ಹರಿಹರ ತಾಲೂಕು ಷಂಶಿಪುರ ಗ್ರಾಮದಲ್ಲಿ ಗುರುವಾರ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪೂಜಾ ನಂದಿಹಳ್ಳಿ, ಅನಿಲ್, ರೇವಣಸಿದ್ದಪ್ಪ ಎಸ್.ಜಿ, ವಿಜಯ ಕುಮಾರ, ಕೆಂಚಮ್ಮ, ರಾಜಪ್ಪ ಮರಾಠಿ, ಗುರುಮೂರ್ತಿ, ಕಾಂತೇಶ, ಚಂದ್ರಶೇಖರ್ ಇದ್ದರು.
ದಾವಣಗೆರೆ :ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಊರಿನ ಶಾಲೆ ಮುಚ್ಚುವುದನ್ನು ವಿರೋಧಿಸಿ ಹರಿಹರ ತಾಲೂಕು ಸಲಗನಹಳ್ಳಿ ಮತ್ತು ಷಂಶಿಪುರ ಗ್ರಾಮಸ್ಥರು ಎಐಡಿಎಸ್‌ಒ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಷಂಶಿಪುರ ಗ್ರಾಮದ ದೇವಸ್ಥಾನದ ಮುಂದೆ ಸೇರಿದ ಗ್ರಾಮಸ್ಥರು ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿದರು.
ಷಂಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 80 ವರ್ಷಗಳು ತುಂಬಿವೆ. ಶಾಲೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸರ್ಕಾರ ಅಭಿವೃದ್ಧಿಗೆ ಕೊಡುಗೆ ನೀಡಬೇಕಿತ್ತು. ಆದರೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಊರಿನ ಶಾಲೆಯನ್ನು ಮುಚ್ಚಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ಊರಿನಲ್ಲಿ ಶಾಲೆಗಳಿದ್ದರೆ ಬಡ ಮಕ್ಕಳು ಜ್ಞಾನಾರ್ಜನೆ ಮಾಡುತ್ತಾರೆ. ಪ್ರಪಂಚವನ್ನು ವಸ್ತುನಿಷ್ಠವಾಗಿ ಅರಿಯುವ ಸಾಮರ್ಥ್ಯವನ್ನು ಗಳಿಸಿ ಸಮಸ್ಯೆಗಳನ್ನು ಕಂಡಾಗ ಸರ್ಕಾರಗಳನ್ನು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆಗಳಿಗೆ ಸರ್ಕಾರವು ಹೆದರುತ್ತಿದೆ ಎಂದು ಹೇಳಿದರು.
ಸರ್ಕಾರಕ್ಕೆ ಓದಿದ ನಿರುದ್ಯೋಗಿಗಳು ಬೇಕಿಲ್ಲ, ಓದದೆ ಇರುವ ನಿರುದ್ಯೋಗಿಗಳಿದ್ದರೆ ಸರ್ಕಾರಕ್ಕೆ ಸಮಸ್ಯೆ ಕಡಿಮೆ. ಹಾಗಾಗಿ ಚಿಗುರುವ ಮೊಳಕೆಯನ್ನು ಹೊಸಕಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಲಗನಹಳ್ಳಿ ಪ್ರತಿಭಟನೆ ಉದ್ದೇಶಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯ ಅನಿಲ್ ಮಾತನಾಡಿದರು. ಇಂದು ಹಸಿವು, ಬಡತನ, ನಿರುದ್ಯೋಗ ಹಾಗೂ ರೈತರ ಆತ್ಮಹತ್ಯೆ ಸೇರಿ ಅನೇಕ ಸವಾಲುಗಳನ್ನು ದೇಶ ಎದುರಿಸುತ್ತಿದೆ. ಪ್ರತಿದಿನ 5 ಸಾವಿರಕ್ಕೂ ಅಧಿಕ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಿ ಕೇವಲ ಗ್ರಾಮ ಪಂಚಾಯಿತಿಗೆ ಒಂದರಂತೆ 6 ಸಾವಿರ ಮ್ಯಾಗ್ನೆಟ್ ಶಾಲೆಗಳನ್ನು ಹೊಸದಾಗಿ ಕಟ್ಟಲಾಗುತ್ತಿದೆ. ಈಗ ಇರುವ ಶಾಲೆಗಳ ಅಭಿವೃದ್ಧಿಗೆ ಮ್ಯಾಗ್ನೆಟ್ ಯೋಜನೆಯ ಹಣವನ್ನು ಬಳಸಬಾರದೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎಂದರು.
ಷಂಶಿಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರೇವಣಸಿದ್ದಪ್ಪ ಎಸ್.ಜಿ, ಸಲಗನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಜಯ ಕುಮಾರ ಮಾತನಾಡಿದರು.
ಕೆಂಚಮ್ಮ, ರಾಜಪ್ಪ ಮರಾಠಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಗುರುಮೂರ್ತಿ, ಗ್ರಾಮಸ್ಥರಾದ ಕಾಂತೇಶ, ಚಂದ್ರಶೇಖರ್, ಮಹೇಂದ್ರಪ್ಪ, ಎಚ್.ಎಸ್. ಶ್ರೀನಿವಾಸ, ಪಿ.ಎನ್. ಮೌನೇಶ, ಲತಾ ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.