ದಾವಣಗೆರೆಯ ಜಯದೇವ ವೃತ್ತದಲ್ಲಿ ಬುಧವಾರ ಅಡುಗೆ ಅನಿಲ ದರ ಏರಿಕೆ ಖಂಡಿಸಿ, ಸೌದೆ ಒಲೆ ಹಚ್ಚಿ ಅಡುಗೆ ಮಾಡುವ ಮೂಲಕ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ಅನಿತಾಬಾಯಿ, ದಿನೇಶ್ ಕೆ. ಶೆಟ್ಟಿ, ಕೆ.ಜಿ. ಶಿವಕುಮಾರ್, ದಾಕ್ಷಾಯಿಣಮ್ಮ, ಶುಭಮಂಗಳಾ, ರಾಜೇಶ್ವರಿ, ಮಂಜಮ್ಮ, ಕವಿತಾ ಚಂದ್ರಶೇಖರ್, ಸುನಿತಾ ಭೀಮಣ್ಣ ಭಾಗವಹಿಸಿದ್ದರು.
ದಾವಣಗೆರೆ : ಅಡುಗೆ ಅನಿಲ ದರ ಏರಿಕೆ ಖಂಡಿಸಿ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಅಡುಗೆ ಅನಿಲ ದಾಸ್ತಾನು ಮಾಡಿಕೊಳ್ಳದೆ ನಿರ್ಲಕ್ಷೃ ವಹಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಜಯದೇವ ವೃತ್ತದಲ್ಲಿ ಸೌದೆ ಒಲೆ ಹಚ್ಚಿ ಅಡುಗೆ ಮಾಡುವ ಮೂಲಕ ಕಾರ್ಯಕರ್ತೆಯರು ವಿನೂತನ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಡುಗೆ ಅನಿಲದ ದರ ಕಡಿತಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾತನಾಡಿ, ಕೇಂದ್ರ ಸರ್ಕಾರವು ದಿನೆ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಮತ್ತು ಮಧ್ಯಮ ವರ್ಗದವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಈಗ ಗ್ಯಾಸ್ ದರವೂ ಏರಿಕೆಯಾಗಿದೆ. ಒಂದು ರೂಪಾಯಿ, ಎರಡು ರೂಪಾಯಿ ದರ ಏರಿದರೂ ಪ್ರತಿಭಟನೆ ಮಾಡುವ ಬಿಜೆಪಿಗರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗ್ಯಾಸ್ ದರ ಏರಿಕೆಯಾದರೂ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದರು.
ಒಂದು ಕಡೆ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಕೈ ಹಿಡಿಯುತ್ತಿದ್ದರೆ, ಕೇಂದ್ರ ಸರ್ಕಾರವು ಗ್ಯಾಸ್ ಬೆಲೆ ಏರಿಸುವ ಮೂಲಕ ಅವರ ಜೇಬಿಗೆ ಕತ್ತರಿ ಹಾಕುತ್ತಿದೆ. ಬೆಲೆ ಏರಿಕೆಯ ಬಿಸಿ ಕೇವಲ ಒಂದು ವರ್ಗಕ್ಕಲ್ಲ, ಇಡೀ ಸಮಾಜಕ್ಕೆ ತಟ್ಟುತ್ತಿದೆ. ಕೂಡಲೇ ಬೆಲೆ ಇಳಿಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮಹಿಳಾ ಶಕ್ತಿಯು ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪ್ರಮುಖರಾದ ಕೆ.ಜಿ. ಶಿವಕುಮಾರ್, ದಾಕ್ಷಾಯಿಣಮ್ಮ, ಶುಭಮಂಗಳಾ, ರಾಜೇಶ್ವರಿ, ಮಂಜಮ್ಮ, ಕವಿತಾ ಚಂದ್ರಶೇಖರ್, ಸುನಿತಾ ಭೀಮಣ್ಣ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರು, ಪಕ್ಷದ ವಿವಿಧ ಘಟಕಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.