ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವಿರೋಧ

 ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವಿರೋಧಿಸಿ, ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಗ್ರಾಮಸ್ಥರು, ಶಾಲಾಮಕ್ಕಳು ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವಿರೋಧಿಸಿ, ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಗ್ರಾಮಸ್ಥರು, ಶಾಲಾಮಕ್ಕಳು ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಠಲಾಪುರ, ನಲ್ಕುಂದ ಗ್ರಾಮಸ್ಥರ ಪ್ರತಿಭಟನೆ
  • ಕೌಶಲ ನೆಪದಲ್ಲಿ ಕೂಲಿಕಾರರಾಗಿಸುವ ಹುನ್ನಾರ
  • ಸರ್ಕಾರಿ ಶಾಲೆ ಮುಚ್ಚದಂತೆ ಶಾಸಕರ ಭೇಟಿಗೆ ನಿರ್ಧಾರ
ದಾವಣಗೆರೆ: ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವಿರೋಧಿಸಿ, ತಾಲೂಕಿನ ವಿಠಲಾಪುರ ಮತ್ತು ನಲ್ಕುಂದ ಗ್ರಾಮಸ್ಥರು ಶುಕ್ರವಾರ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಲ್ಕುಂದ, ವಿಠಲಾಪುರ, ಒಂಟಿಹಾಳ್, ಶಂಕರನಹಳ್ಳಿ, ಅಣಬೇರು ಉರ್ದು ಶಾಲೆಯನ್ನು ಅಣಬೇರು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸುವ ನಿರ್ಧಾರ ಕೈಬಿಡಬೇಕು ಎಂದು ಎರಡೂ ಗ್ರಾಮಸ್ಥರು ಆಗ್ರಹಿಸಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ ರಾಜ್ಯಾದ್ಯಂತ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವಿರೋಧವಿದ್ದಾಗ್ಯೂ ಯಾದಗಿರಿ ಜಿಲ್ಲೆಯ ಯಡ್ರಾಮಿಯಲ್ಲಿ ಕಲ್ಯಾಣ ಕರ್ನಾಟಕದ 300 ಕೆಪಿಎಸ್ ಶಾಲೆಗೆ ಸಿಎಂ ಚಾಲನೆ ನೀಡಿದ್ದಾರೆ. ನಾವು ಬಡವರು, ಕೂಲಿ ಕಾರ್ಮಿಕರ ಪರ ಎನ್ನುವ ಸರ್ಕಾರ, ಸರ್ಕಾರಿ ಶಾಲೆಯನ್ನು ನೆರೆ ಊರಿಗೆ ಕಳಿಸಿ ಉನ್ನತೀಕರಿಸುವ ಹೆಸರಿನಲ್ಲಿ ಶಾಲೆಯನ್ನು ಮುಚ್ಚುವುದು ಸರಿಯೆ? ಎಂದು ಪ್ರಶ್ನಿಸಿದರು.
ಒಂದೇ ಮಗುವಿದ್ದರೂ ಶಾಲೆ ಮುಚ್ಚುವುದಿಲ್ಲ, ಗ್ರಾಮ ಪಂಚಾಯಿತಿಗೆ ಒಂದು ಶಾಲೆಯನ್ನು ಮಾಡಿದರೆ ಶಾಲೆ ಮುಚ್ಚಿದಂತಾಗುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳುತ್ತಾರೆ. ಮಕ್ಕಳಿಗೆ ಉಚಿತ ಸಾರಿಗೆ ನೀಡುವುದಾಗಿ ಹೇಳುವ ಸಚಿವರು, ಎಸ್‌ಡಿಎಂಸಿಯು ಸಾರಿಗೆ ವ್ಯವಸ್ಥೆ ನಿರ್ವಹಣೆ ಮಾಡಲು ನಿರ್ದೇಶಿಸಿದ್ದು ದ್ವಂದ್ವ ನೀತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರನೇ ತರಗತಿಯಿಂದಲೇ ಕೌಶಲ ಕಲಿಸುವ ನೆಪದಲ್ಲಿ ಅಡಕೆ ಸುಲಿಯುವುದು, ಗಾರ್ಮೆಂಟ್, ಪ್ಲಂಬರ್, ಎಲೆಕ್ಟ್ರಿಕಲ್ ಕೆಲ ಕಲಿಸಿ ಕೂಲಿಕಾರರನ್ನು ಮಾಡಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಶಾಲೆಗಳ ವಿಲೀನಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ವಿಠಲಾಪುರ ಗ್ರಾಪಂ ಮಾಜಿ ಅಧ್ಯಕ್ಷ ಮಹಾರುದ್ರಪ್ಪ ಮಾತನಾಡಿ ಸರ್ಕಾರ ಕೆಟ್ಟ ನಿರ್ಧಾರವನ್ನು ಸರ್ಕಾರ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡಲಿದ್ದೇವೆ. ದಾವಣಗೆರೆ ಜಿಲ್ಲೆಯ ಎಲ್ಲಾ ಶಾಸಕರಿಗೂ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರವನ್ನು ಕೈ ಬಿಡುವಂತೆ ಆಗ್ರಹಿಸುತ್ತೇವೆ ಎಂದರು.
ನಲ್ಕುಂದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಕಾರ್ಯದರ್ಶಿ ಆಂಜನೇಯ ಮಾತನಾಡಿ ನಮ್ಮೂರ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ. ನಲ್ಕುಂದದಿಂದ ಅಣಬೇರಿಗೆ ಮಕ್ಕಳನ್ನು ಕಳಿಸಲು ಸಾಧ್ಯವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಅರುಣ್, ಆಂಜನೇಯ, ರಾಜಣ್ಣ, ದೀಪಾ, ಹಾಲಮ್ಮ, ಮಂಜುನಾಥ್, ಮಾರುತಿ, ನಾಗೇಂದ್ರ, ಕವಿತಾ, ಶ್ವೇತಾ, ಸುಜಾತಾ, ಸಿಂಧು, ರಾಜಶೇಖರಪ್ಪ, ಕಮಲ ಹಾಗೂ ಉಭಯ ಗ್ರಾಮಸ್ಥರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net