ಡಿಸಿಇಟಿ, ಪಿಜಿಸಿಇಟಿ ಪರೀಕ್ಷೆಗೆ ಸಿದ್ಧತೆ

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿದರು.
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚನೆ
  • ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ
ದಾವಣಗೆರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ 2026ನೇ ಸಾಲಿನ ಡಿಪ್ಲೊಮಾ ಸಿಇಟಿ ಮತ್ತು ಎಂ.ಇ/ಎಂ.ಟೆಕ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಪಿಜಿಸಿಇಟಿ ಪರೀಕ್ಷೆಗಳನ್ನು ಶನಿವಾರ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, 2026ನೇ ಸಾಲಿನ 2ನೇ ವರ್ಷದ / 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್‌ಗಳ ಲ್ಯಾಟರಲ್ ಪ್ರವೇಶಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 1,324 ವಿದ್ಯಾರ್ಥಿಗಳು ಡಿಪ್ಲೊಮಾ ಸಿಇಟಿ ಪರೀಕ್ಷೆ ಬರೆಯಲಿದ್ದಾರೆ. ಈ ಪರೀಕ್ಷೆಯು ನಗರದ ಪಿ.ಜೆ. ಬಡಾವಣೆಯಲ್ಲಿರುವ ಮೋತಿವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ನಡೆಯಲಿದೆ ಎಂದರು.
ಎಂ.ಇ / ಎಂ.ಟೆಕ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಒಟ್ಟು 767 ವಿದ್ಯಾರ್ಥಿಗಳು ಪಿಜಿಸಿಇಟಿ ಪರೀಕ್ಷೆ ಬರೆಯಲಿದ್ದು, ಪರೀಕ್ಷೆಯು ಪಿ.ಜೆ. ಬಡಾವಣೆಯಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಕೇಂದ್ರದಲ್ಲಿ ಮಧ್ಯಾಹ್ನ 2.30ರಿಂದ 4.30ರ ವರೆಗೆ ನಡೆಯಲಿದೆ ಎಂದು ತಿಳಿಸಿದರು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಗೃಹ, ಸಮರ್ಪಕ ಗಾಳಿ ಹಾಗೂ ಬೆಳಕು, ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪರೀಕ್ಷೆಯು ಸುಗಮವಾಗಿ ನಡೆಯಲು ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ ಎಂದರು.
ಎಂ.ಇ / ಎಂ.ಟೆಕ್ ಕೋರ್ಸ್‌ಗಳ ಪಿಜಿಸಿಇಟಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ನಾನ್-ಪ್ರೋಗ್ರಾಮೆಬಲ್ ಕ್ಯಾಲ್ಕುಲೇಟರ್‌ಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಡೆಯುವ ಆಧುನಿಕ ವ್ಯವಸ್ಥೆಯನ್ನು ಮಾಡಲಾಗಿದೆ. ಕೊಠಡಿ ಮೇಲ್ವಿಚಾರಕರಿಗೆ ಈ ಕುರಿತು ತರಬೇತಿ ನೀಡಲಾಗಿದೆ. ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಗಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಮೂಲಕ ಕಡ್ಡಾಯವಾಗಿ ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು ಎಂದರು.
ಪರೀಕ್ಷೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಶಾಂತಿಯುತವಾಗಿ ನಡೆಸಲು ಕಂದಾಯ, ಪೊಲೀಸ್ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಳನಿಸ್ವಾಮಿ, ಪರೀಕ್ಷಾ ಕೇಂದ್ರಗಳ ಪ್ರಾಚಾರ್ಯರು ಇದ್ದರು.

ಜೀನ್ಸ್, ಕಪ್ಪು ಬಟ್ಟೆ ಧರಿಸದಿರಲು ಸಲಹೆ

ಪ್ರಸ್ತುತ ಬೇಸಿಗೆ ಕಾಲವಾಗಿರುವುದರಿಂದ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜೀನ್ಸ್ ಪ್ಯಾಂಟ್, ಜೀನ್ಸ್ ಶರ್ಟ್ ಮತ್ತು ಕಪ್ಪು ಬಟ್ಟೆಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗದಂತೆ ಡಿಸಿ ಸಲಹೆ ನೀಡಿದರು.
ಜೀನ್ಸ್ ಪ್ಯಾಂಟ್‌ಗಳಲ್ಲಿ ಸಾಮಾನ್ಯವಾಗಿ ದೊಡ್ಡದಾದ ಲೋಹದ ಗುಂಡಿಗಳಿರುತ್ತವೆ. ಪರೀಕ್ಷಾ ಕೇಂದ್ರದ ತಪಾಸಣೆ ವೇಳೆ ಲೋಹ ಶೋಧಕಗಳು ಪತ್ತೆ ಹಚ್ಚುವುದರಿಂದ ತಪಾಸಣೆಗೆ ವಿಳಂಬವಾಗುತ್ತದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net