ಸುಸಜ್ಜಿತ ರಂಗಮಂದಿರಕ್ಕಾಗಿ ಒತ್ತಡ ಅಗತ್ಯ

ದಾವಣಗೆರೆಯಲ್ಲಿ ಕಮತಗಿಯ ಶ್ರೀ ಗುರುಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಹಮ್ಮಿಕೊಂಡ, ‘ಗಂಡನಿಗೆ ತಕ್ಕ ಹೆಂಡತಿ’ ನಾಟಕ ಪ್ರದರ್ಶನವನ್ನು ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಉದ್ಘಾಟಿಸಿದರು. ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಮಲ್ಲಿಕಾರ್ಜುನ ಕಡಕೋಳ, ಪಾಪು ಕಲ್ಲೂರ, ಮಹದೇವಪ್ಪ ಹುಣಸ್ಯಾಳ, ಸಿ.ಎಲ್.ಚಂದ್ರಧರ, ನಾಗರಾಜ ಎಸ್. ಬಡದಾಳ್ ಇತರರಿದ್ದರು.
ದಾವಣಗೆರೆಯಲ್ಲಿ ಕಮತಗಿಯ ಶ್ರೀ ಗುರುಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಹಮ್ಮಿಕೊಂಡ, ‘ಗಂಡನಿಗೆ ತಕ್ಕ ಹೆಂಡತಿ’ ನಾಟಕ ಪ್ರದರ್ಶನವನ್ನು ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಉದ್ಘಾಟಿಸಿದರು. ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಮಲ್ಲಿಕಾರ್ಜುನ ಕಡಕೋಳ, ಪಾಪು ಕಲ್ಲೂರ, ಮಹದೇವಪ್ಪ ಹುಣಸ್ಯಾಳ, ಸಿ.ಎಲ್.ಚಂದ್ರಧರ, ನಾಗರಾಜ ಎಸ್. ಬಡದಾಳ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೂತನ ಶಾಸಕರಿಗೆ ಡಾ.ಬಸವಪ್ರಭು ಸ್ವಾಮೀಜಿ ಸಲಹೆ
  • ಶಿಕ್ಷಕನಂತೆ ಮಾರ್ಗದರ್ಶನ ನೀಡಲಿವೆ ನಾಟಕಗಳು
  • ‘ಗಂಡನಿಗೆ ತಕ್ಕ ಹೆಂಡತಿ’ ನಾಟಕ ಪ್ರದರ್ಶನ ಉದ್ಘಾಟನೆ
ದಾವಣಗೆರೆ: ರಂಗ ಕಲೆ ಪ್ರದರ್ಶನಕ್ಕಾಗಿ ದಾವಣಗೆರೆಯಲ್ಲಿ ಒಂದು ಸುಸಜ್ಜಿತ ರಂಗಮಂದಿರ ನಿರ್ಮಾಣ ಆಗಬೇಕಿದೆ. ನೂತನ ಶಾಸಕರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ, ವಿಶೇಷ ಅನುದಾನ ತಂದು ಇದನ್ನು ಸಾಕಾರಗೊಳಿಸಲಿ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.
ಗೌರಮ್ಮ ನರಹರಿಶೇಟ್ ಕಲ್ಯಾಣ ಮಂಟಪದ ಪಕ್ಕದ ಜಾಗದಲ್ಲಿ ಶುಕ್ರವಾರ, ವಿಜಯಪುರ ಜಿಲ್ಲೆ ಕಮತಗಿಯ ಶ್ರೀ ಗುರುಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಹಮ್ಮಿಕೊಂಡ, ‘ಗಂಡನಿಗೆ ತಕ್ಕ ಹೆಂಡತಿ’ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾಟಕಗಳು ಸಮಾಜದ ಕೈಗನ್ನಡಿಯಾಗಿವೆ. ಅವು ಸಮಾಜದಲ್ಲಿರುವ ಅಂಕು-ಡೊಂಕು ತಿದ್ದಿ ಹೇಳುವ ಶಿಕ್ಷಕನಂತೆ ಕಾರ್ಯ ನಿರ್ವಹಿಸಲಿವೆ. ಜೀವನ ಶಿಕ್ಷಣ ನೀಡುವ ಪಾಠಶಾಲೆಯಾಗಿವೆ ಎಂದು ಹೇಳಿದರು.
ಇಂದು ಮನೆಗಳಲ್ಲಿ ಟಿವಿ ಅಥವಾ ಮೊಬೈಲ್ ಇದ್ದರೆ ಸಾಕು, ಮನರಂಜನೆ ಸಿಗುತ್ತದೆ. ಆದರೂ ದಾವಣಗೆರೆಯ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ದೊಡ್ಡದು. ರಂಗಭೂಮಿ ಬೆಳೆಯಲು ಕಲಾವಿದರನ್ನು ಉಳಿಸಬೇಕು. ಅಭಿಮಾನಿಗಳು ಪ್ರೋತ್ಸಾಹ ನೀಡಿ ಹರಸಬೇಕು ಎಂದರು.
ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ದಾವಣಗೆರೆ ರಂಗ ಕಲಾವಿದರಿಗೆ ಆಸರೆ ನೀಡಿದ ಊರು. ಇಂದು ನಾಟಕ ಕಲೆ ಸಮಸ್ಯೆಗಳ ಸುಳಿಯಲ್ಲಿದೆ. ಕಲಾವಿದರು ಬದುಕಬೇಕು, ಕಲೆಯೂ ಉಳಿಯಬೇಕಿದೆ ಎಂದು ಹೇಳಿದರು.
ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಕಲಾವಿದರಿಗೆ ನಿವೇಶನ ನೀಡಿದ್ದರು. ಮಾಜಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಸಮರ್ಥ ಶಾಮನೂರು ಮುಂದಿನ ದಿನಗಳಲ್ಲಿ ರಂಗಭೂಮಿ ಕಲಾವಿದರು, ಸಿಬ್ಬಂದಿಗೆ ನಿವೇಶನ ಹಾಗೂ ಸರ್ಕಾರದ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ದಾವಣಗೆರೆ ವೃತ್ತಿ ರಂಗಭೂಮಿಯ ತವರುಮನೆ. ಕಂಪನಿ ನಾಟಕಗಳ ಶತಮಾನದ ಇತಿಹಾಸವಿರುವ ಈ ಊರಿಗೆ ಇದುವರೆಗೆ ನೂರಿಪ್ಪತ್ತಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು, ಯಾವೂ ಸಹ ನಷ್ಟ ಅನುಭವಿಸಿಲ್ಲ ಎಂದು ನೆನೆದರು.
ಈಗ್ಗೆ ದಶಕದ ಹಿಂದೆ ಬೆಂಕಿಗೆ ಆಹುತಿಯಾದ ಜೇವರ್ಗಿ ಕಂಪನಿಯನ್ನು ಸುಟ್ಟ ಜಾಗದಲ್ಲಿ ಕಟ್ಟಿಕೊಟ್ಟ ಸಹೃದಯ ಪ್ರೇಕ್ಷಕರು ಈ ಊರಿನವರು. ದಾವಣಗೆರೆ ರಂಗಾಯಣದ ವತಿಯಿಂದ ಈ ಕಂಪನಿಗೆ ಹೊಸದೊಂದು ನಾಟಕದ ತರಬೇತಿ ನೀಡಿ ಹೊಸ ಪ್ರಯೋಗಕ್ಕೆ ಅವಕಾಶ ಮಾಡುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಾಟಕ ಕಂಪನಿ ಮಾಲೀಕ ಪಾಪು ಕಲ್ಲೂರ, ವ್ಯವಸ್ಥಾಪಕ ಮಹದೇವಪ್ಪ ಹುಣಸ್ಯಾಳ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ, ಪತ್ರಕರ್ತ ನಾಗರಾಜ ಎಸ್. ಬಡದಾಳ್, ಉದ್ಯಮಿ ಸಿ.ಎಲ್.ಚಂದ್ರಧರ, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹೇಶ್ವರಪ್ಪ ದೊಡ್ಡಮನಿ, ರಂಗಕರ್ಮಿ ಬಸವರಾಜ ಐರಣಿ, ರಂಗಭೂಮಿ ಕಲಾವಿದ ಚಿಂದೋಡಿ ಮಧುಕೇಶ, ಮಾಲತೇಶ ಪೂಜಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net