ಒತ್ತುವರಿ ಸುಳಿಯಲ್ಲಿ ಪಾರ್ಕ್ Park

ಚನ್ನಗಿರಿ ಪಟ್ಟಣದ ಮಣ್ಣಮ್ಮ ಶಾಲೆ ಹಿಂಭಾಗದ ಪಾರ್ಕ್‌ನ ದೃಶ್ಯ.Park
ಚನ್ನಗಿರಿ ಪಟ್ಟಣದ ಮಣ್ಣಮ್ಮ ಶಾಲೆ ಹಿಂಭಾಗದ ಪಾರ್ಕ್‌ನ ದೃಶ್ಯ.Park
Published on

ಪ್ರಮುಖ ಮುಖ್ಯಾಂಶಗಳು

  • ಲೇಜೌಟ್‌ಗಳಲ್ಲಿ ಮೀಸಲಿಟ್ಟ ಸೈಟ್‌ಗಳು ಅನಾಥ
  • ಅನೈತಿಕ ಚಟುವಟಿಕೆಗಳ ತಾಣ
ಜಗದೀಶ್ ಟಿ.ಎನ್. ಚನ್ನಗಿರಿ
ಐತಿಹಾಸಿಕ ಹಿನ್ನೆಲೆಯುಳ್ಳ, ವೇಗವಾಗಿ ಬೆಳೆಯುತ್ತಿರುವ ಚನ್ನಗಿರಿ ಪಟ್ಟಣದ ಲೇಔಟ್‌ಗಳಲ್ಲಿ ಸಾರ್ವಜನಿಕರಿಗಾಗಿ ಮೀಸಲಿಟ್ಟ ಉದ್ಯಾನವನಗಳು (ಪಾರ್ಕ್) ಇಂದು ಅಕ್ಷರಶಃ ಅನಾಥವಾಗಿವೆ. ಅಧಿಕಾರಿಗಳ ನಿರ್ಲಕ್ಷೃ ದಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಾಗಗಳು ಒತ್ತುವರಿಯಾಗುತ್ತಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿವೆ.
ಪಟ್ಟಣದ ಮಣ್ಣಮ್ಮ ಶಾಲೆ ಹಿಂಭಾಗದ ಲೇಔಟ್, ನವನಗರ, ಕಲ್ಲುಸಾಗರ ರಸ್ತೆ ಸೇರಿ ಹಲವು ಬಡಾವಣೆಗಳಲ್ಲಿ ಉದ್ಯಾನವನಕ್ಕಾಗಿ ಜಾಗ ಮೀಸಲಿಡಲಾಗಿದೆ. ಆದರೆ, ಇವುಗಳಲ್ಲಿ ಗಿಡಗಳನ್ನು ನೆಟ್ಟು ಸುಂದರಗೊಳಿಸುವ ಬದಲು ಕಸ-ಕಡ್ಡಿ, ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಶುದ್ಧ ನೀರಿನ ಘಟಕಗಳು ಸಹ ಕೆಟ್ಟು ನಿಂತಿದ್ದು, ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಈ ಜಾಗಗಳು ಸಂಜೆಯಾಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳ ಕೇಂದ್ರವಾಗುತ್ತಿವೆ. ಮದ್ಯವ್ಯಸನಿಗಳು ಇಲ್ಲಿ ಕುಳಿತು ಮದ್ಯಪಾನ ಮಾಡಿ, ಬಾಟಲಿಗಳನ್ನು ಅಲ್ಲೇ ಒಡೆದು ಹಾಕುತ್ತಿದ್ದಾರೆ. ಇದರಿಂದಾಗಿ ಪಾರ್ಕ್‌ನ ತುಂಬ ಗಾಜಿನ ಚೂರುಗಳು ಹರಡಿ ಕೊಂಡಿದ್ದು, ಸಾರ್ವಜನಿಕರು ಆಕಸ್ಮಿಕವಾಗಿ ಕಾಲಿಟ್ಟರೆ ಗಾಯಗೊಳ್ಳುವ ಭೀತಿ ಎದುರಾಗಿದೆ.
ಪುರಸಭೆಯ ನಿಯಮದಂತೆ ಲೇಔಟ್ ಮಾಡುವಾಗ ಶಾಲೆ, ದೇವಸ್ಥಾನ ಹಾಗೂ ಉದ್ಯಾನವನಗಳಿಗೆ ಸಿ.ಎ ಸೈಟುಗಳನ್ನು ಬಿಡುವುದು ಕಡ್ಡಾಯ. ಆದರೆ, ಒಮ್ಮೆ ತಂತಿ ಬೇಲಿ ಹಾಕಿ ಹಸ್ತಾಂತರಿಸಿದ ನಂತರ ಪುರಸಭೆ ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ಉದ್ಯಾನವನದ ಜಾಗವನ್ನು ತಮ್ಮ ಸ್ವಂತ ಬಳಕೆಗೆ ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಾಯುವಿಹಾರಕ್ಕೆ ಜಾಗವೇ ಇಲ್ಲ

ಅಡಕೆ ಬೆಳೆಗಾರರಿಂದ ಆರ್ಥಿಕವಾಗಿ ಸಬಲವಾಗಿರುವ ಈ ತಾಲೂಕು ಕೇಂದ್ರದಲ್ಲಿ ಜನರು ನೆಮ್ಮದಿಯಾಗಿ ವಾಯುವಿಹಾರ ನಡೆಸಲು ಅಥವಾ ಮಕ್ಕಳು ಆಟವಾಡಲು ಒಂದೇ ಒಂದು ಸುಸಜ್ಜಿತ ಉದ್ಯಾನವನ ಇಲ್ಲದಂತಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಒತ್ತುವರಿ ತೆರವುಗೊಳಿಸಿ, ಮೂಲಸೌಕರ್ಯ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
"

ಪಟ್ಟಣದಲ್ಲಿ ಸಾರ್ವಜನಿಕರ ಮನರಂಜನೆ ಗಾಗಿ ಒಂದೂ ಪಾರ್ಕ್ ಇಲ್ಲ. ಲೇಔಟ್‌ಗಳಲ್ಲಿ ಬಿಟ್ಟಿರುವ ಜಾಗಗಳನ್ನು ಅಧಿಕಾರಿಗಳು ರಕ್ಷಿಸಬೇಕು. ಗಿಡಗಂಟೆ ಬೆಳೆದಿರುವ ಕಾರಣ ಯಾರಿಗೂ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರ್ಕಾರಿ ಜಾಗವನ್ನು ಉಳಿಸಿ ಅಭಿವೃದ್ಧಿಪಡಿಸಬೇಕು.

ನಿಯಮದಂತೆ ಉದ್ಯಾನ ವನಗಳಿಗೆ ಬಿಟ್ಟಿರುವ ಜಾಗವನ್ನು ನಿರ್ವಹಣೆ ಮಾಡಲಾಗುವುದು. ಎಲ್ಲಿಯಾದರೂ ಒತ್ತುವರಿ ಕಂಡುಬಂದಲ್ಲಿ ಕೂಡಲೇ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಪಾರ್ಕ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net