ಕಟ್ಟಡ ತ್ಯಾಜ್ಯ ಬೇಕಾಬಿಟ್ಟಿ ಎಸೆದ್ರೆ ದಂಡ

ದಾವಣಗೆರೆ ನಗರಪಾಲಿಕೆಯಲ್ಲಿ ಹಮ್ಮಿಕೊಂಡಿದ್ದ ಬಜೆಟ್‌ನ ಪೂರ್ವಭಾವಿ ಸಭೆಯಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಅಧಿಕಾರಿಗಳಾದ ಮಂಜುಳಾ ದೇವಿ, ಬಿ.ಎಚ್. ಉದಯಕುಮಾರ್, ಪ್ರಿಯಾಂಕಾ ಇತರರಿದ್ದರು.
ದಾವಣಗೆರೆ ನಗರಪಾಲಿಕೆಯಲ್ಲಿ ಹಮ್ಮಿಕೊಂಡಿದ್ದ ಬಜೆಟ್‌ನ ಪೂರ್ವಭಾವಿ ಸಭೆಯಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಅಧಿಕಾರಿಗಳಾದ ಮಂಜುಳಾ ದೇವಿ, ಬಿ.ಎಚ್. ಉದಯಕುಮಾರ್, ಪ್ರಿಯಾಂಕಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 5 ರಿಂದ 10 ಸಾವಿರ ರೂ. ಶುಲ್ಕ ವಿಧಿಸುವ ಆಲೋಚನೆ
  • ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯಪಡೆ ರಚನೆ
  • ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆಯುಕ್ತೆ ರೇಣುಕಾ ಇಂಗಿತ
ದಾವಣಗೆರೆ: ನಗರದಲ್ಲಿ ಬೇಕಾಬಿಟ್ಟಿ ಕಟ್ಟಡ ತ್ಯಾಜ್ಯ ಡಂಪ್ ಮಾಡುವವರಿಗೆ 5 ರಿಂದ 10 ಸಾವಿರ ರೂ. ದಂಡ ವಿಧಿಸುವ ಬಗ್ಗೆ ಮುಂಬರುವ ಬಜೆಟ್ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ಹೇಳಿದರು.
ನಗರಪಾಲಿಕೆ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಜೆಟ್‌ನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶಿವನಗರದ ಕೊಳಚೆನೀರು ಸಂಸ್ಕರಣಾ ಘಟಕ ಹಾಗೂ ಮಹಾತ್ಮ ಗಾಂಧಿ ಭವನ ಸಮೀಪ ಸ್ಥಳವನ್ನು ಕಟ್ಟಡ ತ್ಯಾಜ್ಯ ಹಾಕಲು ಗುರುತಿಸಲಾಗಿದೆ. ಬೇರೆಡೆ ಕಟ್ಟಡ ತ್ಯಾಜ್ಯ ಹಾಕುವಂತಿಲ್ಲ ಎಂದು ಹೇಳಿದರು.
ರಾತ್ರಿ 9ರಿಂದ ಬೆಳಗಿನ ಜಾವ 3ರವರೆಗೂ ಕಟ್ಟಡ ತ್ಯಾಜ್ಯ ಡಂಪಿಂಗ್ ಮಾಡುತ್ತಿರುವುದು ಗಮನಕ್ಕಿದೆ. ಇದರ ಪರಿಶೀಲನೆಗೆ ಪಾಲಿಕೆಯಿಂದಲೇ ಕಾರ್ಯಪಡೆ ರಚಿಸಲಾಗುವುದು. ಘನತ್ಯಾಜ್ಯ ವಿಲೇವಾರಿಗೆ 22 ವಾಹನ ಖರೀದಿಗೆ ಟೆಂಡರ್ ಕರೆಯಲಾಗುತ್ತಿದೆ ಎಂದರು.
ರಸ್ತೆಗೆ ಬಿಡಾಡಿ ದನ-ಹಂದಿ ಬಿಡುವಂತಿಲ್ಲ
ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದೆ. ಕೆಲವು ಗೂಳಿಗಳಂತೆ ಜನರತ್ತ ನುಗ್ಗಿದ ಉದಾಹರಣೆಗಳಿವೆ ಎಂದು ಹೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಬಿಡಾಡಿ ದನ ಹಾಗೂ ಹಂದಿಗಳನ್ನು ರಸ್ತೆಗಳಿಗೆ ಬಿಡದಂತೆ ಅವುಗಳ ಮಾಲೀಕರಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಕೆಲವು ದನಗಳನ್ನು ಗೋಶಾಲೆಗೆ ಬಿಟ್ಟು ಬಂದಿದ್ದೇವೆ. ಇನ್ನು ಮುಂದೆ ನಿರ್ಲಕ್ಷೃ ತಾಳಿದರೆ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಬೀದಿನಾಯಿಗಳ ಸಂಖ್ಯೆ ನಿಯಂತ್ರಣೆ ಮಾಡಿ ಎಂದೂ ಬಂಡೀಕರ್ ಮನವಿ ಮಾಡಿದರು. ಸಾರ್ವಜನಿಕ ಸ್ಥಳಗಳಲ್ಲಿನ ಶ್ವಾನಗಳ ಬಗ್ಗೆ ವರದಿ ಪಡೆದು ಅವನ್ನು ಒಂದೆಡೆ ಸ್ಥಳಾಂತರಿಸುವ ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ ಶ್ವಾನಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದರು.
ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ನಡೆಸುವ ಟೆಂಡರ್‌ದಾರರಿಂದಲೂ ಲೋಪ ಆಗುತ್ತಿವೆ. ಶಸ್ತ್ರಚಿಕಿತ್ಸೆ ಮಾಡದೆ ವಾಪಾಸ್ ನಿಗದಿತ ಸ್ಥಳಕ್ಕೆ ತಂದು ಬಿಟ್ಟಿದ್ದ ಹೆಣ್ಣುನಾಯಿ ಮತ್ತೆ ಮರಿಗಳನ್ನು ಹಾಕಿದೆ. ಇದಕ್ಕೆ ಯಾರು ಹೊಣೆ? ಎಂಬ ಆರೋಪ ಕೇಳಿಬಂತು. ಆಯುಕ್ತರು ಇದು ನನ್ನ ಗಮನಕ್ಕೆ ಇರಲಿಲ್ಲ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಾಡಾ ಕ್ರಾಸ್‌ನಿಂದ ಕೆಎಸ್‌ಆರ್‌ಟಿಸಿವರೆಗೆ ಬೀದಿದೀಪ ಅಳವಡಿಸಲು ಕ್ರಮ ವಹಿಸಲಾಗಿದೆ. ನಗರದಲ್ಲಿ 12 ಸಾವಿರ ಬೀದಿದೀಪಗಳ ಕೊರತೆ ಇದೆ. ಹೊಸ ಟೆಂಡರ್‌ಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗಿದೆ ಎಂದು ಆಯುಕ್ತರು ಹೇಳಿದರು.
ರಾಜಕಾಲುವೆಗಳ ಒತ್ತುವರಿ ತೆರವು
ನಗರದಲ್ಲಿ ಕೆಲವು ಹೋಟೆಲ್, ಶಾಲೆಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿಕೊಂಡಿದ್ದು ಸರ್ಕಾರದ ಜಾಗ ಉಳಿಸಿ ಎಂದು ಕನ್ನಡ ಪರ ಹೋರಾಟಗಾರ ಎಸ್.ಜಿ. ಸೋಮಶೇಖರ್ ಮನವಿ ಮಾಡಿದರು.
ನಗರದಲ್ಲಿ 48 ಕಿ.ಮೀ.ವರೆಗಿನ ರಾಜಕಾಲುವೆ ಗುರುತಿಸಿ, ಸಂಪರ್ಕ ಕಲ್ಪಿಸಲು ಕ್ರಿಯಾಯೋಜನೆ ರೂಪಿಸಿ ಕೆಯುಐಡಿಎಫ್‌ಸಿಗೆ ಕಳಿಸಲಾಗಿದೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಆಯುಕ್ತರು ಉತ್ತರಿಸಿದರು.
ರಾಜಕಾಲುವೆ ಒತ್ತುವರಿ ಮಾಡಿದ್ದ ಖಾಸಗಿ ಶಾಲೆಯೊಂದರ ಕಟ್ಟಡ ತೆರವಿಗೆ ಆದೇಶಿಸಿದ್ದು ಶಾಲೆಯವರು ಮೇಲ್ಮನವಿ ಸಲ್ಲಿಸಿದ್ದಾರೆ. ಲೋಕಿಕೆರೆ ರಸ್ತೆಯ ಕಟ್ಟಡವೊಂದರ ಮಾಲೀಕರು ಸಿಡಿಪಿ ಬಳಿಕೆ ರಸ್ತೆಗೆ ಜಾಗ ಬಿಟ್ಟುಕೊಡುವುದಾಗಿ ಹೇಳಿದ್ದಾರೆ ಎಂದೂ ಉತ್ತರಿಸಿದರು.
ಕುಂದುವಾಡ ಕೆರೆ ಪಕ್ಕದ ಬಫರ್ ಜೋನ್‌ನಲ್ಲಿ ಹೊಸ ಸಸ್ಯ ಪ್ರಬೇಧಗಳನ್ನು ಬೆಳೆಸಿದರೆ ಕೆರೆಯ ಆವರಣ ಸುಂದರವಾಗಲಿದೆ. ಪ್ಲಾಸ್ಟಿಕ್ ನಿಷೇಧ ಕಾನೂನಿದ್ದರೂ ಪ್ಲಾಸ್ಟಿಕ್ ಫ್ಲೆಕ್ಸ್‌ಗಳೇ ವಿಜೃಂಭಿಸುತ್ತಿವೆ. ಇದರ ಬದಲು ಬಟ್ಟೆಯ ಫಲಕಗಳಿಗೆ ಆದ್ಯತೆ ನೀಡಿ ಪಾಲಿಕೆ ವರಮಾನ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ನಗರದಲ್ಲಿ ಬಹುತೇಕ ಪಾರ್ಕ್‌ಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಇದರ ನಿರ್ವಹಣೆಗೆ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ದೇವರಮನೆ ಕೋರಿದರು.
ಬೀದಿಬದಿ ವ್ಯಾಪಾರಕ್ಕೆ ಮತ್ತೆ ಜಕಾತಿ
ಬೀದಿಬದಿ ವ್ಯಾಪಾರಿಗಳು ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದು ಸೌಂದರ್ಯೀಕರಣ ಹೇಗಾದೀತು? ಎಂದು ಪತ್ರಕರ್ತ ಶಂಭು ಪ್ರಶ್ನಿಸಿದರು. ಬೀದಿವ್ಯಾಪಾರಿಗಳು ವ್ಯಾಪಾರದ ಹೆಸರಲ್ಲಿ ರಸ್ತೆಗಿಳಿಯುತ್ತಿದ್ದು ನಿಟ್ಟುವಳ್ಳಿಯಲ್ಲಿ ರಸ್ತೆ ಅಪಘಾತವಾಗಿ ಬಾಲಕಿ ಗಾಯಗೊಂಡಿದ್ದಾರೆ. ಪಾದಚಾರಿ ರಸ್ತೆಗಳಲ್ಲೂ ಜನರು ವಾಯುವಿಹಾರ ಮಾಡದ ಸ್ಥಿತಿ ಇದೆ. ಈ ಹಿಂದೆ ಪುರಪಿತೃಗಳು ಜಕಾತಿ ವಸೂಲಾತಿ ವ್ಯವಸ್ಥೆ ಕೈಬಿಟ್ಟಿದ್ದರು. ಮತ್ತೆ ಇದನ್ನು ಮರು ಆರಂಭಿಸುವ ಬಗ್ಗೆ ಮುಂದಿನ ಬಜೆಟ್ ಸಭೆಯಲ್ಲಿ ನಿರ್ಣಯಿಸಲಾಗುವುದು ಎಂದು ಆಯುಕ್ತರು ಹೇಳಿದರು.
ಶೌಚಗೃಹ ನಿರ್ವಹಣೆ ಖಾಸಗಿಗೆ
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ ಸೂಪರ್ ಮಾರ್ಕೆಟ್ ಸೇರಿ ಅಗತ್ಯವಿರುವೆಡೆ ಸುಲಭ ಶೌಚಗೃಹ ತೆರೆಯಬೇಕು. ಕೆಲವು ಪಾರ್ಕ್‌ಗಳಲ್ಲಿ ಶೌಚಗೃಹ ವ್ಯವಸ್ಥೆ ಸರಿಯಿಲ್ಲ ಎಂದು ಹೇಳಿದರು. ಆಯುಕ್ತರು ಪ್ರತಿಕ್ರಿಯಿಸಿ ಶೌಚಗೃಹಗಳ ನಿರ್ವಹಣೆಗೆ ಸ್ವಸಹಾಯ ಗುಂಪಿನವರು ಮುಂದೆ ಬರುತ್ತಿಲ್ಲ. ಹೀಗಾಗಿ ಖಾಸಗಿಯವರಿಗೆ ವಹಿಸಲಾಗುವುದು ಎಂದರು.
ನಿವೇಶನಗಳಿಗೆ ಕಾಪೌಂಡ್ ಇದ್ದೇರೇನೆ ಇ-ಸ್ವತ್ತು ನೀಡುವ ನಿರ್ಧಾರದಿಂದಾಗಿ ಕೆಲವೆಡೆ ಪೀಡಿಸಲಾಗುತ್ತಿದೆ ಎಂದು ಯುವ ಬ್ರಿಗೇಡ್‌ನ ನಾಗರಾಜ ಸುರ್ವೆ ಹೇಳಿದರು.
ಪಾಲಿಕೆ ನೌಕರರಿಗೆ ಆವರ್ತನಿಧಿ
ನಗರಪಾಲಿಕೆ ನೌಕರರ ವೈದ್ಯಕೀಯ ತುರ್ತು ಸಂದರ್ಭದಲ್ಲಿ ತಾತ್ಕಾಲಿಕ ಮುಂಗಡವಾಗಿ ನೀಡಲು 50 ಲಕ್ಷ ರೂ.ಗಳ ಆವರ್ತನಿಧಿ ಸ್ಥಾಪಿಸಬೇಕು. ನೌಕರರ ವಸತಿಗೃಹ ಸಮುಚ್ಛಯ ನಿರ್ಮಾಣಕ್ಕೆ 5 ಕೋಟಿ ರೂ., ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ 25 ಲಕ್ಷ ರೂ. ತೆಗೆದಿಡಬೇಕು. ಗುಂಪುವಿಮೆ ಜಾರಿಗೊಳಿಸಬೇಕು ಎಂದು ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜು ಮನವಿ ಮಾಡಿದರು.
ಸಭೆಯಲ್ಲಿ ಪಾಲಿಕೆ ಪ್ರಭಾರ ಉಪಾಯುಕ್ತೆ (ಅಭಿವೃದ್ಧಿ) ಮಂಜುಳಾ ದೇವಿ, ಕಂದಾಯ ಉಪಾಯುಕ್ತ ಬಿ.ಎಚ್. ಉದಯಕುಮಾರ್, ಮುಖ್ಯ ಲೆಕ್ಕಾಧಿಕಾರಿ ಪ್ರಿಯಾಂಕಾ, ಲೆಕ್ಕಾಧಿಕಾರಿ ನಾಮದೇವ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net