ಜನಮನ ಸೆಳೆದ ‘ಮುತ್ತು ಬಂದಿದೆ ಕೇರಿಗೆ’

ದಾವಣಗೆರೆಯಲ್ಲಿ ಬುಧವಾರ ಪ್ರದರ್ಶನಗೊಂಡ ‘ಮುತ್ತು ಬಂದಿದೆ ಕೇರಿಗೆ’ ನೃತ್ಯರೂಪಕದ ದೃಶ್ಯ.
ದಾವಣಗೆರೆಯಲ್ಲಿ ಬುಧವಾರ ಪ್ರದರ್ಶನಗೊಂಡ ‘ಮುತ್ತು ಬಂದಿದೆ ಕೇರಿಗೆ’ ನೃತ್ಯರೂಪಕದ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಕನಕದಾಸರ ಬದುಕು-ಬರಹ ಆಧರಿತ ನೃತ್ಯ ರೂಪಕ
  • ಕಲಾವಿದೆಯರ ಮನೋಜ್ಞ ಅಭಿನಯ
ದಾವಣಗೆರೆ : ನಗರದ ಪ್ರತಿಮಾ ಸಭಾ ಹಾಗೂ ಬೆಂಗಳೂರಿನ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಬುಧವಾರ ಸಂಜೆ ಆಯೋಜನೆಯಾಗಿದ್ದ ಕನಕದಾಸರ ಬದುಕು-ಬರಹ ಆಧರಿತ ‘ಮುತ್ತು ಬಂದಿದೆ ಕೇರಿಗೆ’ ನೃತ್ಯ ರೂಪಕ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಬೆಂಗಳೂರಿನ ಭ್ರಮರಿ ನೃತ್ಯ ಸಂಸ್ಥೆಯ ಕಲಾವಿದೆಯರು ಮನೋಜ್ಞವಾಗಿ ಅಭಿನಯಿಸಿದರು. ಪ್ರೇಕ್ಷಕರು ತದೇಕಚಿತ್ತದಿಂದ ನೃತ್ಯ ರೂಪಕವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು.
ಸಾಹಿತಿ ಕಾ.ತ. ಚಿಕ್ಕಣ್ಣ ಅವರ ಪರಿಕಲ್ಪನೆ ಮತ್ತು ಸಾಹಿತ್ಯ, ಪ್ರವೀಣ್ ಡಿ. ಅವರ ಮಧುರವಾದ ಸಂಗೀತ ಸಂಯೋಜನೆ, ರಂಗ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಅವರ ಅತ್ಯುತ್ತಮ ಸಮನ್ವಯ ಹಾಗೂ ತಾಂತ್ರಿಕ ನಿರ್ದೇಶನದಲ್ಲಿ ಸ್ನೇಹ ಕಪ್ಪಣ್ಣ ಅವರ ಸಂಯೋಜನೆ ಮತ್ತು ನಿರ್ದೇಶನದಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಸಹಕಾರದೊಂದಿಗೆ ನಡೆದ ಈ ಪ್ರದರ್ಶನ ಬೆಣ್ಣೆ ನಗರಿಯ ಮಂದಿಗೆ ಮುದ ನೀಡಿತು.

ಮಾನವೀಯ ಮೌಲ್ಯಗಳ ಸಂದೇಶ

ಕನಕದಾಸರು, ಪುರಂದರ ದಾಸರು, ಬಸವಣ್ಣ ಅವರು ಸಮಾಜಕ್ಕೆ ಮಾನವೀಯ ಮೌಲ್ಯಗಳ ಸಂದೇಶ ನೀಡಿದ್ದಾರೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನೃತ್ಯರೂಪಕ ಪ್ರದರ್ಶನದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರ ಬದುಕು-ಬರಹವನ್ನು ಕಲಾವಿದರು ನೃತ್ಯ ರೂಪಕದ ಮೂಲಕ ಕಟ್ಟಿಕೊಟ್ಟಿದ್ದು ವಿಶೇಷವಾಗಿತ್ತು. ಇದನ್ನು ನೋಡಿದ ಮೇಲೆ ಕನಕದಾಸರ ಕೃತಿಗಳನ್ನು ಓದಬೇಕು, ಅವರ ಜೀವನ ಮೌಲ್ಯಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಹೆಚ್ಚಾಗುತ್ತಿದೆ ಎಂದರು.
ಪ್ರತಿಮಾ ಸಭಾ ಕಳೆದ ಐವತ್ತು ವರ್ಷಗಳಿಂದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ ಸೇರಿ ವಿವಿಧ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಹಾಗೂ ಅವರ ಪುತ್ರಿ ಸ್ನೇಹ ಕಪ್ಪಣ್ಣ ಅವರು ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರನ್ನೊಳಗೊಂಡಂತೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.
ಪ್ರತಿಮಾ ಸಭಾದ ಗೌರವಾಧ್ಯಕ್ಷ ಪ್ರೊ.ಎಸ್. ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬೀರೇಶ್ವರ ದೇವಸ್ಥಾನ ಜಾಗದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಚ್.ಬಿ. ಗೋಣೆಪ್ಪ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಜಿ. ಗಣೇಶಪ್ಪ, ಕನಕ ನೌಕರರ ಬಳಗದ ಅಧ್ಯಕ್ಷ ಶಿವಾನಂದ ದಳವಾಯಿ, ಪ್ರತಿಮಾ ಸಭಾ ಅಧ್ಯಕ್ಷ ಬಾ.ಮ. ಬಸವರಾಜಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಲ್ಲೇಶ್, ಜಿ.ಎಚ್. ಶಂಕರ್, ಎಸ್.ಎಸ್. ಸಿದ್ಧರಾಜು, ಗೋಪಾಲಕೃಷ್ಣ, ಮಾಧವಿ, ಟಿ.ಎನ್. ಶೈಲಜಾ, ನಾಗರಾಜ ಸಿರಿಗೆರೆ, ಎನ್.ಟಿ. ಮಂಜುನಾಥ್, ಎಸ್.ಎಸ್. ಗಿರೀಶ್, ಪುರಂದರ ಲೋಕಿಕೆರೆ ಇದ್ದರು. ನೃತ್ಯ ರೂಪಕ ಪ್ರದರ್ಶನಕ್ಕೂ ಮುನ್ನ ಸಂಗೀತ ಶಿಕ್ಷಕ ಆನಂದ ಪಾಟೀಲ್ ಅವರು ಕನಕದಾಸರ ಕೀರ್ತನೆಗಳನ್ನು ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net