ಮುಂಗಾರು ಪೂರ್ವ ಮಳೆ ಅವಾಂತರ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಕೆಳಗೋಟೆ ಗ್ರಾಮದ ಸರ್ಕಾರಿ ಶಾಲೆ ಮುಂಭಾಗದಲ್ಲಿ, ಮಳೆ-ಗಾಳಿಯಿಂದ ಬೇವಿನ ಮರ ರಸ್ತೆಗೆ ಉರುಳಿ ಬಿದ್ದಿರುವುದು.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಕೆಳಗೋಟೆ ಗ್ರಾಮದ ಸರ್ಕಾರಿ ಶಾಲೆ ಮುಂಭಾಗದಲ್ಲಿ, ಮಳೆ-ಗಾಳಿಯಿಂದ ಬೇವಿನ ಮರ ರಸ್ತೆಗೆ ಉರುಳಿ ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಇದುವರೆಗೆ 381 ಹೆಕ್ಟೇರ್ ಬೆಳೆ ಹಾನಿ
  • ಪರಿಹಾರ ನಿರೀಕ್ಷೆಯಲ್ಲಿ ರೈತರು
ದಾವಣಗೆರೆ : ಮುಂಗಾರು ಪೂರ್ವದಲ್ಲಿ ಮಳೆ-ಗಾಳಿ ಆರ್ಭಟ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದೆ. ಕಳೆದ ಮಾರ್ಚ್‌ನಿಂದ ಇಲ್ಲಿಯ ವರೆಗೆ ಬೆಳೆಗಳನ್ನು ಆಪೋಷನ ತೆಗೆದುಕೊಂಡು ರೈತರನ್ನು ಆತಂಕಕ್ಕೆ ದೂಡಿದೆ.
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಂದಾಜು 361.11 ಹೆಕ್ಟೇರ್ ಕೃಷಿ ಬೆಳೆ (ಭತ್ತ) ಹಾಗೂ 20.58 ಹೆಕ್ಟೇರ್ ತೋಟಗಾರಿಕೆ ಬೆಳೆ (ಬಾಳೆ, ಅಡಿಕೆ, ಪಪ್ಪಾಯ) ಒಟ್ಟಾರೆ 381.79 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಇದು ಕೇವಲ ಪ್ರಾಥಮಿಕ ವರದಿಯಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಬೆಳೆ ಸಮೀಕ್ಷೆ ನಡೆಸುತ್ತಿದ್ದು, ಅದರ ಆಧಾರದ ಮೇಲೆ ಪರಿಹಾರ ತಂತ್ರಾಂಶದ ಮೂಲಕ ರೈತರಿಗೆ ಬೆಳೆ ಪರಿಹಾರ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಹರಿಹರ, ಚನ್ನಗಿರಿ ಇನ್ನಿತರ ತಾಲೂಕುಗಳಲ್ಲಿ ಮಳೆ-ಗಾಳಿಯ ಹೊಡೆತಕ್ಕೆ ಭತ್ತದ ಬೆಳೆ ನೆಲಕಚ್ಚಿದೆ. ಕಷ್ಟಪಟ್ಟು ಬೆಳೆಸಿದ ಅಡಿಕೆ, ತೆಂಗಿನ ಮರಗಳು ನೆಲಕ್ಕುರುಳಿದ ದೃಶ್ಯ ಕಂಡುಬರುತ್ತದೆ.
ಮಾರ್ಚ್‌ನಿಂದ ಇಲ್ಲಿಯ ವರೆಗೆ ವಾಡಿಕೆಯಂತೆ 74.5 ಮಿ.ಮೀ. ಮಳೆಯಾಗಬೇಕಿತ್ತು, ವಾಸ್ತವದಲ್ಲಿ 74.90 ಮಿ.ಮೀ. ಸುರಿದಿದೆ.

ತಾಲೂಕುವಾರು ಹಾನಿಯ ವಿವರ

ಚನ್ನಗಿರಿ ತಾಲೂಕಿನಲ್ಲಿ 206.39 ಹೆಕ್ಟೇರ್ ಭತ್ತ, 12.14 ಹೆಕ್ಟೇರ್ ಅಡಿಕೆ, 0.48 ಹೆಕ್ಟೇರ್ ಬಾಳೆ ಬೆಳೆ ಹಾನಿಯಾಗಿದೆ.
ದಾವಣಗೆರೆ ತಾಲೂಕಿನಲ್ಲಿ 27.51 ಹೆಕ್ಟೇರ್ ಭತ್ತ, 4.42 ಹೆಕ್ಟೇರ್ ಅಡಿಕೆ, ಹರಿಹರ ತಾಲೂಕಿನಲ್ಲಿ 131.25 ಹೆಕ್ಟೇರ್ ಭತ್ತ, 0.80 ಹೆಕ್ಟೇರ್ ಅಡಿಕೆ, ಜಗಳೂರು ತಾಲೂಕಿನಲ್ಲಿ 8.08 ಹೆಕ್ಟೇರ್ ಅಡಿಕೆ, 3.23 ಹೆಕ್ಟೇರ್ ಬಾಳೆ, 11.72 ಹೆಕ್ಟೇರ್ ಪಪ್ಪಾಯ ಬೆಳೆಗೆ ಹಾನಿಯಾಗಿದೆ.
ಎಸ್‌ಡಿಆರ್‌ಎಫ್ ಹಾಗೂ ಎನ್‌ಆರ್‌ಡಿಎಫ್ ನಿಯಮಗಳಂತೆ ಬೆಳೆ ಪರಿಹಾರವನ್ನು ಜಿಲ್ಲಾಡಳಿತ ನೀಡಲಿದೆ.
"

ಮಳೆ-ಗಾಳಿಯಿಂದ ಆಗಿರುವ ಹಾನಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಪೋರ್ಟಲ್ ಚಾಲನೆಗೊಂಡ ನಂತರ ರೈತರಿಗೆ ಪರಿಹಾರ ಒದಗಿಸಲಾಗುವುದು. ಎಸ್‌ಡಿಆರ್‌ಎಫ್, ಎನ್‌ಆರ್‌ಡಿಎಫ್ ನಿಯಮಗಳ ಪ್ರಕಾರ ಪ್ರತಿ ಹೆಕ್ಟೇರ್ ಭತ್ತಕ್ಕೆ 17 ಸಾವಿರ ರೂ, ಬಾಳೆ, ಅಡಿಕೆ, ಪಪ್ಪಾಯ ಪ್ರತಿ ಹೆಕ್ಟೇರ್‌ಗೆ 22,500 ರೂ. ಪರಿಹಾರ ನೀಡಲಾಗುವುದು.

— ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net