ತಮಿಳುನಾಡಿಗೆ ಕಾವೇರಿ ನೀರು ಹರಿಸಲು ವಿರೋಧ

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಪ್ರಾಧಿಕಾರ ನೀಡಿದ ಆದೇಶ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ದಾವಣಗೆರೆ ತಾಲೂಕು ಸಮಿತಿ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿತು. ಮಂಡಲೂರು ವಿಶ್ವನಾಥ್, ದಿನೇಶ್ ದೊಡ್ಡಗೌಡ್ರು, ಎಸ್.ಜೆ. ಕಲ್ಲೇಶ್, ಡಿ.ಕೆ.ವೆಂಕಟೇಶ ಗುಡಾಳ್, ಜಿ.ಎಸ್. ಹಾಲೇಶ್, ಮಲ್ಲಿಕಾರ್ಜುನ ಇತರರಿದ್ದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಪ್ರಾಧಿಕಾರ ನೀಡಿದ ಆದೇಶ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ದಾವಣಗೆರೆ ತಾಲೂಕು ಸಮಿತಿ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿತು. ಮಂಡಲೂರು ವಿಶ್ವನಾಥ್, ದಿನೇಶ್ ದೊಡ್ಡಗೌಡ್ರು, ಎಸ್.ಜೆ. ಕಲ್ಲೇಶ್, ಡಿ.ಕೆ.ವೆಂಕಟೇಶ ಗುಡಾಳ್, ಜಿ.ಎಸ್. ಹಾಲೇಶ್, ಮಲ್ಲಿಕಾರ್ಜುನ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ತಾಲೂಕು ಘಟಕದ ಪ್ರತಿಭಟನೆ
  • ಸಿಎಂ ರಾಜ್ಯದ ರೈತರ ಹಿತ ಕಾಪಾಡಲು ಆಗ್ರಹ
  • ಸಿಡಬ್ಲುಆರ್‌ಸಿ ವಿತಂಡ ವಾದ ಕೈಬಿಡಲು ಒತ್ತಡ
ದಾವಣಗೆರೆ: ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ ಆದೇಶ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ದಾವಣಗೆರೆ ತಾಲೂಕು ಸಮಿತಿ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಕಾವೇರಿ ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಲು ಬಿಡುವುದಿಲ್ಲ ಎಂದು ರೈತ ಮುಖಂಡರು ೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಬೈಕ್‌ನಲ್ಲಿ ತೆರಳಿ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ತೀವ್ರ ಬರವಿದೆ. ಕೆಆರ್‌ಎಸ್ ಜಲಾಶಯದಲ್ಲಿ ಇನ್ನು 10-12 ಟಿಎಂಸಿ ನೀರು ಬಾಕಿ ಇದ್ದು ಇದರಲ್ಲಿ ಅರ್ಧದಷ್ಟು ಮಾತ್ರ ಬಳಕೆಗೆ ಸಿಗಲಿದೆ. ಹೀಗಿರುವಾಗ ತಮಿಳುನಾಡಿಗೆ 15 ದಿನಗಳ ಕಾಲ ನೀರು ಹರಿಸಲು ಆದೇಶಿಸಿದ ನಿರ್ಧಾರ ಅಸಮಂಜಸವಾಗಿದೆ. ಕೂಡಲೆ ಸರ್ಕಾರ ಸಿಡಬ್ಲುಆರ್‌ಸಿ ತೀರ್ಮಾನ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್ ಮಾತನಾಡಿ ಕರ್ನಾಟಕದಲ್ಲಿ ಎಲ್ಲೆಡೆ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬಿತ್ತನೆ ಪ್ರಮಾಣವೂ ಕಡಿಮೆಯಾಗಿದೆ. ರಾಜ್ಯದ ರೈತರು, ದನಕರುಗಳಿಗೆ ನೀರಿನ ಅಭಾವವಿರುವಾಗ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂಬ ನಿರ್ಧಾರ ಸರಿಯಲ್ಲ ಎಂದರು.
ನಮ್ಮ ರಾಜ್ಯದ ನೀರು ನಮ್ಮಲ್ಲಿ ಉಳಿಯಬೇಕು. ಮಳೆ ಹೆಚ್ಚಾಗಿ ಡ್ಯಾಂ ತುಂಬಿದ್ದರೆ ನೀರು ನೀಡಲು ಅಭ್ಯಂತರ ಇರಲಿಲ್ಲ. ಬರಗಾಲದ ಈ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ರಾಜ್ಯದ ರೈತರ ಹಿತ ಕಾಯಬೇಕು. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ರೈತರ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಸದಸ್ಯ ದಿನೇಶ್ ದೊಡ್ಡಗೌಡ್ರು ಮಾತನಾಡಿ ಕೆಆರ್‌ಎಸ್ ಡ್ಯಾಂ ಕಟ್ಟಿದಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇರಲಿಲ್ಲ. ಇತ್ತೀಚೆಗೆ ನೀರು ಹಂಚಿಕೆ ಬಗ್ಗೆ ಬರೆದುಕೊಂಡ ಹಾಗೆ ನೀರು ಹರಿಸುವ ನಿರ್ಧಾರ ಸರಿಯಲ್ಲ. ಬರ ಪರಿಸ್ಥಿತಿ ಅವಲೋಕಿಸಿ ಈ ಪ್ರಾಧಿಕಾರ ತೀರ್ಮಾನ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡ್ಯಾಂನಲ್ಲಿ ಈಗಿರುವ ನೀರು ಬೆಂಗಳೂರು, ಮೈಸೂರು, ಮಂಡ್ಯ ಭಾಗದ ಜನರಿಗೆ ಕುಡಿಯಲಷ್ಟೇ ಸೀಮಿತವಿದೆ. ಕರ್ನಾಟಕದಲ್ಲೇ ಶೇಖರಣೆ ಮಾಡಿದ ನೀರನ್ನು ನಮ್ಮ ರೈತರಿಗೆ ನೀಡದೆ ಪರರಾಜ್ಯದ ಬೆಳೆಗಾರರಿಗೆ ನೀಡಬೇಕೆಂಬ ಸಿಡಬ್ಲುಆರ್‌ಸಿ ವಿತಂಡ ವಾದ ಮಾಡುವುದು ಸರಿಯಲ್ಲ.
ಈ ಹಿಂದೆ ಬಂಗಾರಪ್ಪ ಸರ್ಕಾರದ ಮಾದರಿಯಲ್ಲೇ ಸುಗ್ರೀವಾಜ್ಞೆ ಮೂಲಕ ನೀರು ಹಂಚಿಕೆ ಮಾಡದಿರುವ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಗಟ್ಟಿ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಎಸ್.ಜೆ. ಕಲ್ಲೇಶ್, ಡಿ.ಕೆ.ವೆಂಕಟೇಶ ಗುಡಾಳ್, ಜಿ.ಎಸ್. ಹಾಲೇಶ್, ಮಲ್ಲಿಕಾರ್ಜುನ, ಚಂದ್ರಶೇಖರ್ ಕಡ್ಲೇಬಾಳ್, ರಾಜಣ್ಣ, ನಾಗನೂರು ಜೆ. ವೀರಣ್ಣ, ಸಿದ್ದನೂರು ರಮೇಶ್, ಮಂಜಣ್ಣ ಸಿದ್ದನೂರು. ಮಹೇಶ ಅತ್ತಿಗೆರೆ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net