ಪೇಪರ್‌ಲೆಸ್ ನೋಂದಣಿ ಪದ್ಧತಿಗೆ ವಿರೋಧ

ದಾವಣಗೆರೆಯಲ್ಲಿ ಸೋಮವಾರ, ಪೇಪರ್‌ಲೆಸ್ ನೋಂದಣಿ ವಿರೋಧಿಸಿ ಜಿಲ್ಲಾ ದಸ್ತಾವೇಜು (ಪತ್ರ) ಬರಹಗಾರರ ಸಂಘದಿಂದ ಪ್ರತಿಭಟನೆ ನಡೆಯಿತು. ಡಿ.ಕೆ. ಸಂಗಮೇಶ್ ಎಲಿಗಾರ್, ವಿ.ಇ. ಧರ್ಮರಾಜು, ಬಿ.ವಿ.ಶಿವಾನಂದ್, ಡಿ.ಆರ್. ಗಿರಿರಾಜು, ಎಸ್. ರಾಜಶೇಖರ್, ಕರಿಬಸಪ್ಪ ಬಳ್ಳಿ, ಕೆ. ಹನುಮಂತಪ್ಪ, ಕೆ. ಗುರುರಾಜ ರಾವ್, ಬಿ. ಶಿವರಾಜ್ ಇದ್ದರು.
ದಾವಣಗೆರೆಯಲ್ಲಿ ಸೋಮವಾರ, ಪೇಪರ್‌ಲೆಸ್ ನೋಂದಣಿ ವಿರೋಧಿಸಿ ಜಿಲ್ಲಾ ದಸ್ತಾವೇಜು (ಪತ್ರ) ಬರಹಗಾರರ ಸಂಘದಿಂದ ಪ್ರತಿಭಟನೆ ನಡೆಯಿತು. ಡಿ.ಕೆ. ಸಂಗಮೇಶ್ ಎಲಿಗಾರ್, ವಿ.ಇ. ಧರ್ಮರಾಜು, ಬಿ.ವಿ.ಶಿವಾನಂದ್, ಡಿ.ಆರ್. ಗಿರಿರಾಜು, ಎಸ್. ರಾಜಶೇಖರ್, ಕರಿಬಸಪ್ಪ ಬಳ್ಳಿ, ಕೆ. ಹನುಮಂತಪ್ಪ, ಕೆ. ಗುರುರಾಜ ರಾವ್, ಬಿ. ಶಿವರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ದಸ್ತಾವೇಜು ಬರಹಗಾರರ ಪ್ರತಿಭಟನೆ
  • ಡಿಸಿ, ಜಿಲ್ಲಾ ನೋಂದಣಾಧಿಕಾರಿಗೆ ಮನವಿ ಸಲ್ಲಿಕೆ
ದಾವಣಗೆರೆ : ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪೇಪರ್‌ಲೆಸ್ ನೋಂದಣಿ ವಿರೋಧಿಸಿ ಜಿಲ್ಲಾ ದಸ್ತಾವೇಜು (ಪತ್ರ) ಬರಹಗಾರರ ಸಂಘದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬೈಕ್ ರ‌್ಯಾಲಿ ಆರಂಭಿಸಿ ಉಪ ನೋಂದಣಾಧಿಕಾರಿ ಕಚೇರಿಗೆ ತೆರಳಿ, ಅಲ್ಲಿಂದ ಕಾಲ್ನಡಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ, ನಂತರ ಜಿಲ್ಲಾ ನೋಂದಣಾಧಿಕಾರಿ ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ, ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಪೇಪರ್‌ಲೆಸ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದು ರಾಜ್ಯವ್ಯಾಪಿ ವಿಸ್ತರಣೆ ಆಗುವ ಸಾಧ್ಯತೆ ಇದೆ. ಈ ಪ್ರಕ್ರಿಯೆಯಲ್ಲಿ ನೋಂದಣಿಯಾಗುವ ದಸ್ತಾವೇಜಿನಲ್ಲಿ ಮಾರಾಟಗಾರರು/ ಖರೀದಿದಾರರು ಮತ್ತು ಸಾಕ್ಷಿದಾರರ ಸಹಿ ಹಾಕುವ ಅವಕಾಶವಿಲ್ಲವಾಗಿದೆ. ಇದರಿಂದ ಸಾರ್ವಜನಿಕರ ಆಸ್ತಿ ಭದ್ರತೆ ಸಮಸ್ಯೆ ಕಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಾವು ದಸ್ತಾವೇಜನ್ನು ತಯಾರಿಸಿ ಕಾವೇರಿ 2.0 ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕಿದೆ. ಮಾರಾಟಗಾರರು/ ಖರೀದಿದಾರರ ಮತ್ತು ಸಾಕ್ಷಿಗಳ ಸಹಿ ಇಲ್ಲದೆ ಸಾರ್ವಜನಿಕರ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ನಂತರ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಒಟಿಪಿ ಪಡೆದು ಫೊಟೋ, ಹೆಬ್ಬೆಟ್ಟು ಪಡೆದರೆ ದಸ್ತಾವೇಜು ನೋಂದಣಿಯಾಗಲಿದೆ.
ಪೇಪರ್‌ಲೆಸ್ ನೋಂದಣಿ ಕಾರ್ಯದಲ್ಲಿ ಪತ್ರ ಬರಹಗಾರರ ಇ-ಸಹಿ ಇರುವುದಿಲ್ಲ. ಯಾರದೂ ಸಹಿ ಇಲ್ಲದೆ ನೋಂದಣಿಯಾದ ಪತ್ರ ಮುಂದೆ ತೊಂದರೆಯಾದಲ್ಲಿ ಕೋರ್ಟ್‌ನಲ್ಲಿ ಪರಿಶೀಲನೆಗೆ ಒಳಪಟ್ಟರೆ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಆಗಲಿದೆ. ದೃಢೀಕೃತ ಪ್ರತಿ ಇಲ್ಲದೆ ಬ್ಯಾಂಕ್ ಸಾಲ ಪಡೆಯಲು ಸಹ ಸಮಸ್ಯೆಯಾಗಲಿದೆ. ಕೂಡಲೆ ಈ ಪ್ರಕ್ರಿಯೆ ಕೈಬಿಟ್ಟು ಕಾವೇರಿ 2.0 ವ್ಯವಸ್ಥೆಯನ್ನೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಇತರ ರಾಜ್ಯಗಳಲ್ಲಿ ಇರುವಂತೆಯೆ ಪೇಪರ್‌ಲೆಸ್ ಮಾಡಿದ್ದಾಗಿ ಕಂದಾಯ ಸಚಿವರು ಹೇಳುತ್ತಿದ್ದಾರೆ. ಆದರೆ ತಮಿಳುನಾಡಿನಲ್ಲಿ ಮಾರಾಟಗಾರರು/ ಖರೀದಿದಾರರು ಮತ್ತು ಸಾಕ್ಷಿದಾರರ ಸಹಿ ಹಾಕುವ ಪದ್ಧತಿ ಈಗಲೂ ಇದೆ. ಇಂದು ಸೈಬರ್ ಅಪರಾಧ, ಹ್ಯಾಕರ್‌ಗಳ ಹಾವಳಿ ಹೆಚ್ಚಿರುವಾಗ ಕರ್ನಾಟಕದ ಪೇಪರ್‌ಲೆಸ್ ಮಾದರಿಯಿಂದ ಭೂಮಾಫಿಯಾ ದಂಧೆಗೆ ಅವಕಾಶ ಸಿಗಲಿದೆ. ನಕಲಿ ದಾಖಲೆ ಸೃಷ್ಟಿಸುವವರಿಗೆ ದಾರಿ ಮಾಡಿಕೊಟ್ಟಂತಾಗಲಿದೆ. ಮತ್ತೊಂದೆಡೆ ಪತ್ರ ಬರಹಗಾರರ ಉದ್ಯೋಗ ಕಡಿತವಾಗಲಿದೆ ಎಂದರು.
ನಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 25ರಂದು ಬೆಂಗಳೂರಿನ ಸ್ವಾತಂತ್ರೃ ಉದ್ಯಾನದ ಬಳಿ ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸಂಘದ ರಾಜ್ಯಾಧ್ಯಕ್ಷ ಡಿ.ಕೆ. ಸಂಗಮೇಶ್ ಎಲಿಗಾರ್, ಜಿಲ್ಲಾ ಉಪಾಧ್ಯಕ್ಷ ವಿ.ಇ. ಧರ್ಮರಾಜು, ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾನಂದ್, ಡಿ.ಆರ್. ಗಿರಿರಾಜು, ಎಸ್. ರಾಜಶೇಖರ್, ಕರಿಬಸಪ್ಪ ಬಳ್ಳಿ, ಕೆ. ಹನುಮಂತಪ್ಪ, ಕೆ. ಗುರುರಾಜ ರಾವ್, ಬಿ. ಶಿವರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net