ಅಕ್ರಮ ಕಟ್ಟಡಗಳ ತೆರವಿಗೆ ವಿರೋಧ

ಜಗಳೂರು ಪಟ್ಟಣದ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ-65ರ ಒತ್ತುವರಿ ಕಟ್ಟಡಗಳನ್ನು ತೆರೆವುಗೊಳಿಸುತ್ತಿರುವುದು.
ಜಗಳೂರು ಪಟ್ಟಣದ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ-65ರ ಒತ್ತುವರಿ ಕಟ್ಟಡಗಳನ್ನು ತೆರೆವುಗೊಳಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ಜತೆ ವಾಗ್ವಾದ
  • ಮಳಿಗೆಗಳ ಮಾಲೀಕರಿಗೆ ಪಾಠ ಮಾಡಿದ ಶಾಸಕ ದೇವೇಂದ್ರಪ್ಪ
  • ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ
ಜಗಳೂರು: ರಸ್ತೆ ವಿಸ್ತರಣೆಗೆ ಪೂರಕವಾಗಿ ಜಗಳೂರಿನಲ್ಲಿ ಕಳೆದೆರೆಡು ದಿನಗಳಿಂದ ಶುರುವಾಗಿರುವ ರಸ್ತೆ ವಿಸ್ತರಣೆಗೆ ಕಟ್ಟಡ ಮಾಲೀಕರು ಬುಧವಾರ ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳ ಜತೆ ವಾಗ್ವಾದಕ್ಕೆ ಇಳಿದರು. 
ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವು ಮಾಡಿದರೆ ಎಲ್ಲಿಗೆ ಹೋಗಬೇಕು? ಹಾಗೂ-ಹೀಗೂ ಬದುಕು ಕಟ್ಟಿಕೊಟ್ಟಿಕೊಂಡಿದ್ದೇವೆ. ಮುಂದೆ ದಾರಿ ಕಾಣುತ್ತಿಲ್ಲ ಎಂದು ಮಳಿಗೆಗಳ  ಮಾಲೀಕರು ಅಳಲು ತೋಡಿಕೊಂಡರು.
ಬೆಳಗ್ಗೆ ಅಂಬೇಡ್ಕರ್ ವೃತ್ತದ ಬಳಿ ಕಟ್ಟಡ, ಶೆಡ್ ತೆರವಿಗೆ ಮುಂದಾದಾಗ ಸ್ಥಳೀಯರು ಅಡ್ಡಿ ಪಡಿಸಿದರಾದರೂ ಲೆಕ್ಕಿಸದ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಕಟ್ಟಡ  ನೆಲಕ್ಕುರುಳಿಸಿದರು. ಈ ವೇಳೆ ಮಹಿಳೆಯೊಬ್ಬರು ಅಧಿಕಾರಿಗಳೊಂದಿಗೆ ಗಲಾಟೆ ಮಾಡಿದರು.
ಪೊಲೀಸರು ಮಧ್ಯ ಪ್ರವೇಶಿಸಿ ಸರ್ಕಾರದ ನಿಯಮಾನುಸಾರ ಕೆಲಸ ಮಾಡುತ್ತಿದ್ದು ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮಾಲೀಕರು- ಅಧಿಕಾರಿಗಳ ನಡುವಿನ ವಾಗ್ವಾದದಿಂದ ಕೆಲ ಸಮಯ ಆತಂಕದ ವಾತವರಣ ಸೃಷ್ಟಿ ಆಗಿತ್ತು.
2024 ಡಿಸೆಂಬರ್‌ನಲ್ಲಿ ರಸ್ತೆ ಅಗಲೀಕರಣ ಸಂಬಂಧ ರಸ್ತೆ ತೆರವಿಗೆ ಅಗಲ ತೆರವುಗೊಳಿಸಲು ಗುರುತಿಸಲಾಗಿತ್ತು. ಪಟ್ಟಣ ಪಂಚಾಯಿತಿ ಅಧಿಕಾರಿ ಲೋಕ್ಯಾನಾಯ್ಕ ರಸ್ತೆಗೊಳಪಡುವ ಎಲ್ಲ ಮಾಲಿಕರಿಗೆ ಮೂರು ಬಾರಿ ನೋಟಿಸ್ ನೀಡಿ ತೆರವಿಗೆ  ಸೂಚನೆ ನೀಡಿದ್ದರು.
ಅನಧಿಕೃತ ಕಟ್ಟಡಗಳ ತೆರವಿಗೆ ಉಪ ವಿಭಾಗಾಧಿಕಾರಿ ಸಂತೋಷ್‌ಕುಮಾರ್ ನೇತೃತ್ವದಲ್ಲಿ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ,  ಲೋಕೋಪಯೋಗಿ ಇಲಾಖೆ ಇಂಜನಿಯರ್ ನಾಗರಾಜ್, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು  ಎರಡು ದಿನಗಳಿಂದಲೂ ಪಟ್ಟಣದಲ್ಲಿ ಜೆಸಿಬಿಗಳ ಸದ್ದು ಜೋರಾಗಿದೆ. 
ಕಟ್ಟಡ ಮಾಲೀಕರಿಗೆ ಎಚ್ಚರಿಕೆ
ಕೆಲವರು ರಸ್ತೆ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ದೇವೇಂದ್ರಪ್ಪ  ಮಳಿಗೆಗಳ ಮಾಲೀಕರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ನೂರಾರು ವರ್ಷಗಳಿಂದ ರಸ್ತೆ ವಿಸ್ತರಣೆ ಆಗದೆ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಅಪಘಾತದಲ್ಲಿ ಕೆಲವರು ಮೃತಪಟ್ಟು ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಮನವರಿಕೆ ಮಾಡಿಕೊಟ್ಟರು.
ಮಾಲೀಕರು ಗುರುವಾರದೊಳಗೆ ಸ್ವಯಂ ಪ್ರೇರಿತರಾಗಿ ಒತ್ತುವರಿ  ತೆರವುಗೊಳಿಸಿಕೊಂಡರೆ ಒಳ್ಳೆಯದು ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಎಚ್ಚೆತ್ತ ಮಾಲೀಕರು ರಾತ್ರೋ ರಾತ್ರಿ ಜಾಗ  ತೆರವು ಮಾಡಿಕೊಳ್ಳಲು ಮುಂದಾಗಿದ್ದಾರೆ. 
ಶಾಸಕರಿಗೆ ಸಾಥ್ ನೀಡದ ಮಾಲೀಕರು
ಶಾಸಕ ಬಿ. ದೇವೇಂದ್ರಪ್ಪ ಚುನಾವಣೆ ಗೆದ್ದ ಕೂಡಲೇ ರಸ್ತೆ ವಿಸ್ತರಣೆಯ ಭರವಸೆ ನೀಡಿದ್ದರು.  ಒಂದೂವರೆ ವರ್ಷದಲ್ಲಿ ಕಾರ್ಯರೂಪಕ್ಕೂ ತಂದರು. ಕಟ್ಟಡ ತೆರವು ಮುನ್ನ ವರ್ತಕರ ಸಂಘದ ಅಧ್ಯಕ್ಷರು. ಸದಸ್ಯರ ಜತೆ ಸಭೆ ನಡೆಸಿ ಸಹಕರಿಸಲು ಮನವಿ ಕೂಡ ಮಾಡಿದ್ದರು. ಸಹಕಾರದ ಭರ ವಸೆ ನೀಡಿದ್ದ  ವರ್ತಕರು ವರ್ಷ ಕಳೆದರೂ ಮೌನಕ್ಕೆ ಶರಣಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net