ದಾವಣಗೆರೆಯಲ್ಲಿ ಶುಕ್ರವಾರ ನಡೆದ ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಬಿ.ಕೆ. ಮಂಜುನಾಥ್, ನಿಂಗರಾಜು ಹಾವನೂರು, ಮಹಾಂತೇಶ್ ನಿಟ್ಟೂರು, ಚಂದ್ರಪ್ಪ, ಚಂದ್ರಶೇಖರ್, ರಾಮಕೃಷ್ಣಪ್ಪ, ಲಕ್ಷ್ಮಣ ಬಣಕಾರ, ಕೆ.ಎಸ್. ವಾಗೀಶ್ ಇದ್ದರು.
ದಾವಣಗೆರೆ :ಪರಿಶಿಷ್ಟ ಪಂಗಡದ ಮೀಸಲಾತಿಗಾಗಿ ಅಂಬಿಗರು (ಗಂಗಾಮತಸ್ಥರು) ಸಂಘಟಿತ ಹೋರಾಟ ಮಾಡಬೇಕು ಎಂದು ಹಾವೇರಿ ಜಿಲ್ಲೆಯ ನರಸೀಪುರದ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ಜಿಲ್ಲಾ ಗಂಗಾಮತಸ್ಥರ (ಬೆಸ್ತರ) ಸಂಘ ಹಾಗೂ ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಗರದ ನಿಮಿಷಾಂಬ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಸ್ಟಿ ಮೀಸಲಾತಿಗಾಗಿ ಗಂಗಾಮತಸ್ಥ ಸಮುದಾಯ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಸಂಘಟನೆಯ ಈ ಮಂತ್ರವನ್ನು ಸಮಾಜದವರು ಜಪಿಸಬೇಕು. ಗಂಗಾದೇವಿ ಮತ್ತು ಅಂಬಿಗರ ಚೌಡಯ್ಯ ಜಯಂತಿಗಳಲ್ಲಿ ಸಮುದಾಯದವರು ಸಂಭ್ರಮದಿಂದ ಭಾಗವಹಿಸಬೇಕು. ಮಹಿಳೆಯರು ಜಾಗೃತರಾಗಿ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ಅಂಬಿಗ ಅಥವಾ ಗಂಗಾಮತಸ್ಥ ಸಮುದಾಯಕ್ಕೆ ಭವ್ಯ ಪರಂಪರೆ ಇದೆ. ಗಂಗೆ ಮತ್ತು ವೇದವ್ಯಾಸರು ನಮ್ಮ ಪರಂಪರೆಯ ಪ್ರತೀಕ. ಜಗಜ್ಯೋತಿ ಬಸವೇಶ್ವರರ ಜತೆಗೂಡಿ ಅಂಬಿಗರ ಚೌಡಯ್ಯ ಅವರು ಸಾಮಾಜಿಕ ಕ್ರಾಂತಿ ನಡೆಸಿದರು. ಅವರ ವಿಚಾರಧಾರೆ ನಮಗೆ ದಾರಿ ದೀಪವಾಗಿದೆ. ಎಲ್ಲರನ್ನೂ ಶುದ್ಧೀಕರಿಸಿ ಪವಿತ್ರಗೊಳಿಸುವ ಗಂಗೆ ಶ್ರೇಷ್ಠಳಾಗಿದ್ದು, ಆ ದೇವಿಯ ಒಲಮೆಯಾಗಬೇಕಾದರೆ ನಾವೂ ಪರಿಶುದ್ಧ ಜೀವನ ನಡೆಸಬೇಕು ಎಂದು ತಿಳಿಸಿದರು.
ಪ್ರತಿ ವರ್ಷ ಜನವರಿಯಲ್ಲಿ ಹಾವೇರಿ ಜಿಲ್ಲೆಯ ನರಸೀಪುರದ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ನಡೆಯುವ ಅಂಬಿಗರ ಶರಣ ಸಂಸ್ಕೃತಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಮುದಾಯದ ಜನರಿಗೆ ಹೇಳಿದರು.
ಜಿಲ್ಲಾ ಗಂಗಾಮತಸ್ಥರ (ಬೆಸ್ತರ) ಸಂಘದ ಅಧ್ಯಕ್ಷ ಬಿ.ಕೆ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಸಮುದಾಯದ ಮುಖಂಡರಾದ ರಾಮಕೃಷ್ಣಪ್ಪ, ಲಕ್ಷ್ಮಣ ಬಣಕಾರ, ಕೆ.ಎಸ್. ವಾಗೀಶ್, ಗಂಗಾಧರಪ್ಪ ಪೂಜಾರ್, ಪರಮೇಶ್ವರಪ್ಪ, ಕೃಷ್ಣಪ್ಪ ಸಾರಥಿ, ಅಂಜಿನಪ್ಪ ಬಾತಿ ಇದ್ದರು.
ಕಾಯಕ ಪ್ರಧಾನ ಸಮಾಜ
ನಮ್ಮದು ಕಾಯಕ ಪ್ರಧಾನ ಸಮಾಜವಾಗಿದೆ. ದುಶ್ಚಟದಿಂದ ದೂರವಿದ್ದು ಶ್ರಮ, ದುಡಿಮೆಯಲ್ಲಿ ತೊಡಗುವುದರಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು, ಉಪನ್ಯಾಸ ನೀಡಿದ ಸಾಹಿತಿ ಮಹಾಂತೇಶ್ ನಿಟ್ಟೂರು ಹೇಳಿದರು.
ದೇಶ ಮತ್ತು ನಾಡಿನ ಒಳಿತಿಗಾಗಿ ಗಂಗೆ ಸ್ವರ್ಗದಿಂದ ಧರೆಗಿಳಿದ ದಿನವನ್ನೇ ಗಂಗಾ ಜಯಂತಿಯನ್ನಾಗಿ ಆಚರಿಸುತ್ತಿದ್ದೇವೆ. ಸಮಾಜದಲ್ಲಿ ಗಂಗೆ ಮಕ್ಕಳಿಗೆ ತನ್ನದೇ ಆದ ಅಸ್ತಿತ್ವವಿದೆ. ಗಂಗೆ ಇಲ್ಲದೆ ಈ ಜಗತ್ತಿನಲ್ಲಿ ಏನೂ ಇರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಇತರ ಸಮಾಜಗಳಿಗೆ ಹೋಲಿಸಿದರೆ ನಾವು ಹಿಂದುಳಿದಿದ್ದೇವೆ. ಸರಿಯಾದ ದಿಕ್ಕಿನಲ್ಲಿ ಮುಂದೆ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ ಮಾತನಾಡಿ, ಸಮಾಜಕ್ಕೆ ಎಸ್ಟಿ ಮೀಸಲಾತಿ ಸಿಗಬೇಕು, ಅದಕ್ಕಾಗಿ ಸಂಘಟಿತ ಹೋರಾಟ ಮಾಡಬೇಕಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಮುಖಂಡ ಚಂದ್ರಶೇಖರ್ ಮಾತನಾಡಿ, ನಮ್ಮ ಸಮಾಜ ಒಗ್ಗಟ್ಟಾಗದಿದ್ದರೆ ಬಲ ಸಿಗುವುದಿಲ್ಲ. ಮುಂಬರುವ ದಿನಗಳಲ್ಲಿ ಮೀಸಲಾತಿ ಹೋರಾಟದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.