ಕಳಪೆ ಕಾಮಗಾರಿ, ಕ್ರಮಕ್ಕೆ ಆಗ್ರಹ

ದಾವಣಗೆರೆಯಲ್ಲಿ ಸೋಮವಾರ ಕರ್ನಾಟಕ ರೈತ ಸೇನೆ ಸಂಘದ ಕಾರ್ಯಕರ್ತರು, 22 ಕೆರೆಗಳ ಏತ ನೀರಾವರಿ ಯೋಜನೆ ಕಾಮಗಾರಿ ಕಳಪೆಯಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಉಜ್ಜನಗೌಡ್ರು, ಕೆ.ಜಿ. ರೇವಣಸಿದ್ದಪ್ಪ, ಹನುಮನಗೌಡ, ಚಂದ್ರಪ್ಪ ಎಸ್, ಎಂ.ಎಸ್. ಪ್ರಭು, ಮಂಜಣ್ಣ, ರಮೇಶ, ಗೀತಮ್ಮ, ಜಯ್ಯಣ್ಣ, ಎ.ಜಿ. ರಾಜಶೇಖರಪ್ಪ, ಬಸಪ್ಪ ಇದ್ದರು.
ದಾವಣಗೆರೆಯಲ್ಲಿ ಸೋಮವಾರ ಕರ್ನಾಟಕ ರೈತ ಸೇನೆ ಸಂಘದ ಕಾರ್ಯಕರ್ತರು, 22 ಕೆರೆಗಳ ಏತ ನೀರಾವರಿ ಯೋಜನೆ ಕಾಮಗಾರಿ ಕಳಪೆಯಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಉಜ್ಜನಗೌಡ್ರು, ಕೆ.ಜಿ. ರೇವಣಸಿದ್ದಪ್ಪ, ಹನುಮನಗೌಡ, ಚಂದ್ರಪ್ಪ ಎಸ್, ಎಂ.ಎಸ್. ಪ್ರಭು, ಮಂಜಣ್ಣ, ರಮೇಶ, ಗೀತಮ್ಮ, ಜಯ್ಯಣ್ಣ, ಎ.ಜಿ. ರಾಜಶೇಖರಪ್ಪ, ಬಸಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರೈತ ಸೇನೆ ಸಂಘದ ಪ್ರತಿಭಟನೆ
  • ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ದಾವಣಗೆರೆ : ಜಿಲ್ಲೆಯ 22 ಕೆರೆಗಳ ಏತ ನೀರಾವರಿ ಯೋಜನೆ ಕಾಮಗಾರಿ ಕಳಪೆಯಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರೈತ ಸೇನೆ ಸಂಘದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಪರಿಶೀಲನೆ ಮಾಡಿ, ಈ ಲೋಪಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಮುಂದಿನ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಕಳಪೆ ಕಾಮಗಾರಿ ಬಗ್ಗೆ ಸಂಸದರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ 3-4 ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಲೋಪಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿಸಿ ರೈತರಿಗೆ ಯೋಗ್ಯ ರೀತಿಯಲ್ಲಿ ಉಪಯೋಗವಾಗುವಂತೆ ಅನುವು ಮಾಡಿಕೊಡಬೇಕು. ಬೆಳೆಗಳಿಗೆ ನೀರೂ ಇಲ್ಲದೇ, ಮಳೆಯೂ ಇಲ್ಲದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಬಿಡದಿ ಬಳಿಯ 9 ಸಾವಿರ ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹಾಗೂ ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರವು ಆ ನಿರ್ಧಾರವನ್ನು ಕೈಬಿಡಬೇಕು. ಜಿಲ್ಲೆಯಲ್ಲಿ ರೈತರಿಗೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಎಂಆರ್‌ಪಿಗಿಂತ ದುಪ್ಪಟ್ಟು ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರ ಅಂಗಡಿ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್ಲ ಟೋಲ್‌ಗಳಲ್ಲಿ ರೈತಸಂಘದ ವಾಹನಗಳಿಗೆ ಗಣ್ಯರಿಗೆ ಬಿಡುವಂತೆ ದಾರಿ ಬಿಡುವಂತಾಗಬೇಕು. ನಗರ ವ್ಯಾಪ್ತಿಯಲ್ಲಿ ಪ್ರತಿ ದಿನ ಸಂಜೆ 6 ಗಂಟೆಯ ನಂತರ, ಎದುರಿಗೆ ಬರುವ ವಾಹನ ಚಾಲಕರ ಕಣ್ಣು ಕುಕ್ಕುವಂತಹ ದೀಪಗಳನ್ನು ಬಳಸದಂತೆ 4 ಚಕ್ರದ ವಾಹನಗಳ ಚಾಲಕರಿಗೆ ಆದೇಶಿಸಬೇಕು ಎಂದು ಮನವಿ ಮಾಡಿದರು.
ಹುಬ್ಬಳ್ಳಿ-ಧಾರವಾಡ ಹಾಗೂ ದಾವಣಗೆರೆಯಿಂದ ಬೆಂಗಳೂರು ಕಡೆಗೆ ಹೊರಡುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಭರಮಸಾಗರದಲ್ಲಿ ನಿಲುಗಡೆ ಮಾಡುವಂತೆ ಆದೇಶಿಸಬೇಕು. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಗಳ ಏರಿಕೆಯನ್ನು ತಡೆಗಟ್ಟಬೇಕು ಎಂದು ಕೋರಿದರು.
ಸಂಘಟನೆಯ ಅಧ್ಯಕ್ಷ ಉಜ್ಜನಗೌಡ್ರು, ಕೆ.ಜಿ. ರೇವಣಸಿದ್ದಪ್ಪ, ಹನುಮನಗೌಡ, ಚಂದ್ರಪ್ಪ ಎಸ್, ಎಂ.ಎಸ್. ಪ್ರಭು, ಮಂಜಣ್ಣ, ರಮೇಶ, ಗೀತಮ್ಮ, ಜಯ್ಯಣ್ಣ, ಎ.ಜಿ. ರಾಜಶೇಖರಪ್ಪ, ಬಸಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net