ ಹೇಳಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬುಧವಾರ, ಉಮಾ ಪ್ರಶಾಂತ್ ಅವರಿಂದ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಭಯ ಇರುತ್ತದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನರಿಗೆ ವಿಶ್ವಾಸ ಮೂಡಿಸುವ ಪ್ರಯತ್ನಗಳನ್ನು ಮಾಡಲಾಗುವುದು. ಜನಪ್ರತಿನಿಧಿಗಳ ಸಹಕಾರವೂ ಅಗತ್ಯ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮೊದಲಿನಿಂದಲೂ ಉತ್ತಮವಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು. ಸೈಬರ್ ಅಪರಾಧಗಳು ನಡೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ಕೊಡದೆ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾನೂನು ಎಲ್ಲರಿಗೂ ಒಂದೇ. ಎಲ್ಲರೂ ಕಾನೂನಿಗೆ ತಲೆಬಾಗಬೇಕಾಗುತ್ತದೆ. ಸಲಹೆಗಳನ್ನು ಸಾರ್ವಜನಿಕರಿಂದ ಮತ್ತು ಜನಪ್ರತಿನಿಧಿಗಳಿಂದಲೂ ಪಡೆಯುತ್ತೇವೆ. ಆದರೆ ಕಾನೂನು ಎತ್ತಿ ಹಿಡಿಯುವುದೊಂದೇ ಗುರಿಯಾಗಿರುತ್ತದೆ ಎಂದರು.

ಡ್ರಗ್ಸ್‌ಮುಕ್ತ ಮಾಡುವ ಸಂಕಲ್ಪ

ಮಾದಕ ವಸ್ತುಗಳ ಮಾರಾಟ ಜಾಲವನ್ನು ನಿಗ್ರಹಿಸಲು ಜಿಲ್ಲೆಯಲ್ಲಿ ಶಿಸ್ತುಬದ್ಧ ತನಿಖೆ ನಡೆಸಲಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ನೂತನ ಎಸ್ಪಿ ಹೇಳಿದರು.
ಇನ್ನೂ ಹೆಚ್ಚಿನ ಗಮನ ಹರಿಸಿ, ಬೇರೆ ರಾಜ್ಯಗಳಿಂದ, ಇತರ ಪ್ರದೇಶಗಳಿಂದ ಬರುವ ಮಾದಕ ವಸ್ತುಗಳನ್ನು ತಡೆಗಟ್ಟಲು ನಗರ ಹೊರ ವಲಯದಲ್ಲಿ ನಿಗಾ ವಹಿಸಲಾಗುವುದು. ಮಾದಕವಸ್ತು ಮುಕ್ತ ಕರ್ನಾಟಕವನ್ನು ಮಾಡಲು ನಮ್ಮ ಪೊಲೀಸರು ಶ್ರಮಿಸಲಿದ್ದಾರೆ ಎಂದು ಭರವಸೆ ನೀಡಿದರು.
ಅಕ್ರಮ ಮರಳು ಸಾಗಾಟ, ವಿವಿಧ ರೀತಿಯ ಕಳ್ಳಸಾಗಾಣಿಕೆ ನಿಯಂತ್ರಿಸಲು ಜಿಲ್ಲೆಯ ಪೊಲೀಸರು ಚಾಕಚಕ್ಯತೆ, ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು, ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನಗರದಲ್ಲಿ ಇತ್ತೀಚೆಗೆ ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ಗಂಭೀರ ವಿಷಯವಾಗಿದೆ. ಪೊಲೀಸರಿಗೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು ಅದರಲ್ಲಿ ಯಾವುದೇ ಲೋಪವಾಗದಂತೆ, ಹೆಚ್ಚಿನ ತನಿಖೆ ನಡೆಸಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಅಧಿಕಾರಿಯ ಹಿನ್ನೆಲೆ

ನೂತನ ಎಸ್ಪಿ ಶೇಖರ್ ಎಚ್. ತೆಕ್ಕಣ್ಣವರ್ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು ನಾಗರಾಳ ಗ್ರಾಮದವರು. ಸ್ವಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು.
ಬೀದರ್ ಪಶುವೈದ್ಯ ಕಾಲೇಜಿನಲ್ಲಿ 1999ರಿಂದ 2004ರ ವರೆಗೆ ಪದವಿ ವ್ಯಾಸಂಗ, ಪಶುವೈದ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಡಿವೈಎಸ್ಪಿಯಾಗಿ 2008ರಲ್ಲಿ ನೇಮಕವಾದರು. ನಂತರ ಚಿತ್ರದುರ್ಗ ಜಿಲ್ಲೆ ಹಿರಿಯೂರು ಡಿವೈಎಸ್ಪಿಯಾದರು. ಬೆಂಗಳೂರಿನಲ್ಲಿ ಗುಪ್ತಚರ ಇಲಾಖೆಯ ಡಿಸಿಪಿಯಾಗಿ ಕೆಲವು ತಿಂಗಳು ಕಾರ್ಯ ನಿರ್ವಹಿಸಿದರು.
ಮೈಸೂರಿನಲ್ಲಿ ಕಾನೂನು, ಸುವ್ಯವಸ್ಥೆ ಡಿಸಿಪಿಯಾಗಿ ಎರಡೂವರೆ ವರ್ಷ ಕೆಲಸ ಮಾಡಿದರು. ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯಾಗಿ, ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ಎಸ್ಪಿಯಾಗಿ, ಮೈಸೂರಿನ ಪೊಲೀಸ್ ತರಬೇತಿ ಶಾಲೆಯಲ್ಲೂ ಸೇವೆ ಸಲ್ಲಿಸಿದರು. ಬೆಳಗಾವಿಯ ಕಾನೂನು, ಸುವ್ಯವಸ್ಥೆ ಡಿಸಿಪಿ ಆಗಿ, ಡಿಸಿಪಿ ಸೆಂಟ್ರಲ್ ಆಗಿಯೂ ಕಾರ್ಯ ನಿರ್ವಹಿಸಿದರು. ದಾವಣಗೆರೆಗೆ ಎಸ್ಪಿಯಾಗಿ ಬರುವ ಮೊದಲು ಬೆಂಗಳೂರಿನಲ್ಲಿ ಗುಪ್ತಚರ ಇಲಾಖೆಯ ಎಸ್ಪಿ ಆಗಿ ಕೆಲಸ ಮಾಡುತ್ತಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net