ದಾವಣಗೆರೆ: ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪೇಪರ್‌ಲೆಸ್ ನೋಂದಣಿ ವಿರೋಧಿಸಿ ಜಿಲ್ಲಾ ದಸ್ತಾವೇಜು ಬರಹಗಾರರ ಅಸೋಸಿಯೇಷನ್‌ನಿಂದ ಮೇ.11ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾನಂದ್ ತಿಳಿಸಿದರು.
ಅಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬರಿಗೆ ಮಾಲಾರ್ಪಣೆ ಮಾಡಿ ಬೈಕ್ ರ‌್ಯಾಲಿ ಮೂಲಕ ಉಪ ನೋಂದಣಾಧಿಕಾರಿ ಕಚೇರಿಗೆ ತೆರಳಲಾಗುವುದು. ನಂತರ ಅಲ್ಲಿಂದ ಕಾಲ್ನಡಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಪೇಪರ್‌ಲೆಸ್ ನಾಮಾಂಕಿತದೊಂದಿಗೆ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದು ರಾಜ್ಯವ್ಯಾಪಿ ವಿಸ್ತರಣೆ ಆಗುವ ಸಾಧ್ಯತೆ ಇದೆ. ಈ ಪ್ರಕ್ರಿಯೆಯಲ್ಲಿ ನೋಂದಣಿಯಾಗುವ ದಸ್ತಾವೇಜಿನಲ್ಲಿ ಮಾರಾಟಗಾರರು/ ಖರೀದುದಾರರು ಮತ್ತು ಸಾಕ್ಷಿದಾರರ ಸಹಿ ಹಾಕುವ ಅವಕಾಶವಿಲ್ಲವಾಗಿದೆ. ಇದು ಸಾರ್ವಜನಿಕರ ಆಸ್ತಿ ಭದ್ರತೆ ಸಮಸ್ಯೆ ಕಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಾವು ದಸ್ತಾವೇಜನ್ನು ತಯಾರಿಸಿ ಕಾವೇರಿ 2.0 ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕಿದೆ. ಮಾರಾಟಗಾರರು/ ಖರೀದಿದಾರರ ಮತ್ತು ಸಾಕ್ಷಿಗಳ ಸಹಿ ಇಲ್ಲದೆ ಸಾರ್ವಜನಿಕರ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ನಂತರ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಒಟಿಪಿ ಪಡೆದು ಫೊಟೋ, ಹೆಬ್ಬೆಟ್ಟು ಪಡೆದರೆ ದಸ್ತಾವೇಜು ನೊಂದಣಿಯಾಗಲಿದೆ.
ಪೇಪರ್‌ಲೆಸ್ ನೋಂದಣಿ ಕಾರ್ಯದಲ್ಲಿ ಪತ್ರ ಬರಹಗಾರರ ಇ-ಸಹಿ ಇರುವುದಿಲ್ಲ. ಯಾರದೂ ಸಹಿ ಇಲ್ಲದೆ ನೋಂದಣಿಯಾದ ಪತ್ರ ಮುಂದೆ ತೊಂದರೆಯಾದಲ್ಲಿ ಕೋರ್ಟ್‌ನಲ್ಲಿ ಪರಿಶೀಲನೆಗೆ ಒಳಪಟ್ಟರೆ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಆಗಲಿದೆ. ದೃಢೀಕೃತ ಪ್ರತಿ ಇಲ್ಲದೆ ಬ್ಯಾಂಕ್ ಸಾಲ ಪಡೆಯಲು ಸಹ ಸಮಸ್ಯೆಯಾಗಲಿದೆ. ಕೂಡಲೇ ಈ ಪ್ರಕ್ರಿಯೆ ಕೈಬಿಟ್ಟು ಕಾವೇರಿ 2.0 ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ವಿ.ಇ. ಧರ್ಮರಾಜು ಮಾತನಾಡಿ ಇತರೆ ರಾಜ್ಯಗಳಲ್ಲಿ ಇರುವಂತೆಯೇ ಪೇಪರ್‌ಲೆಸ್ ಮಾಡಿದ್ದಾಗಿ ಕಂದಾಯ ಸಚಿವರು ಹೇಳುತ್ತಿದ್ದಾರೆ. ಆದರೆ ತಮಿಳುನಾಡಿನಲ್ಲಿ ಮಾರಾಟಗಾರರು/ ಖರೀದುದಾರರು ಮತ್ತು ಸಾಕ್ಷಿದಾರರ ಸಹಿ ಹಾಕುವ ಪದ್ಧತಿ ಈಗಲೂ ಇದೆ. ಇಂದು ಸೈಬರ್ ಅಪರಾಧ, ಹ್ಯಾಕರ್‌ಗಳ ಹಾವಳಿ ಹೆಚ್ಚಿರುವಾಗ ಕರ್ನಾಟಕದ ಪೇಪರ್‌ಲೆಸ್ ಮಾದರಿಯಿಂದ ಭೂಮಾಫಿಯಾ ದಂಧೆಗೆ ಅವಕಾಶ ಸಿಗಲಿದೆ. ನಕಲಿ ದಾಖಲೆ ಸೃಷ್ಟಿಸುವವರಿಗೆ ದಾರಿ ಮಾಡಿಕೊಟ್ಟಂತಾಗಲಿದೆ. ಮತ್ತೊಂದೆಡೆ ಪತ್ರ ಬರಹಗಾರರ ಉದ್ಯೋಗ ಕಡಿತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಡಿ.ಕೆ. ಸಂಗಮೇಶ್ ಎಲಿಗಾರ್ ಮಾತನಾಡಿ ಸರ್ಕಾರ ಏಕಾಏಕಿ ಸ್ಟಾಂಟ್ ಡ್ಯೂಟಿ ಶುಲ್ಕವನ್ನು ಏಕಾಏಕಿ ಶೇ.1ರಷ್ಟು ಏರಿಕೆ ಮಾಡಿತ್ತು. ಇದರಿಂದ ಒಂದೇ ದಿನದಲ್ಲಿ 860 ಕೋಟಿ ರೂ. ಶುಲ್ಕ ಆದಾಯವಾಗಿತ್ತು. ಸರ್ಕಾರ ಯೋಜನೆ ಜಾರಿಗೂ ಮುನ್ನ ಚರ್ಚಿಸುತ್ತಿಲ್ಲ. ಅನೇಕ ಮನವಿ ನೀಡಿದಾಗ್ಯೂ ಸರ್ಕಾರ ಸ್ಪಂದಿಸಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿ.ಆರ್. ಗಿರಿರಾಜು, ಎಸ್. ರಾಜಶೇಖರ್, ಕರಿಬಸಪ್ಪ ಬಳ್ಳಿ, ಕೆ. ಹನುಮಂತಪ್ಪ, ಬಿ.ಶಿವರಾಜ್ ಇತರರಿದ್ದರು.