ಹೊನ್ನೂರು ಕೆರೆ ಸಮಗ್ರ ಅಭಿವೃದ್ಧಿಗೆ ಯೋಜನೆ

ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಹೊನ್ನೂರು ಕೆರೆ ಅಭಿವೃದ್ಧಿಪಡಿಸುವ ಸಂಬಂಧ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ದೂಡಾ ಆಯುಕ್ತೆ ರೇಣುಕಾ, ನಗರಸಭೆ ಆಯುಕ್ತ ಡಾ.ಮಹಾಂತೇಶ್, ಉಪಾಯುಕ್ತ ಉದಯಕುಮಾರ್ ಇತರರಿದ್ದರು.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಹೊನ್ನೂರು ಕೆರೆ ಅಭಿವೃದ್ಧಿಪಡಿಸುವ ಸಂಬಂಧ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ದೂಡಾ ಆಯುಕ್ತೆ ರೇಣುಕಾ, ನಗರಸಭೆ ಆಯುಕ್ತ ಡಾ.ಮಹಾಂತೇಶ್, ಉಪಾಯುಕ್ತ ಉದಯಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 2.30 ಕೋಟಿ ರೂ. ಬಳಕೆಗೆ ನಿರ್ಧಾರ
  • ನೀರಿನ ಸಂಗ್ರಹಣಾ ಸಾಮರ್ಥ್ಯ ವೃದ್ಧಿಗೆ ಯತ್ನ
  • ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾಹಿತಿ
ದಾವಣಗೆರೆ: ತಾಲೂಕಿನ ಪ್ರಮುಖ ಜಲಮೂಲಗಳಲ್ಲೊಂದಾದ ಹೊನ್ನೂರು ಕೆರೆಯ ಸಮಗ್ರ ಅಭಿವೃದ್ಧಿಗೆ 2.30 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೊನ್ನೂರು ಕೆರೆ ಅಭಿವೃದ್ಧಿಪಡಿಸುವ ಸಂಬಂಧ ಗುರುವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಕೆರೆಯು ಕೃಷಿ ಹಾಗೂ ಇತರೆ ಪ್ರಮುಖ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದು, ಒಟ್ಟು 392 ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆಯ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯವು 146.94 ಎಂ.ಸಿ.ಎಫ್.ಟಿ ಆಗಿರುತ್ತದೆ. 2023-24ನೇ ಸಾಲಿನ ಏಕರೂಪ ದರಪಟ್ಟಿಯ ಅನ್ವಯ ಈ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ ಎಂದರು.
ಕೆರೆಯ ಜಲಮೂಲವನ್ನು ಸಂರಕ್ಷಿಸಲು ಮತ್ತು ಸುತ್ತಮುತ್ತಲಿನ ಪರಿಸರವನ್ನು ಸುಧಾರಿಸಲು, ಕೆರೆಯ ಸುತ್ತ ಹಾಗೂ ಕೆರೆಯ ಒಳಗಿರುವ ಅನಗತ್ಯ ಗಿಡ-ಗಂಟೆ ಮತ್ತು ಜಾಲಿ ಗಿಡಗಳನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಛಗೊಳಿಸಲಾಗುವುದು, ಕೆರೆಯ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ವೈಜ್ಞಾನಿಕವಾಗಿ ಹೂಳನ್ನು ತೆಗೆಯಲಾಗುವುದು ಎಂದರು.
ಕೆರೆಯ ಸುತ್ತಲಿನ ಏರಿಯನ್ನು ಬಲಪಡಿಸಿ, ಕಾಂಕ್ರೀಟ್ ಟ್ಯಾಂಪೋಪ್ಲೇಟ್ ವಾಲ್ ಮತ್ತು ಟೋವಾಲ್ ರಿವಿಟ್‌ಮೆಂಟ್ ಕಟ್ಟಡವನ್ನು ನಿರ್ಮಿಸಲಾಗುವುದು. ಕೆರೆಗೆ ಹೊಂದಿಕೊಂಡಂತೆ ಹೊಸದಾಗಿ ಚೆಕ್‌ಡ್ಯಾಂ ಕಂ ಲೋಲೆವೆಲ್ ಕಾಸ್‌ವೇ ಅನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಕೆರೆಯ ಸುತ್ತಲಿನ ಇಕ್ಕೆಲದಲ್ಲಿ ಸುಂದರವಾದ ಕರ್ಬ್‌ಸ್ಟೋನ್‌ಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರ ಸುರಕ್ಷತೆಗಾಗಿ ಕೆರೆಯ ಸುತ್ತಲೂ ವ್ಯವಸ್ಥಿತವಾಗಿ ವಿದ್ಯುದ್ದೀಪ ಅಳವಡಿಸಲಾಗುವುದು, ಕೆರೆಯ ಹೆಚ್ಚುವರಿ ನೀರು ಸರಾಗವಾಗಿ ಹರಿದು ಹೋಗಲು ಕೆರೆಯ ಕೋಡಿಯನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಈ ಯೋಜನೆಯು ಜಾರಿಗೆ ಬರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ಮಟ್ಟ ವೃದ್ಧಿಯಾಗಲಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಸ್ಥಳೀಯ ಪರಿಸರ ಸುಧಾರಣೆಗೆ ತೀವ್ರ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ದೂಡಾ ಆಯುಕ್ತೆ ರೇಣುಕಾ, ನಗರಸಭೆ ಆಯುಕ್ತ ಡಾ.ಮಹಾಂತೇಶ್, ಉಪಾಯುಕ್ತ ಉದಯಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net