ವಹಿವಾಟಿನ ಲೆಕ್ಕ ಕೊಟ್ಟು ಕಚೇರಿ ಬಾಗಿಲು ತೆರೆಯಿರಿ

Transaction accounting
Transaction accounting
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿಕರ ಆಗ್ರಹ
  • ದೇವನಗರಿ ರೈತ ಉತ್ಪಾದಕರ ಕಂಪನಿಗೆ ಬೀಗ ಜಡಿದು ಪ್ರತಿಭಟನೆ
ಮಾಯಕೊಂಡ: ಹುಚ್ಚವ್ವನಹಳ್ಳಿ ದೇವನಗರಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯಲ್ಲಿ ನಡೆದಿರುವ ವ್ಯಾಪಾರ ವಹಿವಾಟಿನ ಸಂಪೂರ್ಣ ಲೆಕ್ಕ ನೀಡುವವರೆಗೂ ಯಾವುದೇ ಕಾರಣಕ್ಕೂ ಕಚೇರಿ ಬಾಗಿಲು ತೆರೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿ ಕಂಪನಿಯ ನಿರ್ದೇಶಕರು, ಷೇರುದಾರ ರೈತರು ಹಾಗೂ ಸಾರ್ವಜನಿಕರು ಶನಿವಾರ ಕಂಪನಿಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಕಂಪನಿಯ ನಿರ್ದೇಶಕ ವಿ.ಎನ್. ಪ್ರಕಾಶ್ ಮಾತನಾಡಿ, ಹುಚ್ಚವ್ವನಹಳ್ಳಿ ಗ್ರಾಮದಲ್ಲಿ 2017ರಲ್ಲಿ ಈ ದೇವನಗರಿ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಪ್ರಾರಂಭಗೊಂಡಿತ್ತು. ಸುಮಾರು ಆರೂವರೆ ವರ್ಷಗಳ ಕಾಲ ರೈತರಿಗೆ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ, ಪ್ಲಾಸ್ಟಿಕ್ ಹಾಗೂ ಕಬ್ಬಿಣದ ಪೈಪ್‌ಗಳು ಸೇರಿ ಕೃಷಿ ಪರಿಕರಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಕಳೆದ 2 ವರ್ಷಗಳಿಂದ ಕಂಪನಿಗೆ ನಷ್ಟವಾಗಿದೆ ಎಂದು ನೆಪ ಹೇಳಿ ಏಕಾಏಕಿ ಬಾಗಿಲು ಹಾಕಲಾಗಿತ್ತು. ಈಗ ಪುನಃ ಆರಂಭಿಸಿದ್ದು, ಕಂಪನಿ ಪ್ರಾರಂಭದಿಂದ ಬಾಗಿಲು ಮುಚ್ಚುವವರೆಗೂ ಆಗಿರುವ ಒಟ್ಟು ವಹಿವಾಟಿನ ಸಂಪೂರ್ಣ ಲೆಕ್ಕವನ್ನು ಸಿಇಒ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಬಹಿರಂಗ ಸಭೆ ಕರೆದು ವಿವರ ಒದಗಿಸದಿದ್ದರೆ ಸಿಇಒ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಯುವ ಮುಖಂಡ ಎನ್. ಮೂರ್ತಿ ಮಾತನಾಡಿ, ಈ ಕಂಪನಿಯು ಸುಮಾರು 1,000 ರೈತ ಸದಸ್ಯರನ್ನು ಒಳಗೊಂಡಿದೆ. ಪ್ರತಿ ಸದಸ್ಯರಿಂದ ತಲಾ 1,000 ರೂ. ರಂತೆ ಸಂಗ್ರಹಿಸಿದ 10 ಲಕ್ಷ ರೂ. ಷೇರು ಹಣ ಹಾಗೂ ಸರ್ಕಾರದ 10 ಲಕ್ಷ ರೂ. ಸಹಾಯಧನ ಸೇರಿ ಒಟ್ಟು 20 ಲಕ್ಷ ರೂ. ಬಂಡವಾಳದಲ್ಲಿ ಇದು ಆರಂಭವಾಗಿತ್ತು. ಎರಡು ವರ್ಷಗಳಿಂದ ಬೀಗ ಬಿದ್ದಿದ್ದ ಕಚೇರಿಯನ್ನು, ಈಗ ಕಂಪನಿಯ ಅಧ್ಯಕ್ಷ ವಿ.ಜಿ. ರುದ್ರೇಶ್ ರೈತರ ಹಾಗೂ ನಿರ್ದೇಶಕರ ಗಮನಕ್ಕೆ ತರದೆ, ಲೆಕ್ಕವನ್ನೂ ನೀಡದೆ ಏಕಪಕ್ಷೀಯವಾಗಿ ಮತ್ತೆ ತೆರೆದು ವ್ಯಾಪಾರ ನಡೆಸಲು ಮುಂದಾಗಿರುವುದನ್ನು ವಿರೋಧಿಸುತ್ತೇವೆ ಎಂದರು.
ನಿರ್ದೇಶಕ ಜಿ.ಎಂ. ಕಲ್ಲೇಶ್ ಮಾತನಾಡಿ, ಈ ಕಂಪನಿ ವ್ಯಾಪ್ತಿಗೆ ಮಾಯಕೊಂಡ, ಹೆದ್ನೇ, ಎಚ್. ರಾಂಪುರ, ಎಚ್. ಬಸವಪುರ, ನಲ್ಕುಂದ, ಕ್ಯಾತನಹಳ್ಳಿ, ಹಿಂಡಿಸಕಟ್ಟೆ, ಎಚ್. ವಡ್ಡರಹಟ್ಟಿ ಸೇರಿ ಹಲವು ಗ್ರಾಮಗಳ ರೈತರಿದ್ದಾರೆ. ರೈತರ ವಂತಿಕೆ ಹಣ ಹಾಗೂ ಸರ್ಕಾರದ ಸಬ್ಸಿಡಿಯಲ್ಲಿ ಎರಡು ಟ್ರ್ಯಾಕ್ಟರ್‌ಗಳು ಹಾಗೂ ಉಳುಮೆಗೆ ಬೇಕಾದ ರೋಟವೇಟರ್, ಕಲ್ಟಿವೇಟರ್, ಬಲರಾಮ ನೇಗಿಲು, ವಾಟರ್ ಟ್ಯಾಂಕರ್ ಸೇರಿ ಇತರ ಸಾಮಗ್ರಿಗಳನ್ನು ಖರೀದಿಸಲಾಗಿತ್ತು. ಕಂಪನಿ ಬಂದ್ ಆದಾಗಿನಿಂದ ಇವುಗಳನ್ನು ಶೆಡ್ಡಿನಲ್ಲಿ ನಿಲ್ಲಿಸಲಾಗಿದ್ದು, ಇವುಗಳ ಪ್ರಸ್ತುತ ಸ್ಥಿತಿಗತಿಯ ಬಗ್ಗೆಯೂ ಸಿಇಒ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ರೈತ ಸದಸ್ಯ ಎಂ.ಕೆ. ತಿಪ್ಪೇಸ್ವಾಮಿ ಕೂಡ ಲೆಕ್ಕ ನೀಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಗತಿಪರ ಕೃಷಿಕರಾದ ಹೆದ್ನೇ ವಿಜಯಕುಮಾರ್, ಮಾಯಕೊಂಡ ಎಂ.ಜಿ. ಗುರುನಾಥ್, ಪಿಸಿ ಸಂತೋಷ್, ಡಿ. ದಯಾನಂದ್, ಎಚ್.ಟಿ. ಹನುಮಂತು, ರಾಜಪ್ಪ, ಮಂಜಪ್ಪ, ನಾಗರಾಜ್, ಪ್ರಶಾಂತ್, ಮಹೇಶ್, ಕಲ್ಲೇಶ್ ಇತರರಿದ್ದರು.
ಹುಚ್ಚವ್ವನಹಳ್ಳಿ ದೇವನಗರಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ವಹಿವಾಟಿನ ಲೆಕ್ಕಕ್ಕೆ ಆಗ್ರಹಿಸಿ ನಿರ್ದೇಶಕರು ಹಾಗೂ ರೈತರು ಶನಿವಾರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಜಿ.ಎಂ. ಕಲ್ಲೇಶ್, ವಿ.ಎನ್. ಪ್ರಕಾಶ್, ಹೆದ್ನೇ ವಿಜಯಕುಮಾರ್, ಎನ್. ಮೂರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net