ಸ್ವಾಭಾವಿಕ ಹೆರಿಗೆಗೆ ನೀಡಿ ಆದ್ಯತೆ

ದಾವಣಗೆರೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಿತ್ವಿಕ್ ಪಾಂಡೆ ಮಾತನಾಡಿದರು. ಜಿ.ಎಂ. ಗಂಗಾಧರಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್ ಇತರ ಅಧಿಕಾರಿಗಳು ಇದ್ದರು.
ದಾವಣಗೆರೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಿತ್ವಿಕ್ ಪಾಂಡೆ ಮಾತನಾಡಿದರು. ಜಿ.ಎಂ. ಗಂಗಾಧರಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್ ಇತರ ಅಧಿಕಾರಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಿತ್ವಿಕ್ ಪಾಂಡೆ ಸೂಚನೆ
  • ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ

ದಾವಣಗೆರೆ : ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಗಳು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ತೀರಾ ಅಗತ್ಯವಿದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಬೇಕು. ಸಾಮಾನ್ಯ ಹೆರಿಗೆಗಳಿಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ಪಾಂಡೆ ಪಾಂಡೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಳ ಸಿ-ಸೆಕ್ಷನ್ ಪ್ರಮಾಣ ದಿನದಿಂದ ದಿನಕ್ಕೆ ಶೇ. 45ರಿಂದ 48ರಷ್ಟು ಹೆಚ್ಚಿದೆ. ಜಗಳೂರು ಮತ್ತು ಹೊನ್ನಾಳಿ ಭಾಗಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಸಿ-ಸೆಕ್ಷನ್ ಹೆರಿಗೆಗಳು ಹಗಲಿನಲ್ಲಿಯೇ ನಡೆದಿವೆ. ರಾತ್ರಿ ವೇಳೆಯಲ್ಲಿ ಈ ಪ್ರಮಾಣ ಕೇವಲ ಶೇ. 0 ಯಿಂದ 5ರಷ್ಟಿದೆ. ವಿಶೇಷವಾಗಿ, ರಾತ್ರಿ ವೇಳೆಗಿಂತ ಹೆಚ್ಚಾಗಿ ಹಗಲಿನಲ್ಲಿಯೇ ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತಿರುವುದೇಕೆ ಎಂದು ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಸೂರ್ಯ ಉದಯವಾದಾಗಷ್ಟೇ ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತವೆಯೆ? ಸೂರ್ಯ ಮುಳುಗಿದ ಮೇಲೆ ಹೆರಿಗೆ ಶಸ್ತ್ರಚಿಕಿತ್ಸೆಗಳು ನಿಂತು ಹೋಗುತ್ತವೆಯೆ, ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಕೇವಲ ಹಗಲಿನಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಿ, ರಾತ್ರಿ ವೇಳೆ ಕರ್ತವ್ಯದಿಂದ ಜಾರಿಕೊಳ್ಳುವ ಮನೋಭಾವ ವೈದ್ಯರಲ್ಲಿದೆಯೆ ಎಂದು ತರಾಟೆಗೆ ತೆಗೆದುಕೊಂಡರು.
ವಿಶೇಷವಾಗಿ ಚನ್ನಗಿರಿ, ಜಗಳೂರು ಮತ್ತು ಹೊನ್ನಾಳಿ ತಾಲೂಕುಗಳ ಆಸ್ಪತ್ರೆಗಳಲ್ಲಿ ಸಂಜೆ 4ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ಹೆಚ್ಚಿನ ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ವೈದ್ಯರು ರಾತ್ರಿ ಕರ್ತವ್ಯದಲ್ಲಿರಲು ಇಷ್ಟಪಡದೆ, ಅಥವಾ ಮನೆಗೆ ಬೇಗ ಹಿಂತಿರುಗುವ ಉದ್ದೇಶದಿಂದ ಸಮಯಕ್ಕಿಂತ ಮುಂಚಿತವಾಗಿಯೇ ಹೆರಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಂಜೆ 4ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ನಡೆದಿರುವ ಎಲ್ಲ ಸಿ-ಸೆಕ್ಷನ್‌ಗಳನ್ನು ವೈದ್ಯಕೀಯ ಆಡಿಟ್‌ಗೆ ಒಳಪಡಿಸಿ. ಈ ಹೆರಿಗೆಗಳು ವೈದ್ಯಕೀಯವಾಗಿ ನಿಜಕ್ಕೂ ಅಗತ್ಯವಾಗಿದ್ದವೆ ಅಥವಾ ಸಮಯ ಉಳಿಸಲು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಸೂಚನೆ ಕೊಟ್ಟರು.

ರಕ್ತಹೀನತೆ ನಿರ್ಮೂಲನೆಗೆ ಒತ್ತು

ಹರಿಹರ ಸೇರಿ ವಿವಿಧ ಭಾಗಗಳಲ್ಲಿ ರಕ್ತಹೀನತೆ ಪ್ರಕರಣಗಳನ್ನು ಗುರುತಿಸಲಾಗಿದೆ. ಗಂಭೀರ ಸ್ವರೂಪದ ಅನೀಮಿಯಾ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಮಧ್ಯಮ ಸ್ವರೂಪದ ಅನೀಮಿಯಾ ಪೀಡಿತರಿಗೂ ಸೂಕ್ತ ಜಾಗೃತಿ ಮತ್ತು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು. ಆರೋಗ್ಯ ಸೇವೆಗಳನ್ನು ಜಿಲ್ಲೆಯ ಪ್ರತಿಯೊಬ್ಬ ನಾಗರಕರಿಗೂ ಪರಿಣಾಮಕಾರಿಯಾಗಿ ತಲುಪಿಸಲು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ರಿತ್ವಿಕ್ ಪಾಂಡೆ ಪಾಂಡೆ ತಿಳಿಸಿದರು.
ಅರ್ಹತೆ ಇಲ್ಲದ ನಾಟಿ ವೈದ್ಯರು ಯಾವುದೇ ಆ್ಯಂಟಿ-ವೆನಮ್ ನೀಡದೆ ರೋಗಿಗಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇಂತಹ ಕಾನೂನು ಬಾಹಿರ ಕ್ಲಿನಿಕ್‌ಗಳನ್ನು ಕೇವಲ ಬಂದ್ ಮಾಡಿದರೆ ಸಾಲದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಹಳೇ ಕಟ್ಟಡವನ್ನು ದುರಸ್ತಿ ಮಾಡುವ ಬದಲು ಮುಂದಿನ ಐದಾರು ದಶಕಗಳ ಕಾಲ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಶಾಶ್ವತ ಹಾಗೂ ಗುಣಮಟ್ಟದ ಆಸ್ಪತ್ರೆ, ಮೂಲಸೌಕರ್ಯ ಕಲ್ಪಿಸಲು 400 ಹಾಸಿಗೆಗಳ ಹೊಸ ಕಟ್ಟಡವನ್ನು ನಿರ್ಮಿಸಲು ಕ್ರಮವಹಿಸಿ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net