ದಾವಣಗೆರೆ :ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಗೊಳಿಸುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಸರ್ಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ, ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗೆ ಮನವಿ ಪತ್ರ ರವಾನಿಸಿದರು.
ರಾಜ್ಯದಲ್ಲಿ 45 ಲಕ್ಷ ಪಂಪ್‌ಸೆಟ್‌ಗಳಿದ್ದು, ಅವುಗಳ ಬಳಕೆದಾರರಿಗೆ ಇಲ್ಲಿಯ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿತ್ತು. ಖಾಸಗೀಕರಣ ಗೊಳಿಸಿದರೆ ಮೊಬೈಲ್ ಮತ್ತು ಟಿ.ವಿ.ಗಳಿಗೆ ಇರುವಂತೆ ಕರೆನ್ಸಿ ಹಾಕಿದರೆ ಮಾತ್ರ ಕೃಷಿ ಪಂಪ್‌ಸೆಟ್‌ಗಳು ಕೆಲಸ ಮಾಡಲಿವೆ ಎಂದು ತಿಳಿಸಿದರು.
ರೈತರು ವಿದ್ಯುತ್ ಬಿಲ್ ಪಾವತಿ ಮಾಡಿ, ಕೃಷಿ ಉತ್ಪನ್ನಗಳನ್ನು ಬೆಳೆಯಲು ಸಾಧ್ಯವಿಲ್ಲ. ದೊಡ್ಡ ಕಂಪನಿಗಳನ್ನು ಸರ್ಕಾರಗಳೇ ತಂದು ನಿಲ್ಲಿಸುತ್ತವೆ. ರೈತರಿಂದ ಭೂಮಿಯನ್ನು ಕಿತ್ತು, ಬಂಡವಾಳಶಾಹಿಗಳಿಗೆ ಕೊಡುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಡವಾಳಶಾಹಿಗಳಿಗೆ ನೀಡಿದರೆ ಅವರಿಗೆ ರಸ್ತೆ, ವಿದ್ಯುತ್ ಮತ್ತು ಮೂಲಸೌಕರ್ಯಗಳನ್ನು ತುರ್ತಾಗಿ ಅಳವಡಿಸಿ ಕೊಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಕೋಟ್ಯಂತರ ರೂ.ಗಳ ಪಕ್ಷನಿಧಿಯನ್ನು ಕೊಡುತ್ತಾರೆಂಬ ಲಾಭದ ಚಿಂತನೆ ಇದರ ಹಿಂದಿದೆ. ದೇಶದ 148 ಕೋಟಿ ಜನರ ವಿಶ್ವಾಸವನ್ನು ಕಳೆದುಕೊಂಡರೂ ಚಿಂತೆಯಿಲ್ಲ, ಬಂಡವಾಳ ನೀಡುವ 137 ಶ್ರೀಮಂತ ಉದ್ದಿಮೆಗಳಿಗೆ ಸಹಾಯ ಮಾಡಿಕೊಡಬೇಕೆಂಬುದು ಆಡಳಿತ ನಡೆಸುವವರ ಉದ್ದೇಶವಾಗಿದೆ ಎಂದು ತಿಳಿಸಿದರು.
ಗೃಹಬಳಕೆ ವಿದ್ಯುದ್ದೀಪಗಳ ಗ್ರಾಹಕರು, ಸಣ್ಣ ಉದ್ದಿಮೆಗಳು, ಹೋಟೆಲ್ ಮಾಲೀಕರು, ವಿದ್ಯುತ್ ಬಳಸುವ ಎಲ್ಲ ಗ್ರಾಹಕರಿಗೂ ಇದರ ದುಷ್ಪರಿಣಾಮ ಕ್ರಮೇಣವಾಗಿ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ತಿಂಗಳ 23ರ ವರೆಗೆ ತಕರಾರು ಸಲ್ಲಿಸಲು ಸರ್ಕಾರ ಗಡುವು ನೀಡಿದೆ. 26ರಂದು ಅನುಮೋದನೆ ಮಾಡಲು ಉದ್ದೇಶಿಸಿದೆ. ಇದನ್ನು ತಕ್ಷಣವೇ ನಿಲ್ಲಿಸಿ, ಸಾರ್ವಜನಿಕರು, ಸಣ್ಣ ಉದ್ದಿಮೆಗಳು, ವಿದ್ಯುತ್ ಬಳಕೆದಾರರ ಅಹವಾಲುಗಳನ್ನು ಪಡೆದು, ಸತ್ಯಾಸತ್ಯತೆಯನ್ನು ಪಾರದರ್ಶಕವಾಗಿ ಪರಿಶೀಲಿಸಿ, ಸರ್ಕಾರಗಳು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.