ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ಖರ್ಚು-ವೆಚ್ಚ ಕುರಿತು ಹರಿಹರಪೀಠದ ಆವರಣದಲ್ಲಿ ಏ.27ರಂದು ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಲೆಕ್ಕ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ತಿಳಿಸಿದರು.
ಮಠ ಆರಂಭವಾದ 2008ನೇ ಸಾಲಿನಿಂದ 2026ನೇ ವರ್ಷದವರೆಗೆ ಸಂಗ್ರಹಿಸಿದ ಹಣ-ವೆಚ್ಚ ಕುರಿತು ಅಂದು ಲೆಕ್ಕ ನೀಡಲಾಗುವುದು. ಈ ಸಭೆಗೆ ಸಂಘದ ಪದಾಧಿಕಾರಿಗಳು, ಟ್ರಸ್ಟಿಗಳು, ಸಮಾಜದವರು ಭಾಗವಹಿಸಬೇಕು. ಇದುವರೆಗೆ ಲೆಕ್ಕ ಕೇಳಿದವರ ಜತೆಗೆ ಉಚ್ಚಾಟಿತ ಸ್ವಾಮೀಜಿ ಕೂಡ ಬರಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸಮಾಜದ ಸಂಘವೇ ಬೇರೆ, ಟ್ರಸ್ಟೇ ಬೇರೆ. ಸಂಘವು ಸಾಮಾನ್ಯ ಸಭೆ ಮೂಲಕ ಲೆಕ್ಕಪತ್ರ ನೀಡಲಿದೆ. ಆದರೆ ಟ್ರಸ್ಟ್‌ನಿಂದ ಪ್ರತಿ ತಿಂಗಳು ಸಭೆ ನಡೆಸಿ ವಿವರ ನೀಡಲಾಗಿದೆ. ಟ್ರಸ್ಟ್ ಸಾರ್ವಜನಿಕವಾಗಿ ಲೆಕ್ಕ ನೀಡುವ ಪದ್ಧತಿಯಿಲ್ಲ. ಏ. 8ರಂದು ರಾಜ್ಯ ಸಂಘದ ಪದಾಧಿಕಾರಿಗಳಿಗೆ ಹಾಗೂ ಏ. 11ಕ್ಕೆ ಕೆಲವು ಪ್ರಮುಖರಿಗೆ ಲೆಕ್ಕ ನೀಡಲಾಗಿತ್ತು. ಭಕ್ತರಿಗೂ ಲೆಕ್ಕ ಕೇಳುವ ಶಕ್ತಿ ಇದೆ.
ಸಮಾಜದ ಜನರಲ್ಲಿನ ತಪ್ಪುಕಲ್ಪನೆ ಹೋಗಲಾಡಿಸಲು ಸಿರಿಗೆರೆ ನಾಗನಗೌಡರ ಸಲಹೆಯಂತೆ ಸಾರ್ವಜನಿಕ ಲೆಕ್ಕ ಕೊಡಲು ಟ್ರಸ್ಟ್ ಒಪ್ಪಿದೆ. ಟ್ರಸ್ಟ್ ವಿರುದ್ಧದ ಆಪಾದನೆಗಳಿಗೆಲ್ಲ ಅಂದು ವಿವರವಾಗಿ ಉತ್ತರಿಸಲಾಗುವುದು ಎಂದೂ ತಿಳಿಸಿದರು.
ರಾಜೀನಾಮೆ ಬೆದರಿಕೆ ನೀಡಿದ್ದ ಶ್ರೀ
ಉಚ್ಚಾಟಿತ ಸ್ವಾಮೀಜಿ ಒಂದು ವರ್ಷದಿಂದ ಬದಲಾಗಿದ್ದಾರೆ. ನನಗೂ ಅವರೊಂದಿಗೆ 4 ತಿಂಗಳಿಂದ ಸಂಪರ್ಕವಿಲ್ಲ. ಹಿಂದಿನ ಸಭೆಗೆ ‘ಸ್ವಾಮೀಜಿ ಅವರ ಆಚಾರ-ವಿಚಾರ, ಸಂಸ್ಕಾರ’ ವಿಚಾರದ ವಿಷಯ ಇರಿಸಿದ್ದಾಗ ಸ್ವಾಮೀಜಿ ‘ಈ ವಿಷಯ ಬಗ್ಗೆ ಪ್ರಸ್ತಾಪಿಸಿದರೆ ಈಗಲೇ ರಾಜೀನಾಮೆ ನೀಡುತ್ತೇನೆ’ ಎಂದಿದ್ದರು. ಜನರ ಬಳಿ ಚಂದಾ ಎತ್ತದೆ ಹರ ಜಾತ್ರೆಯನ್ನು ಸರಳವಾಗಿ ಮಾಡುವ ಉದ್ದೇಶ ಟ್ರಸ್ಟ್‌ಗಿತ್ತು.
ಆದರೆ ಸ್ವಾಮೀಜಿ ಎಲ್ಲದನ್ನೂ ನಾನು ನೋಡಿಕೊಳ್ಳುವುದಾಗಿ ಜಾತ್ರೆ ನಡೆಸಿದರು. ನಾವ್ಯಾರೂ ಟ್ರಸ್ಟಿಗಳು ಭಾಗಿಯಾಗಲಿಲ್ಲ. ಯುವಕರಿಗೆ ಧಾರ್ಮಿಕ ಕಾರ್ಯಕ್ರಮ, ರೈತ, ಮಹಿಳಾ ಸಮಾವೇಶದಂತಹ ಕಾರ್ಯಕ್ರಮ ನಡೆಸುವುದು ನಮ್ಮೆಲ್ಲರ ಉದ್ದೇಶವಾಗಿತ್ತು. ಆದರೆ ಸ್ವಾಮೀಜಿ ಜಾತ್ರೆಯನ್ನು ರಾಜಕೀಯ ಸಭೆಯಾಗಿಸಿದರು. ಈ ಬಗ್ಗೆ ಭಕ್ತರು ಪ್ರಶ್ನಿಸಿದಾಗ ತಮ್ಮ ಕೋಣೆ ಬಾಗಿಲು ಹಾಕಿ ಒಳಗೆ ಕೂತರು ಎಂದು ಉಮಾಪತಿ ದೂರಿದರು.
ಸ್ವಾಮೀಜಿ ಅವರಿಗೆ ಶ್ವಾಸ ಕೇಂದ್ರ ಅಥವಾ ಪಂಚಮಸಾಲಿ ಪೀಠ ಎರಡರ ಪೈಕಿ ಒಂದರ ಆಯ್ಕೆಗೆ ಅವಕಾಶ ನೀಡಲಾಗಿತ್ತು. ಸ್ವಾಮೀಜಿ ಕೇಳಿದ್ದ ಕಾಲಾವಕಾಶದಂತೆ ಮಾ.24ರಂದು ಸಭೆ ನಡೆಯಬೇಕಿತ್ತು. ಇದರ ದಾರಿ ತಪ್ಪಿಸಲು ಕಾರಣಾಂತರದಿಂದ ಕೆಲವರು ಲೆಕ್ಕ ಕೊಡಿ ಎಂದದ್ದರಿಂದ ಗೊಂದಲವಾಗಿತ್ತು.
ದಿಂಗಾಲೇಶ್ವರ ಸ್ವಾಮೀಜಿ ಮೌನ!
ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಅವರು ನೀಡಿದ ಸಲಹೆಯಂತೆ ವಚನಾನಂದ ಶ್ರೀಗಳನ್ನು ಪಂಚಮಸಾಲಿ ಪೀಠಕ್ಕೆ ಜಗದ್ಗುರುಗಳಾಗಿ ನೇಮಕ ಮಾಡಲಾಯಿತು. ಟ್ರಸ್ಟ್‌ಗೆ ನೀಡಿದ ಸ್ಟಾೃಂಪ್ ಪತ್ರದಲ್ಲಿ ದಿಂಗಾಲೇಶ್ವರ ಶ್ರೀಗಳು ಸೇರಿ 6 ಹಿರಿಯ ಶ್ರೀಗಳ ಸಹಿ ಇದೆ. ಈ ವಿಚಾರವಾಗಿ ದಿಂಗಾಲೇಶ್ವರ ಸ್ವಾಮೀಜಿ ಅದೇಕೋ ಮಾತನಾಡುತ್ತಿಲ್ಲ ಎಂದು ಉಮಾಪತಿ ಹೇಳಿದರು.
ಮಠ ಬಿಡುವುದಿಲ್ಲ ಎಂದಿರುವ ವಚನಾನಂದ ಸ್ವಾಮೀಜಿ, ಟ್ರಸ್ಟ್ ವಹಿಸಿದ ಜವಾಬ್ದಾರಿ ಬಿಟ್ಟು ಬೇರೆಲ್ಲ ಕೆಲಸಗಳನ್ನು ಮಾಡುತ್ತ ಹೋದರು. ಅನೇಕ ಸಲ ವಿದೇಶಗಳಿಗೆ ಹೋದರು. ಹರಿಹರ ಪೀಠ ಕೇವಲ ಅತಿಥಿಗೃಹವಾಗಿತ್ತು. 8 ವರ್ಷದಲ್ಲಿ ಒಮ್ಮೆಯೂ ಮಠದಲ್ಲಿ ಬಸವ ಜಯಂತ್ಯುತ್ಸವ ಮಾಡದವರು ಈಗ ಮಾಡುತ್ತಿದ್ದಾರೆ. ಈಗ ಮಕ್ಕಳಿಗೆ ಬೋಧನೆ ಮಾಡಲು ಮುಂದಾಗಿದ್ದಾರೆ. ಹೈಟೆಕ್ ಆಗಲು ಹೊರಟಿದ್ದಾರೆ. ಅವರ ಇತ್ತೀಚಿನ ಧಾರ್ಮಿಕ ಸಂಸ್ಕಾರ ತೋರಿಕೆಯದು ಎಂದು ಟೀಕಿಸಿದರು.
ಹರಿಹರ ಠಾಣೆಗೆ ದೂರು
ಲೆಕ್ಕ ಕೊಡಲು ಈ ಹಿಂದೆ ಏ.24ರಂದು ದಿನಾಂಕ ನಿಗದಿ ಮಾಡಲಾಗಿತ್ತು. ಈ ವಿಚಾರ ತಿಳಿದ ಸ್ವಾಮೀಜಿ ಕಡೆಯವರು ಅಂದೇ ಹರಿಹರ ಪೀಠದಲ್ಲಿ ಬಸವ ಜಯಂತ್ಯುತ್ಸವ ನಡೆಸುತ್ತಿದ್ದಾರೆ. ಉಚ್ಚಾಟಿತ ಸ್ವಾಮೀಜಿ ಅವರಿಗೆ ಕಾರ್ಯಕ್ರಮ ನಡೆಸಲು ಹಕ್ಕಿಲ್ಲ. ಈ ಬಗ್ಗೆ ಟ್ರಸ್ಟ್‌ನಿಂದ ಹರಿಹರ ಠಾಣೆಗೆ ದೂರು ನೀಡಲಾಗಿದೆ ಎಂದರು. ಲೆಕ್ಕ ನೀಡಿದ ಬಳಿಕವೂ ಸ್ವಾಮೀಜಿ ಪೀಠ ತೊರೆಯದಿದ್ದರೆ ಟ್ರಸ್ಟ್ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಹಿಂದಿನ ಮಹಾಂತ ಸ್ವಾಮೀಜಿ ಅವರು ನಮಗೆ ಚಿನ್ನದ ಕಿರೀಟ ಬದಲಾಗಿ ರುದ್ರಾಕ್ಷಿ ಕಿರೀಟ ಕೇಳಿದರು. ಮಠ ಸ್ಥಾಪನೆ ಆಗದಿದ್ದಾಗ ಸಮಾಜದ ಕಚೇರಿ ಬಳಿ ಜನರ ಸಂಪರ್ಕಕ್ಕಾಗಿ ಗುಡಿಸಲು ಕಟ್ಟಿಕೊಡಿ ಎಂದಿದ್ದರು. ಉಚ್ಚಾಟಿತ ವಚನಾನಂದ ಸ್ವಾಮೀಜಿಗೆ ಓಡಾಡಲು ಅಂಬಾಸಿಡರ್ ಬದಲಾಗಿ ಐಷಾರಾಮಿ ಕಾರೇ ಬೇಕು. ಈ ಸ್ವಾಮೀಜಿಗೆ 2008ರ ಅವಧಿಯಲ್ಲಿ ಯೋಗ ಚಟುವಟಿಕೆ ನಡೆಸುವಾಗಲೂ ನಾನು ಹಣದ ಸಹಕಾರ ನೀಡಿದ್ದೇನೆ. ಉಚ್ಚಾಟಿತ ಸ್ವಾಮೀಜಿಗೆ ಟ್ರಸ್ಟ್ ಬದಲಾಗಿ ಭಕ್ತರೇ ಲೆಕ್ಕ ಕೇಳಲಿದ್ದಾರೆ ಎಂದು ತಿಳಿಸಿದರು.
ರಾಜಕೀಯದಿಂದ ದೂರ
ನಾನು ಮನಸ್ಸು ಮಾಡಿದ್ದರೆ ಶಾಸಕ ಆಗಬಹುದಿತ್ತು. ಆದರೆ ಸಮಾಜದ ಸಂಘಟನೆಯಲ್ಲಿ ತೊಡಗಿರುವ ನಾನು ಒಂದು ಪಕ್ಷಕ್ಕೆ ಸೀಮಿತವಾಗುವುದು ಸರಿಯಲ್ಲ ಎಂದು ಭಾವಿಸಿ ರಾಜಕೀಯಕ್ಕೆ ಬರಲಿಲ್ಲ ಎಂದ ಉಮಾಪತಿ, ನಾನು ಚಿತ್ರದುರ್ಗ, ಶ್ರೀಶೈಲ ಪೀಠ ಎಲ್ಲದರಲ್ಲೂ ಗುರುತಿಸಿಕೊಂಡಿದ್ದೇನೆ. ನನ್ನ ಕಾಯಕದ ಜತೆ ಸೇವೆ ಮಾಡುತ್ತಿದ್ದೇನೆ. ಜಾತಿ ಪಟ್ಟಿಯಲ್ಲಿ ಪಂಚಮಸಾಲಿ ಹೆಸರು ತರಲು ಹಾಗೂ ಪ್ರವರ್ಗ 3ಬಿಗಾಗಿ ಹೋರಾಟ ಮಾಡಿದ್ದೇವೆ. ಸಮಾಜವನ್ನು ಒಸಿಬಿಗೆ ಸೇರಿಸಲು ಸಹ ಹೋರಾಟ ಮಾಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷ ಶಂಕರ್ ಬಿಸರಳ್ಳಿ, ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣಶೆಟ್ಟಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತಮ್ಮ ಹುಲ್ಲತ್ತಿ, ಚಂದ್ರಶೇಖರ ಪೂಜಾರ್, ಜ್ಯೋತಿಪ್ರಕಾಶ್, ಎಂ. ದೊಡ್ಡಪ್ಪ ಇದ್ದರು.