ಹುಬ್ಬಳ್ಳಿಯ ಮಾನ್ಯಾಳ ಮರ್ಯಾದೆ ಹತ್ಯೆ ಖಂಡಿಸಿ ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮಂಜುನಾಥ ಕುಂದುವಾಡ, ಎಚ್. ಮಲ್ಲೇಶ್, ಲಿಂಗರಾಜು ಎಂ. ಗಾಂಧಿನಗರ, ಲಕ್ಷ್ಮಣ್ ಕೊಡಗನೂರು, ಬಿ.ಎಂ. ಹನುಮಂತಪ್ಪ ಇತರರಿದ್ದರು.
ದಾವಣಗೆರೆ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದ ಮಾನ್ಯಾಳ ಮರ್ಯಾದೆ ಹತ್ಯೆ ಖಂಡಿಸಿ ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತ್ತದಿಂದ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಭಾರತೀಯ ನಾಗರೀಕ ಸಮಾಜದಲ್ಲಿ ಜಾತಿ ಆಧಾರಿತ ಕ್ರೌರ್ಯ, ಮತೀಯವಾದಿ ಹಿಂಸೆಗಳು ಹೆಚ್ಚುತ್ತಿದೆ. ಹುಬ್ಬಳ್ಳಿ ತಾಲೂಕಿನಲ್ಲಿ
ಅಂತರ್ಜಾತಿ ವಿವಾಹವಾಗಿದ್ದ ಕಾರಣಕ್ಕೆ, ಗರ್ಭಿಣಿ ಮಾನ್ಯಾಳನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಲ್ಲದೆ ಆಕೆಯ ಪತಿ ಸೇರಿ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಮಾನ್ಯಾಳನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕಾಶ್‌ಗೌಡ ಪಾಟೀಲ್ ಇತರರ ವಿರುದ್ಧ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅವರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಸಂತ್ರಸ್ತೆಯ ಗಂಡ, ಸಂಬಂಧಿಕರಿಗೆ ಸೂಕ್ತ ಪರಿಹಾರ ನೀಡಬೇಕು.
ಜಾತಿ ಮತೀಯವಾದಿ ಸಮಾಜಘಾತುಕರಿಂದ ಜೀವ ರಕ್ಷಣೆ ಒದಗಿಸಬೇಕು. ದಲಿತರ ಮೇಲಿನ ದೌರ್ಜನ್ಯಗಳ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ತೆರೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಾಧ್ಯಕ್ಷ ಮಂಜುನಾಥ ಕುಂದುವಾಡ,ಅಧ್ಯಕ್ಷ ಎಚ್. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಲಿಂಗರಾಜು ಎಂ. ಗಾಂಧಿನಗರ, ಕಾರ್ಯದರ್ಶಿ ಲಕ್ಷ್ಮಣ್ ಕೊಡಗನೂರು, ವಕೀಲ ಬಿ.ಎಂ. ಹನುಮಂತಪ್ಪ, ಮೈಲಾರಪ್ಪ, ಎಚ್.ನಿಂಗಪ್ಪ, ನಾಗರಾಜ್ ಚಿತ್ತಾನಹಳ್ಳಿ, ಸಮಾದೆಪ್ಪ ಶಾಮನೂರು ಇತರರಿದ್ದರು.